ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಸೂರ್ಯಾರಾಧನೆಯ ಹಬ್ಬವಾದ ಮಕರ ಸಂಕ್ರಾಂತಿಯನ್ನು ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಸುಗ್ಗಿಯ ಕಾಲದ ಈ ಹಬ್ಬದಲ್ಲಿ ಅಕ್ಕಿ ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲಗಳಿಂದ ಮಾಡಿದ ಸಿಹಿ ಮಾಡಿ ಇದನ್ನು ಸೂರ್ಯದೇವನಿಗೆ ನೈವೇದ್ಯ ಮಾಡಿದರು. ಎಳ್ಳು, ಬೆಲ್ಲ ಸಕ್ಕರೆ ಅಚ್ಚುಗಳನ್ನು ನೆರೆಯವರಿಗೆ ಬಂಧು ಮಿತ್ರರಿಗೆ ಹಂಚಿ ಸಂಭ್ರಮಿದರು, ಮನೆ ಮನೆಗಳಲ್ಲಿ ಹೆಣ್ಣು ಮಕ್ಕಳನ್ನು ಕುಳ್ಳಿರಿಸಿ, ಆರತಿ ಮಾಡಿ, ಎಳ್ಳು ಬೆಲ್ಲ ಬೀರಲಾಯಿತು. ಮನೆಗಳ ಮುಂದೆ ಮಾವಿನಸೊಪ್ಪು, ಅಣ್ಣೆಸೊಪ್ಪು ಕಟ್ಟಲಾಗಿತ್ತು.ಗ್ರಾಮಾಂತರ ಪ್ರದೇಶದ ಕೆಲ ಗ್ರಾಮಗಳಲ್ಲಿ ರೈತಾಪಿ ವರ್ಗ ದನಕರುಗಳಿಗೆ ಮೈ ತೊಳೆದು, ಸಿಂಗರಿಸಿ ಭೂತಪೀಡೆಗಳಿಂದ ಅವುಗಳನ್ನು ರಕ್ಷಿಸುವ ಸಲುವಾಗಿ ಬೀದಿಗಳಲ್ಲಿ ಹೊತ್ತಿಸಿದ ಬೆಂಕಿಯನ್ನು ನೆಗೆದು ದಾಟಿಸಿದರು. ದೇವಸ್ಥಾನಗಳನ್ನು ವಿಶೇಷವಾಗಿ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು, ಧರ್ನುಮಾಸದ ಕೊನೆಯ ದಿನವು ಇದಾದ್ದರಿಂದ ಮುಂಜಾನೆಯೇ ಮಹಿಳೆಯರು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.ಸುಗ್ಗಿ ಜಾತ್ರೆ:ತಾಲೂಕಿನ ಚಂದಕವಾಡಿ ಹೋಬಳಿಗೆ ಸೇರಿದ ಕರಡಿಹಳ್ಳದದಲ್ಲಿ ಕುಂಬೇಶ್ವರ ಸ್ವಾಮಿಯ ಸುಗ್ಗಿ ಜಾತ್ರೆಯು ಅದ್ಧೂರಿಯಾಗಿ ನಡೆಯಿತು. ಸಂಕ್ರಾಂತಿ ಹಬ್ಬದಂದು ಪ್ರತಿವರ್ಷ ಕುಂಬೇಶ್ವರ ಕಾಲೋನಿಯ ಸಮೀಪದ ಕರಡಿಹಳ್ಳದ ಬಳಿ ಇರುವ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ಸಂಕ್ರಾಂತಿ ಹಬ್ಬದ ಸುಗ್ಗಿ ಜಾತ್ರೆ ನಡೆಯುತ್ತಿದೆ. ಬೆಳಗ್ಗೆ ದೇವಸ್ಥಾನದ ಹತ್ತಿವಿರುವ ಸುವರ್ಣವತಿ ನದಿಯ ನೀರಿನಲ್ಲಿ ಮಹದೇಶ್ವರ ವಿಗ್ರಹ ಮೂರ್ತಿಗೆ ಅಭಿಷೇಕ ಮಾಡಿ ನಂತರ ಹುಲಿವಾಹನಕ್ಕೆ ಪೂಜೆ ಸಲ್ಲಿಸಿ ಸತ್ತಿಗೆ, ಡೊಳ್ಳುಕುಣಿತದೊಂದಿಗೆ ಮರವಣಿಗೆಯಲ್ಲಿ ದೇವಸ್ಥಾನಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ರೈತರು ತಾವು ಬೆಳೆದ ಧಾನ್ಯವನ್ನು ದೇವರಿಗೆ ಅರ್ಪಿಸಿದರು. ಸಂಕಾಂತ್ರಿ ಜಾತ್ರೆಗೆ ಬೆಂಗಳೂರು, ಮೈಸೂರು, ಹಾಗೂ ಚಾಮರಾಜನಗರ ಜಿಲ್ಲೆಯ ಸುತ್ತ ಮತ್ತಲಿನ ರೈತರು, ಭಕ್ತರು ಭಾಗವಹಿಸಿದ್ದರು. ನಂತರ ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕುಂಬೇಶ್ವರ ದೇವಸ್ಥಾನದ ಟ್ರಸ್ಟಿಗಳಾದ ಮಂಜೇಶ್ ಗೌಡರು, ವಾಟಾಳ್ ಬಾಬು, ನಾಗೇಶ್ ನಾಗರಾಜು, ಸಿದ್ದಪ್ಪ, ಕೃಷ್ಣಶೆಟ್ಟಿ, ದೊಳ್ಳಿಪುರ ವೆಂಕಟಶೆಟ್ಟಿ, ಮಹೇಶ್, ಡಿ.ಬಿ. ಬಸವಗೌಡರ್, ಕುಂಬೇಶ್ವರ ಯುವಕರ ಸಂಘದ ಸದಸ್ಯರು ಇದ್ದರು.ವಿಶೇಷ ಅಲಂಕಾರ:
ಶ್ರೀದೇವಿ ಭೂದೇವಿಸಮೇತ ಕಾಡು ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಶ್ರೀನಿವಾಸನ ಅಲಂಕಾರ ಮಾಡಲಾಗಿತ್ತು. ಮಹಾಮಂಗಳಾರತಿ ಮಾಡಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.