ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಬಿಜಿಎಸ್ ಪಬ್ಲಿಕ್ ಸ್ಕೂಲ್ ಮತ್ತು ಬಿಜಿಎಸ್ ಪಿಯು ಕಾಲೇಜಿನ ವತಿಯಿಂದ ಮಕರ ಸಂಕ್ರಾಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಬಿಜಿಎಸ್ ಶಾಲಾ ಮಕ್ಕಳು ಮತ್ತು ಶಿಕ್ಷಕರು ಸಂಕ್ರಾಂತಿ ಹಬ್ಬದ ಪ್ರಯುಕ್ತ ದೇಶಿಯ ಉಡುಪುಗಳನ್ನು ಧರಿಸಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು ಹಾಗೂ ಸಿರಿ ಧಾನ್ಯಗಳ ರಾಶಿ ಪೂಜೆ ಮಾಡುವುದರೊಂದಿಗೆ ಎಲ್ಲ ಮಕ್ಕಳಿಗೆ ಎಳ್ಳು ಬೆಲ್ಲವನ್ನು ವಿತರಿಸಲಾಯಿತು. ಪ್ರಾಂಶುಪಾಲರಾದ ಸಿ. ಸಿ. ಕುಮಾರ್ ಮಾತನಾಡಿ, ಸಂಕ್ರಾಂತಿ ಹಬ್ಬವು ಹೊಸ ವರ್ಷದ ಹೊಸ ಹಬ್ಬವಾಗಿದ್ದು, ಹೊಸ ಬಟ್ಟೆಗಳನ್ನು ಧರಿಸಿಕೊಂಡು ಸಿಹಿ ತಿನಿಸುಗಳನ್ನು ತಿಂದು ಎಳ್ಳು ಬೆಲ್ಲವನ್ನು ಹಂಚಿಕೊಂಡು ಒಳ್ಳೆಯ ಮಾತುಗಳನ್ನು ಮಾತನಾಡಿ. ಜೀವನದಲ್ಲಿ ಶಿಸ್ತು ಬದ್ಧ ಕಷ್ಟಪಟ್ಟು ಕೆಲಸಗಳನ್ನು ಮಾಡಿಕೊಂಡು ಗುರಿಯನ್ನು ಇಟ್ಟುಕೊಳ್ಳಬೇಕೆಂದು ತಿಳಿಸಿದರು. ದೇಶದ ಎಲ್ಲಾ ರಾಜ್ಯಗಳಲ್ಲಿ ತಮ್ಮದೇ ಹೆಸರುಗಳನ್ನು ಇಟ್ಟುಕೊಂಡು ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಈ ಹಬ್ಬವನ್ನು ಸುಗ್ಗಿ ಹಬ್ಬವೆಂದು ಹೇಳಲಾಗುತ್ತದೆ. ವರ್ಷದ ಕೊನೆಯಲ್ಲಿ ಹೆಚ್ಚು ಬೆಳೆಗಳನ್ನು ಬೆಳೆದು, ಚಳಿಯನ್ನು ಕೊನೆಗೊಳಿಸುತ್ತಾ ವ್ಯವಸಾಯದ ಹಂತಗಳನ್ನು ಪ್ರಾರಂಭಿಸಲಾಗುತ್ತದೆ ಹಾಗೂ ಈ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ಭೂಮಿಗೆ ಹೊಸ ಬೆಳಕನ್ನು ಚೆಲ್ಲುತ್ತಾನೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ಮತ್ತು ಬಿಜಿಎಸ್ ಸಮವ ಶಿಕ್ಷಣ ಸಂಸ್ಥೆಗಳ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು. ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.