ಸಾರಾಂಶ
ಮಠಕ್ಕೆ ಆಗಮಿಸಿದ ಭಕ್ತರಿಗೆ ಅಟವಿ ಮಲ್ಲಿಕಾರ್ಜುನ ದೇವರು ಸ್ವಾಮೀಜಿಯವರು ಸಂಕ್ರಾಂತಿಯ ಎಳ್ಳು, ಬೆಲ್ಲದ ಪ್ರಸಾದ ವಿತರಣೆ ಮಾಡಿ ಸಂಕ್ರಾಂತಿಯ ಶುಭ ಕೋರಿದರು. ಮಠದ ಪರಂಪರೆಯಲ್ಲಿ ಸುಮಾರು 200 ವರ್ಷಗಳಿಂದ ಮಠದಲ್ಲಿ ಸಂಕ್ರಾಂತಿ ಜಾತ್ರೋತ್ಸವ ಆಚರಣೆಯಾಗುತ್ತಾ ಬಂದಿದೆ ಎಂದು ಸ್ವಾಮೀಜಿ ಹೇಳಿದರು. ನಂತರ ಭಕ್ತರಿಗೆ ಮಹಾದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಕನ್ನಡಪ್ರಭ ವಾರ್ತೆ ತುಮಕೂರು
ತಾಲೂಕಿನ ಕೋರಾ ಹೋಬಳಿ ಚಿಕ್ಕತೊಟ್ಲುಕೆರೆಯ ಅಟವಿ ಜಂಗಮ ಸುಕ್ಷೇತ್ರದಲ್ಲಿ ಮಂಗಳವಾರ ಮಕರ ಸಂಕ್ರಾಂತಿಯಂದು ಉತ್ತರಾಯಣ ಪುಣ್ಯಕಾಲದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಜಾತ್ರೋತ್ಸವದಲ್ಲಿ ಭಾಗವಹಿಸಿದ್ದರು. ಶ್ರೀ ಕ್ಷೇತ್ರದ ಅಟವಿ ಶಿವಲಿಂಗ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಅಟವಿ ಮಲ್ಲಿಕಾರ್ಜುನ ದೇವರು ಸ್ವಾಮೀಜಿಗಳ ನೇತೃತ್ವದಲ್ಲಿ ವಿವಿಧ ಪೂಜಾ, ಧಾರ್ಮಿಕ ಆಚರಣೆಗಳು ನೆರವೇರಿದವು.
ಇದೇ ವೇಳೆ ಸುಕ್ಷೇತ್ರದ ನಾಲ್ಕನೇ ಪೀಠಾಧ್ಯಕ್ಷರಾದ ಅಟವಿ ಸಿದ್ಧಲಿಂಗ ಸ್ವಾಮೀಜಿಗಳ ೭೫ನೇ ಪುಣ್ಯ ಸ್ಮರಣೋತ್ಸವ ಏರ್ಪಡಿಸಿ ಪೂಜ್ಯರಿಗೆ ಭಕ್ತಿ ನಮನ ಸಲ್ಲಿಸಲಾಯಿತು. ಬೆಳಗ್ಗೆ ಅಟವಿ ಶಿವಲಿಂಗ ಸ್ವಾಮೀಜಿ ಹಾಗೂ ಅಟವಿ ಮಲ್ಲಿಕಾರ್ಜುನ ದೇವರು ಸ್ವಾಮೀಜಿಗಳ ನೇತೃತ್ವದಲ್ಲಿ ಓಂಕಾರೇಶ್ವರ ಮಹಾಶಿವಯೋಗಿಗಳ, ಜಡೆಶಾಂತ ಬಸವ ಮಹಾಶಿವಯೋಗಿಗಳ, ಅಟವಿ ಮಹಾಶಿವಯೋಗಿಗಳ ಹಾಗೂ ಅಟವಿ ಸಿದ್ಧಲಿಂಗ ಮಹಾಶಿವಯೋಗಿಗಳ ಗದ್ದುಗೆಗೆ ಪುಷ್ಪಾಲಂಕಾರ, ಅಷ್ಟೋತ್ತರ, ಶತಬಿಲ್ವಾರ್ಚನೆ, ಮಹಾಮಂಗಳಾರತಿ ಹಮ್ಮಿಕೊಳ್ಳಲಾಗಿತ್ತು.ನಂತರ ಚಿಕ್ಕತೊಟ್ಲುಕೆರೆ ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ವಿವಿಧ ವಾದ್ಯ ವೈಭವದೊಂದಿಗೆ, ಸದ್ಭಕ್ತ ಸುಮಂಗಲೆಯರ ಕಳಸ ಕನ್ನಡಿ ಆರತಿಯೊಂದಿಗೆ ಓಂಕಾರ ಶಿವಯೋಗಿಗಳ ಹಾಗೂ ಅಟವಿ ಮಹಾಶಿವಯೋಗಿಗಳ ಉತ್ಸವ ನಡೆಯಿತು. ಇದೇ ವೇಳೆ ಷಟಸ್ಥಳ ಧ್ವಜಾರೋಹಣ ಹಾಗೂ ನಂದಿ ಧ್ವಜಾರೋಹಣ ನಂತರ ಶ್ರೀಗುರು ಅಟವೀಶ್ವರರ ಪಲ್ಲಕ್ಕಿ ಉತ್ಸವ ನೆರವೇರಿತು.
ಮಠಕ್ಕೆ ಆಗಮಿಸಿದ ಭಕ್ತರಿಗೆ ಅಟವಿ ಮಲ್ಲಿಕಾರ್ಜುನ ದೇವರು ಸ್ವಾಮೀಜಿಯವರು ಸಂಕ್ರಾಂತಿಯ ಎಳ್ಳು, ಬೆಲ್ಲದ ಪ್ರಸಾದ ವಿತರಣೆ ಮಾಡಿ ಸಂಕ್ರಾಂತಿಯ ಶುಭ ಕೋರಿದರು. ಮಠದ ಪರಂಪರೆಯಲ್ಲಿ ಸುಮಾರು 200 ವರ್ಷಗಳಿಂದ ಮಠದಲ್ಲಿ ಸಂಕ್ರಾಂತಿ ಜಾತ್ರೋತ್ಸವ ಆಚರಣೆಯಾಗುತ್ತಾ ಬಂದಿದೆ ಎಂದು ಸ್ವಾಮೀಜಿ ಹೇಳಿದರು. ನಂತರ ಭಕ್ತರಿಗೆ ಮಹಾದಾಸೋಹ ವ್ಯವಸ್ಥೆ ಮಾಡಲಾಗಿತ್ತು.ಅಟವಿ ಕ್ಷೇತ್ರಾಭಿವೃದ್ಧಿ ಮತ್ತು ಗೋ ಸಂರಕ್ಷಣಾ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಟಿ.ಬಿ.ಶೇಖರ್, ಟ್ರಸ್ಟಿಗಳಾದ ರಾಜೇಂದ್ರಕುಮಾರ್, ಮಹದೇವಯ್ಯ, ದೇವರಾಜು, ಆಡಿಟರ್ ಜಗದೀಶ್, ವಿಶ್ವನಾಥ್ ಅಪ್ಪಾಜಪ್ಪ, ರುದ್ರಪ್ರಸಾದ್, ಶ್ರೀಧರ್ ಹಿರೆತೊಟ್ಲುಕೆರೆ ಮೊದಲಾದವರು ಜಾತ್ರೋತ್ಸವದ ನೇತೃತ್ವ ವಹಿಸಿದ್ದರು.