ಸಾರಾಂಶ
- ಮಕ್ಕಳ ಆಟೋಟ, ಜೋಕಾಲಿ, ಗಾಳಿಪಟ ಆಟ । ನಗರ, ಗ್ರಾಮೀಣ ಪ್ರದೇಶಗಳಲ್ಲಿ ಸಂಪ್ರದಾಯ ಸಂಪನ್ನ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಸೂರ್ಯನು ತನ್ನ ಪಥವನ್ನು ಬದಲಿಸಿ, ಉತ್ತರ ದಿಕ್ಕಿನ ಕಡೆ ಚಲಿಸುವ ಮಕರ ಸಂಕ್ರಮಣದ ದಿನವಾದ ಮಂಗಳವಾರ, ನಗರ, ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಪುಣ್ಯಸ್ನಾನ ಮುಖೇನ ಆಚರಿಸಲಾಯಿತು.ಕ್ಯಾಲೆಂಡರ್ ಲೆಕ್ಕದಲ್ಲಿ ಹೊಸ ವರ್ಷದ ಮೊದಲ ಹಿಂದುಗಳ ಹಬ್ಬ ಎನಿಸಿರುವ ಸಂಕ್ರಾಂತಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಸ್ನಾನ, ಪೂಜಾದಿಗಳನ್ನು ಮುಗಿಸಿದ ಭಕ್ತರು ದೇವಸ್ಥಾನಗಳಿಗೆ ತೆರಳಿದರು. ಬಳಿಕ ಮಧ್ಯಾಹ್ನ ರೊಟ್ಟಿ, ಬುತ್ತಿ, ನಾನಾ ವಿಧದ ಪಲ್ಯ, ಚಟ್ನಿ ಪುಡಿ, ಹಿಟ್ಟಿನ ಜುಣುಕ ಸೇರಿದಂತೆ ಭಕ್ಷ್ಯಭೋಜನ ಸವಿದು, ಪರಸ್ಪರರಿಗೆ ಎಳ್ಳು-ಬೆಲ್ಲ ವಿನಿಮಯ ಮಾಡಿ, ಶುಭಾಶಯ ಕೋರಿದರು.
ಹರಿಹರ, ಹೊನ್ನಾಳಿ ತಾಲೂಕಿನ ತುಂಗಭದ್ರಾ ನದಿ ತಟ, ಕೊಂಡಜ್ಜಿ, ಸೂಳೆಕೆರೆ ಸೇರಿದಂತೆ ನಾನಾ ಕಡೆ ಸಾವಿರಾರು ಭಕ್ತರು ಕುಟುಂಬ, ಬಂಧು-ಬಳಗ, ಮಕ್ಕಳು ಮರಿಗಳ ಸಮೇತ ರೊಟ್ಟಿ, ಬುತ್ತಿ ಕಟ್ಟಿಕೊಂಡು ಹೋಗಿ, ನದಿ, ಕೆರೆಗಳಲ್ಲಿ ಪುಣ್ಯಸ್ನಾನ ಮುಗಿಸಿಕೊಂಡು, ಗಂಗಾಪೂಜೆ ನೆರವೇರಿಸಿ, ದೇವರ ದರ್ಶನ ಮಾಡಿ, ಪ್ರಸಾದ ಸ್ವೀಕರಿಸಿದರು. ಸೂರ್ಯನ ಪಥ ಬದಲಾವಣೆಯೊಂದಿಗೆ ತಮ್ಮ ಬದುಕಿನಲ್ಲೂ, ಭವಿಷ್ಯದಲ್ಲೂ ಬದಲಾವಣೆಯಾಗಲೆಂಬ ಸಂಕಲ್ಪದೊಂದಿಗೆ ಮಕರ ಸಂಕ್ರಾಂತಿಯಲ್ಲಿ ಭಾಗಿಯಾದರು. ಗ್ರಾಮೀಣ ಪ್ರದೇಶದ ನಿವಾಸಿಗಳು ಹೊಲ, ಗದ್ದೆ, ತೋಟಗಳಿಗೂ ತೆರಳಿ, ಹಬ್ಬದೂಟ ಸವಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಉದ್ಯಾನವನ, ಗಾಜಿನ ಮನೆ, ಕಾಸಲ್ ಶ್ರೀನಿವಾಸ ಶ್ರೇಷ್ಠಿ ಉದ್ಯಾನವನ, ನಿಜಲಿಂಗಪ್ಪ ಬಡಾವಣೆಯ ಗಂಗೂ ಬಾಯಿ ಹಾನಗಲ್ ಪಾರ್ಕ್, ಮಾತೃಛಾಯಾ ಉದ್ಯಾನವನ ಹೀಗೆ ಬಹುತೇಕ ಎಲ್ಲ ಪಾರ್ಕ್‌ಗಳು ಜನಜಂಗುಳಿಯಿಂದ ತುಂಬಿದ್ದವು. ಮಕ್ಕಳ ಹಬ್ಬದ ಖುಷಿಗೆ ಯಾವುದೇ ಅಡೆತಡೆ ಸಹ ಇರಲಿಲ್ಲ. ದಾವಣಗೆರೆ ದೃಶ್ಯಕಲಾ ಮಹಾ ವಿದ್ಯಾಲಯದ ಥೀಮ್ ಪಾರ್ಕ್‌ಗೆ ಜನ ಲಗ್ಗೆಯಿಟ್ಟು, ಅಲ್ಲಿದ್ದ ಕಲಾಕೃತಿಗಳ ಜೊತೆಗೆ ಮೊಬೈಲ್‌ಗಳಲ್ಲಿ ಸೆಲ್ಫಿ ಮೇಲೆ ಸೆಲ್ಫೀ ತೆಗೆದುಕೊಂಡರು.
ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಚಪಾತಿ, ಹೋಳಿಗೆ, ಬಿಳಿ ಹೋಳಿಗೆ, ಕರಿಗಡುಬು, ಕರ್ಜಿಕಾಯಿ, ಗೋಧಿ ಹುಗ್ಗಿ, ಶ್ಯಾವಿಗೆ, ತರಹೇವಾರಿ ಪಲ್ಯಗಳು, ಹುಳಿ ಬುತ್ತಿ, ಗುರೆಳ್ಳು, ಶೇಂಗಾ, ಅಗಸಿ, ಕೆಂಪುಚಟ್ನಿ, ಹಸಿಚಟ್ನಿ, ಹಿಟ್ಟಿನ ಜುಣುಕ, ಕರಿದ, ಹುರಿದ ಮೆಣಸಿಕಾಯಿ, ಹಸಿಹಸಿ ಮೂಲಂಗಿ, ಈರುಳ್ಳಿ ಹೀಗೆ ರುಚಿ ರುಚಿಯಾದ ಭಕ್ಷ್ಯಭೋಜನ ಸೇವಿಸುವುದರೊಂದಿಗೆ ತಂಪು ವಾತಾವರಣದಲ್ಲಿ ಸಂಕ್ರಾಂತಿ ಆಚರಿಸುತ್ತಿದ್ದುದು ಹಬ್ಬಕ್ಕೆ ಕಳೆ ತಂದಿತ್ತು. ಬಹುತೇಕ ಕಡೆ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಜೋಕಾಲಿ ಹಬ್ಬ ಜೋರಾಗಿತ್ತು. ಗಾಳಿಪಟ ಹಾರಿ ಬಿಡುವುದರಲ್ಲಿ ಮಕ್ಕಳು, ಹಿರಿಯರು ತಲ್ಲೀನರಾಗಿದ್ದರು.ಸೂರ್ಯ ಪಥ ಬದಲಿಸುವ ದಿನವಾಗಿದ್ದರಿಂದ ಶಿವ ಮಂದಿರಗಳು ಸೇರಿದಂತೆ ಜಿಲ್ಲಾದ್ಯಂತ ಎಲ್ಲಾ ಹೆಣ್ಣು, ಗಂಡು ದೇವರುಗಳ ದೇವಸ್ಥಾನದಲ್ಲಿ ಸೂರ್ಯೋದಯಕ್ಕಿಂತ ಮುಂಚಿನಿಂದಲೇ ಪೂಜಾದಿ ಕಾರ್ಯಗಳು ಶುರುವಾಗಿದ್ದವು. ಅಭಿಷೇಕ, ಅಲಂಕಾರ, ಮಂಗಳಾರತಿ, ಮಹಾ ಮಂಗಳಾರತಿಗಳನ್ನು ಭಕ್ತರು ಮಕ್ಕಳ ಸಮೇತರಾಗಿ ದೇವಸ್ಥಾನಗಳಿಗೆ ತೆರಳಿ, ಕಣ್ತುಂಬಿಕೊಂಡರು. ಅನೇಕ ಕಡೆ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಇನ್ನು ಗಾಜಿನ ಮನೆಯಂತೂ ಅತಿ ಹೆಚ್ಚು ಜನರ ಕಣ್ಮನ ಸೆಳೆಯಿತು. ಸೆಲ್ಫೀ ಫೋಟೋ, ಗ್ರೂಪ್ ಫೋಟೋ, ಹೂವಿನ, ಅಲಂಕಾರಿಕ ಗಿಡಗಳ ಜೊತೆ ನಿಂತು ಫೋಟೋ ತೆಗೆಸಿಕೊಂಡವರಿಗೇನೂ ಕಡಿಮೆ ಇರಲಿಲ್ಲ. ಹೊನ್ನಾಳಿ, ನ್ಯಾಮತಿ ತಾಲೂಕಿನಲ್ಲಿ ಮಂಗಳವಾರ ಸಂಜೆ ಸಂಕ್ರಾಂತಿ ಹಬ್ಬದ ಹಿನ್ನೆಲೆ ಎತ್ತುಗಳಿಗೆ ಕಿಚ್ಚು ಹಾಯಿಸಿ, ಹಬ್ಬವನ್ನು ಸಾಹಸಮಯವಾಗಿ ಆಚರಿಸಿದರು.- - -
