ಸಾರಾಂಶ
ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ನಂಬಿ ನೀವುಗಳು ಅವರಿಗೆ ಮತ ಹಾಕಲು ಮನಸ್ಸು ಮಾಡಬೇಡಿ
ನರೇಗಲ್ಲ: ಅಟಲ ಬಿಹಾರಿ ವಾಜಪೇಯಿ ನಂತರ ಈ ದೇಶ ಕಂಡ ಮಹಾನ್ ನಾಯಕ, ಮುತ್ಸದ್ದಿ ಪ್ರಧಾನಿ ಅಂದರೆ ನರೇಂದ್ರ ಮೋದಿಯವರು. ಅವರ ಹತ್ತು ವರ್ಷಗಳ ಆಡಳಿತದಲ್ಲಿ ದೇಶ ಅಪಾರ ಪ್ರಗತಿ ಸಾಧಿಸಿದೆ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿ ನನ್ನ ಹುಟ್ಟೂರು ನಿಡಗುಂದಿಯಲ್ಲಿನ ದೇವರುಗಳಿಗೆ ಪೂಜೆ ನೆರವೇರಿಸಿದ್ದೇವೆ ಎಂದು ವಿಧಾನ ಪರಿಷತ್ತಿನ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಬುಧವಾರ ಸಂಜೆ ತಮ್ಮ ಹುಟ್ಟೂರು ನಿಡಗುಂದಿಗೆ ಆಗಮಿಸಿ ಅಲ್ಲಿನ ಅನೇಕ ದೇವಸ್ಥಾನಗಳಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿ ಪೂಜೆ ನೆರವೇರಿಸಿದ ನಂತರ ನೆರೆದ ಜನರನ್ನುದ್ದೇಶಿಸಿ ಮಾತನಾಡಿದರು.ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ನಂಬಿ ನೀವುಗಳು ಅವರಿಗೆ ಮತ ಹಾಕಲು ಮನಸ್ಸು ಮಾಡಬೇಡಿ. ಈ ಹಿಂದೆ ನಮ್ಮ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು, ದಾಳಿಗಳು ನಡೆಯುತ್ತಿದ್ದವು. ಅದಕ್ಕೆಲ್ಲ ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಕಾರಣವಾಗಿತ್ತು. ಆದರೆ ಈ ಹತ್ತು ವರ್ಷಗಳಲ್ಲಿ ಅಂತಹ ಭಯೋತ್ಪಾದಕ ಕೃತ್ಯ ಈ ದೇಶ ಕಂಡಿಲ್ಲ. ಅದಕ್ಕೆ ಮೋದಿಯಂತಹ ಮಹಾನ್ ನಾಯಕರ ದಕ್ಷ ಆಡಳಿತವೇ ಕಾರಣ ಎಂದು ಹೇಳಿದರು.
ಸಭೆಗೆ ಮೊದಲು ಅವರು ತಮ್ಮ ಅಭಿಮಾನಿಗಳೊಂದಿಗೆ ಗ್ರಾಮದ ಭೀಮಾಂಬಿಕಾ, ದುರ್ಗಮ್ಮ, ದ್ಯಾಮಮ್ಮ, ವೀರಭದ್ರೇಶ್ವರ, ಸಂಗಮೇಶ್ವರ, ಕೆಂಚಮ್ಮ, ರಂಗನಾಥ ಮತ್ತು ಗಣೇಶ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಮತ್ತೊಮ್ಮೆ ಮೋದಿ ಈ ದೇಶದ ಪ್ರಧಾನಿಯಾಗುವಂತೆ ಆಶೀರ್ವದಿಸಲು ದೇವರಲ್ಲಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಜಗದೀಶ ಕರಡಿ, ಹನುಮಪ್ಪ ಕೊಪ್ಪದ, ಕಳಕಪ್ಪ ಬೆಟಗೇರಿ, ಕಳಕಪ್ಪ ಅಣಗೌಡ್ರ, ಪಂಚಾಕ್ಷರಿ ಕರಡಿ, ಅಂದಪ್ಪ ಅಣಗೌಡ್ರ, ವೀರಭದ್ರಪ್ಪ ಲಗುಬಗಿ, ಶರಣಪ್ಪಗೌಡ ಪಾಟೀಲ, ಬಿ.ಕೆ.ಹೊಟ್ಟಿನ, ಎಫ್.ಡಿ.ಮಾದರ, ವಿ. ಎ. ಕಂಬಳಿ, ಸುಭಾಸ ಸಂಕನೂರ ಸೇರಿದಂತೆ ಇನ್ನೂ ಅನೇಕ ಧುರೀಣರು, ಅಭಿಮಾನಿಗಳು, ಬಿಜೆಪಿ ಪಕ್ಷದ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.