ಬಿಜೆಪಿ ಚುನಾವಣಾ ಪ್ರಣಾಳಿಕೆಗಾಗಿ ‘ಸಂಕಲ್ಪ ಪತ್ರ’ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಚಾಲನೆ

| Published : Mar 16 2024, 01:46 AM IST

ಬಿಜೆಪಿ ಚುನಾವಣಾ ಪ್ರಣಾಳಿಕೆಗಾಗಿ ‘ಸಂಕಲ್ಪ ಪತ್ರ’ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ದ.ಕ. ಲೋಕಸಭಾ ಕ್ಷೇತ್ರದಿಂದ 50,000 ಸಲಹೆಗಳನ್ನು ನಿರೀಕ್ಷೆ ಮಾಡಿದ್ದು ‘ನಿಮ್ಮ ಸಲಹೆ ನಮ್ಮ ಸಂಕಲ್ಪ’ ಎನ್ನುವ ನಿಟ್ಟಿನಲ್ಲಿ ಇವತ್ತು ತಮ್ಮ ಸಲಹೆಗಳನ್ನು ಪೆಟ್ಟಿಗೆಗೆ ಹಾಕುವುದರೊಂದಿಗೆ ಸಂಕಲ್ಪ ಪತ್ರಕ್ಕೆ ಚಾಲನೆ ನೀಡಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಮಂಗಳೂರು2024ರ ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆ ರೂಪಿಸಲು ದ.ಕ.ಜಿಲ್ಲಾ ಬಿಜೆಪಿಯಿಂದ ‘ಸಂಕಲ್ಪ ಪತ್ರ’ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಮಂಗಳೂರಿನಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಸಮಾರಂಭದಲ್ಲಿ ದ.ಕ. ಬಿಜೆಪಿ ಪ್ರಣಾಳಿಕೆ ಸಮಿತಿ ಸಂಚಾಲಕ ಸಿಎ ಶಾಂತಾರಾಮ ಶೆಟ್ಟಿ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌, ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್‌ ಚೌಟ ಅವರು ಸಂಕಲ್ಪ ಪತ್ರ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಸಿಎ ಶಾಂತಾರಾಮ ಶೆಟ್ಟಿ, ದೇಶದ 145 ಕೋಟಿ ಜನರ ಆಶೋತ್ತರಗಳನ್ನು ಗಮನದಲ್ಲಿರಿಸಿಕೊಂಡು ಕನಿಷ್ಟ ಒಂದು ಕೋಟಿಗೂ ಹೆಚ್ಚು ಸಲಹೆಗಳನ್ನು ಪಡೆಯುವ ಗುರಿಯನ್ನು ಪಕ್ಷ ಹೊಂದಿದೆ. ಈ ನಿಟ್ಟಿನಲ್ಲಿ ದ.ಕ. ಲೋಕಸಭಾ ಕ್ಷೇತ್ರದಿಂದ 50,000 ಸಲಹೆಗಳನ್ನು ನಿರೀಕ್ಷೆ ಮಾಡಿದ್ದು ‘ನಿಮ್ಮ ಸಲಹೆ ನಮ್ಮ ಸಂಕಲ್ಪ’ ಎನ್ನುವ ನಿಟ್ಟಿನಲ್ಲಿ ಇವತ್ತು ತಮ್ಮ ಸಲಹೆಗಳನ್ನು ಪೆಟ್ಟಿಗೆಗೆ ಹಾಕುವುದರೊಂದಿಗೆ ಸಂಕಲ್ಪ ಪತ್ರಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.

ಇದೇ ರೀತಿ ದ.ಕ. ಜಿಲ್ಲೆಯ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಒಂದು ತಿಂಗಳ ಕಾಲ ಸಲಹೆಗಳನ್ನು ಸ್ವೀಕರಿಸಲಾಗುವುದು. ಇಲ್ಲಿ ಬಂದ ಎಲ್ಲ ಸಲಹೆಗಳನ್ನು ಸಂಕಲ್ಪ ಪತ್ರದಲ್ಲಿ ಜೋಡಿಸಿ ಅದನ್ನು ಕೇಂದ್ರ ಬಿಜೆಪಿ ಕಾರ್ಯಾಲಯಕ್ಕೆ ಕಳುಹಿಸಲಾಗುವುದು. ಜನರ ಅನುಕೂಲಕ್ಕಾಗಿ ಎಲ್ಲ ಸಲಹೆಗಳನ್ನು ಸಂಕಲ್ಪ ಪತ್ರದ ಪೆಟ್ಟಿಗೆಯಲ್ಲಿ ಹಾಕಲು ಅನಾನುಕೂಲವಾದಲ್ಲಿ ನಮೋ (NAMO) ಅಪ್ಲಿಕೇಶನ್ ಅಥವಾ ಮಿಸ್ ಕಾಲ್ ಸಂಖ್ಯೆ ಸೇರಿದಂತೆ ಮೂರು ರೀತಿಗಳಲ್ಲಿ ಸಲಹೆಗಳನ್ನು ತಲುಪಿಸಬಹುದು.ಮಿಸ್ ಕಾಲ್ ಸಂಖ್ಯೆ 9090902024 ಮೂಲಕವೂ ಸಲಹೆ ನೀಡಬಹುದು ಎಂದರು.

ಜಿಲ್ಲಾದ್ಯಂತ ಶಾಪಿಂಗ್ ಮಾಲ್, ದೇವಸ್ಥಾನ, ಕಾಲೇಜು ಮುಂತಾದ ಜನನಿಬಿಡ ಸ್ಥಳದಲ್ಲಿ ಸಂಕಲ್ಪ ಪೆಟ್ಟಿಗೆಯನ್ನು ಇಡಲಾಗುತ್ತದೆ. ಇದರ ಜೊತೆಗೆ ಬಿಜೆಪಿ ಕಚೇರಿಯಿಂದ ‘ವಿಕಸಿತ ಭಾರತ ಮೋದಿ ಗ್ಯಾರಂಟಿ’ ವಿಡಿಯೋ ಇರುವ ವ್ಯಾನ್‌ಗಳನ್ನು ಫ್ಲಾಗ್ ಆಫ್ ಮಾಡಿ ಎಲ್ಲ ಬೂತ್‌ಗಳಿಗೂ ಸಂಚಾರ ಮಾಡಲಿದೆ ಎಂದರು.ಮೋದಿಯವರ ಸಂಕಲ್ಪದಂತೆ ದೇಶದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಸಮಾಜದ, ರೈತರ, ಮಹಿಳೆಯರ ಮತ್ತು ಯುವ ಜನತೆಯ ಜೀವನ ಶೈಲಿಯನ್ನು ಉತ್ತಮಗೊಳಿಸುವುದರೊಂದಿಗೆ ಮುಂದಿನ 5 ವರ್ಷಗಳಲ್ಲಿ ಭಾರತ 5 ಟ್ರಿಲಿಯನ್ ಎಕಾನಮಿಯತ್ತ ದಾಪುಗಾಲು ಹಾಕಲು ಸಹಕಾರವಾಗಲಿದೆ ಎಂದರು.ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ದ.ಕ. ಜಿಲ್ಲಾ ಚುನಾವಣಾ ಸಮಿತಿ ಸಂಚಾಲಕ ನಿತಿನ್‌ ಕುಮಾರ್‌, ಖಜಾಂಚಿ ಸಂಜಯ ಪ್ರಭು ಮತ್ತಿತರರಿದ್ದರು.