ಕಳೆದ 10 ವರ್ಷದಿಂದ ಖಾಸಗಿ ಶಾಲೆಗಳಲ್ಲಿ ನಿವೃತ್ತರಾದ ನೌಕರರ ಸ್ಥಾನಕ್ಕೆ ಇದುವರೆಗೂ ಹೊಸ ನೌಕರರನ್ನು ನೇಮಕ ಮಾಡಿಲ್ಲ

ಶಿರಸಿ: ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರನ್ನು ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಗೆಲ್ಲಿಸಲು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಎಸ್.ವಿ. ಸಂಕನೂರ ಅವರು ಈಗಾಗಲೇ ಪಶ್ಚಿಮ ಪದವೀಧರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಎರಡು ಬಾರಿ ಆಯ್ಕೆಯಾಗಿದ್ದಾರೆ. ಉತ್ತರ ಕನ್ನಡ, ಗದಗ, ಹಾವೇರಿ ಮತ್ತು ಧಾರವಾಡ ಕ್ಷೇತ್ರಗಳಲ್ಲಿ ಅನೇಕ ಕೆಲಸ ಕಾರ್ಯಗಳನ್ನು ಮಾಡುವ ಜತೆಗೆ ಕ್ಷೇತ್ರದ ಹಲವಾರು ಜ್ವಲಂತ ಸಮಸ್ಯೆಗಳಿಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಮಾತನಾಡಿ, ಕಳೆದ ಎರಡು ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರಬುದ್ಧ ಮತದಾರರು ತಮ್ಮನ್ನು ಆಯ್ಕೆ ಮಾಡಿದ್ದು, ಪದವೀಧರ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರ ಬಗ್ಗೆ ತಮಗೆ ಅಪಾರ ಅಭಿಮಾನ ಹಾಗೂ ನಂಬಿಕೆ ಇದೆ. ಈ ಬಾರಿಯೂ ತಮ್ಮನ್ನು ಅದೇ ರೀತಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕಳೆದ 10 ವರ್ಷದಿಂದ ಖಾಸಗಿ ಶಾಲೆಗಳಲ್ಲಿ ನಿವೃತ್ತರಾದ ನೌಕರರ ಸ್ಥಾನಕ್ಕೆ ಇದುವರೆಗೂ ಹೊಸ ನೌಕರರನ್ನು ನೇಮಕ ಮಾಡಿಲ್ಲ. ಅದರ ಕುರಿತು ಮತ್ತು ನೌಕರರ ಎನ್‌ಪಿಎಸ್ ರದ್ದುಪಡಿಸಿ, ಒಪಿಎಸ್ ಜಾರಿಗೆ ತರಲು ಹೋರಾಟ ಮಾಡುತ್ತೇನೆ. ನಿವೃತ್ತರಾದ ನೌಕರರು ಬರಿಗೈಯಲ್ಲಿ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ಕಾರ್ಯಕರ್ತರೆಲ್ಲರೂ ಹುಮ್ಮಸ್ಸಿನಿಂದ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಹಿರಿಯರಾದ ಆರ್.ಡಿ. ಹೆಗಡೆ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ, ಉಪಾಧ್ಯಕ್ಷ ನಾಗರಾಜ್ ನಾಯ್ಕ್, ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷೆ ಉಷಾ ಹೆಗಡೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರು ಪ್ರಸಾದ ಹೆಗಡೆ, ಶಿವಾಜಿ ನರಸಾನಿ, ಸದಾನಂದ ಭಟ್, ರಮೇಶ್ ನಾಯ್ಕ್ ಉಪಸ್ಥಿತರಿದ್ದರು.

ಕಾಂಗ್ರೆಸ್ ಸರ್ಕಾರ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಯಾವ ರೀತಿ ನಡೆಸಿಕೊಂಡಿದೆ. ರಾತ್ರೋರಾತ್ರಿ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗೆ ಇಳಿಸಿರುವುದು ಅವಮಾನದ ಸಂಗತಿ. ಸರ್ಕಾರದ ಖಜಾನೆ ಖಾಲಿಯಾಗಿದೆ. ಅಭಿವೃದ್ಧಿಗೆ ಹಣವಿಲ್ಲದೆ ಎಲ್ಲ ನಗರ ಮತ್ತು ಗ್ರಾಮಗಳ ರಸ್ತೆಗಳು ಗುಂಡಿಮಯವಾಗಿವೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.