(ಫೋಟೋ-ಕ್ಯಾಪ್ಷನ್ಸ್)...-14ಕೆಡಿವಿಜಿ5, 6:
ದಾವಣಗೆರೆ ಸರ್ ಎಂ.ವಿಶ್ವೇಶ್ವರಯ್ಯ ಪಾರ್ಕ್‌ನಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ ಜೊತೆಗೆ ಸಂಭ್ರಮದಿಂದ ಆಟದಲ್ಲಿ ತೊಡಗಿದ್ದ ಮಕ್ಕಳ ಆನೆ ಸವಾರಿ ಪರಿ ಇದು.-14ಕೆಡಿವಿಜಿ7, 8: ದಾವಣಗೆರೆ ಸರ್ ಎಂ.ವಿಶ್ವೇಶ್ವರಯ್ಯ ಪಾರ್ಕ್‌ನಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ ಜೊತೆಗೆ ಸಂಭ್ರಮದಿಂದ ಜಾರುಬಂಡೆ ಆಟದಲ್ಲಿ ತೊಡಗಿದ್ದ ಮಕ್ಕಳು.
-14ಕೆಡಿವಿಜಿ9, 10: ದಾವಣಗೆರೆ ಥೀಮ್ ಪಾರ್ಕ್ ಬಳಿ ಮಕ್ಕಳು, ಮಹಿಳೆಯರು, ಹಿರಿಯರು ಅಲ್ಲಿನ ಕಲಾಕೃತಿಗಳ ಜೊತೆಗೆ ಸಂಭ್ರಮಿಸುತ್ತಿರುವುದು ಹೀಗೆ.-14ಕೆಡಿವಿಜಿ11: ದಾವಣಗೆರೆಯಲ್ಲಿ ಸಂಕ್ರಾಂತಿ ಸಂಭ್ರಮದ ಜೊತೆಗೆ ತ್ರೀಡಿ ಸಿನಿಮಾ ವೀಕ್ಷಿಸುತ್ತಿರುವ ವಾಲುತ್ತಿರುವ ಯುವಕನ ಹಿಡಿದುಕೊಂಡಿರುವ ಸ್ನೇಹಿತರು!
- - --14ಕೆಡಿವಿಜಿ12: ದಾವಣಗೆರೆಯಲ್ಲಿ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ರೊಟ್ಟಿ ಬುತ್ತಿ ಸಮೇತ ಹೊರ ಸಂಚಾರಕ್ಕೆ ಬಂದ ಕುಟುಂಬದ ಮಹಿಳೆಯರು, ಯುವತಿಯರು, ಮಕ್ಕಳು.
-14ಕೆಡಿವಿಜಿ13, 14, 15: ದಾವಣಗೆರೆ ಸರ್ ಎಂ.ವಿಶ್ವೇಶ್ವರಯ್ಯ ಪಾರ್ಕ್ ನಲ್ಲಿ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ರೊಟ್ಟಿ ಬುತ್ತಿ ಸಮೇತ ಕುಟುಂಬ ಸಮೇತ ಊಟಕ್ಕೆ ಕುಳಿತ ಕುಟುಂಬಗಳು.-14ಕೆಡಿವಿಜಿ16: ದಾವಣಗೆರೆಯಲ್ಲಿ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ರೊಟ್ಟಿ ಬುತ್ತಿ ಊಟದ ನಂತರ ವಿಶ್ರಮಿಸುತ್ತಿರುವ ಮಹಿಳೆ, ಯುವತಿಯರು, ಮಕ್ಕಳು.