ಸಂಕ್ರಾಂತಿ ಹಬ್ಬದ ವ್ಯಾಪಾರ ಬಲು ಜೋರು...!

| Published : Jan 14 2025, 01:01 AM IST

ಸಾರಾಂಶ

ಸುಗ್ಗಿಯ ಸಂಕೇತವಾಗಿ ಹೊಸದಾಗಿ ಬೆಳೆದ ಕಬ್ಬು, ಎಲಚಿ ಹಣ್ಣಿನ ಜೊತೆಗೆ ಎಳ್ಳು, ಬೆಲ್ಲ ನೀಡುವುದು ಸಂಪ್ರದಾಯ. ಅದರಂತೆ ಮೈಸೂರಿನ ಪ್ರಮುಖ ಮಾರುಕಟ್ಟೆಯಾದ ದೇವರಾಜ ಮಾರುಕಟ್ಟೆ, ಅಗ್ರಹಾರದ ಚಿಕ್ಕಮಾರುಕಟ್ಟೆ, ಮಂಡಿ ಮೊಹಲ್ಲಾ ಮಾರುಕಟ್ಟೆ, ಧನ್ವಂತರಿ ರಸ್ತೆ, ಅಗ್ರಹಾರ ವೃತ್ತ, ಎಂ.ಜಿ. ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಕಬ್ಬು, ಸೇವಂತಿಗೆ ಮುಂತಾದ ವಸ್ತುಗಳ ಮಾರಾಟ ಜೋರಾಗಿತ್ತು.

ಮಹೇಂದ್ರ ದೇವನೂರು

ಕನ್ನಡಪ್ರಭ ವಾರ್ತೆ ಮೈಸೂರು

ಕ್ರೈಸ್ತ ವರ್ಷಾರಂಭದ ಮೊದಲ ಹಬ್ಬ ಮಕರ ಸಂಕ್ರಾಂತಿಗೆ ಮೈಸೂರಿನಲ್ಲಿ ಸಿದ್ಧತೆ ಜೋರಾಗಿದ್ದು, ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಮತ್ತು ವ್ಯಾಪಾರ ಸೋಮವಾರ ಭರ್ಜರಿಯಾಗಿ ನಡೆಯಿತು.

ಉತ್ತರಾಯಣ ಪುಣ್ಯ ಕಾಲದ ಈ ಸಮಯದಲ್ಲಿ ಆಚರಿಸುವ ಮಕರ ಸಂಕ್ರಾಂತಿ ದೇಶದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದು. ಈ ಹಬ್ಬವನ್ನು ವಿವಿಧೆಡೆ ಹಲವು ರೀತಿಯಲ್ಲಿ ಆಚರಿಸಲಾಗುತ್ತದೆ.

ಸುಗ್ಗಿಯ ಸಂಕೇತವಾಗಿ ಹೊಸದಾಗಿ ಬೆಳೆದ ಕಬ್ಬು, ಎಲಚಿ ಹಣ್ಣಿನ ಜೊತೆಗೆ ಎಳ್ಳು, ಬೆಲ್ಲ ನೀಡುವುದು ಸಂಪ್ರದಾಯ. ಅದರಂತೆ ಮೈಸೂರಿನ ಪ್ರಮುಖ ಮಾರುಕಟ್ಟೆಯಾದ ದೇವರಾಜ ಮಾರುಕಟ್ಟೆ, ಅಗ್ರಹಾರದ ಚಿಕ್ಕಮಾರುಕಟ್ಟೆ, ಮಂಡಿ ಮೊಹಲ್ಲಾ ಮಾರುಕಟ್ಟೆ, ಧನ್ವಂತರಿ ರಸ್ತೆ, ಅಗ್ರಹಾರ ವೃತ್ತ, ಎಂ.ಜಿ. ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಕಬ್ಬು, ಸೇವಂತಿಗೆ ಮುಂತಾದ ವಸ್ತುಗಳ ಮಾರಾಟ ಜೋರಾಗಿತ್ತು.

ಸಂಕ್ರಾಂತಿಯನ್ನು ಸುಗ್ಗಿಯ ಸಂಕೇತವಾಗಿ ಆಚರಿಸುವುದರಿಂದ ಜಾನುವಾರಿಗೆ ಅರಿಶಿಣ ಬಳಿದು, ಪೂಜೆ ಸಲ್ಲಿಸುವುದು ಹಾಗೂ ಎತ್ತುಗಳಿಗೆ ಕಿಚ್ಚು ಹಾಯಿಸುವುದು ವಾಡಿಕೆ. ಅಲ್ಲದೇ, ಮರಗಳಿಗೆ ಕೆಮ್ಮಣ್ಣು ಮತ್ತು ಸುಣ್ಣ ಬಳಿದು ಶೃಂಗರಿಸಲಾಗಿದೆ.

ಸೋಮವಾರ ಬೆಳಗ್ಗೆಯಿಂದಲೇ ಮಾರುಕಟ್ಟೆಗೆ ಆಗಮಿಸಿ ಗ್ರಾಹಕರು ಹೂ, ಹಣ್ಣು, ಕಬ್ಬು, ಎಳ್ಳು- ಬೆಲ್ಲ- ಕೊಬ್ಬರಿ, ಹೊಸ ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಲು ಮುಗಿಬಿದ್ದರು. ಸಂಕ್ರಾಂತಿಯ ಪ್ರಮುಖ ಆಕರ್ಷಣೆ ಎಳ್ಳು ಬೆಲ್ಲ ಬೀರಲು ಬೇಕಾದ ಎಲ್ಲಾ ವಸ್ತುಗಳ ಖರೀದಿ ಜೋರಾಗಿತ್ತು.

ಮೈಸೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬಿನ ಜಲ್ಲೆಗಳನ್ನು ತಂದು ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಮಾರಾಟ ಮಾಡಿದರು. ದೇವರಾಜ ಮಾರುಕಟ್ಟೆಯಲ್ಲಿ ಕಬ್ಬಿನ ಜಲ್ಲೆಯ ಉದ್ದ ಮತ್ತು ದಪ್ಪದ ಅನುಗುಣವಾಗಿ ಒಂದು ಜಲ್ಲೆಯ ದಿಂಡಿಗೆ 10, 20 ಮತ್ತು 30 ರು.ಗೆ ಮಾರಾಟವಾಯಿತು.

ಅಗ್ರಹಾರ ಸೇರಿದಂತೆ ಇತರೆಡೆ ಪೂರ್ಣ ಜಲ್ಲೆಗೆ 50 ರಿಂದ 60 ರು.ಗೆ ಮಾರಾಟವಾಯಿತು. ಎಳ್ಳು- ಬೆಲ್ಲ ಮಿಶ್ರಣದ ಒಂದು ಕೆಜಿ ಪ್ಯಾಕೆಟ್ ಗೆ 160 ರಿಂದ 180 ರು.ಗೆ ಮಾರಾಟವಾಯಿತು. ಕೆಲವರು ಎಳ್ಳು ಬೆಲ್ಲ ಮಿಕ್ಸ್ ಪ್ಯಾಕೆಟ್ ಕೊಂಡರೆ, ಬಹುತೇಕರು ಎಳ್ಳು, ಬೆಲ್ಲ, ಕೊಬ್ಬರಿ, ಕಡಲೆ ಬೀಜ, ಸಕ್ಕರೆ ಅಚ್ಚು, ಕಲ್ಲು ಸಕ್ಕರೆ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಪ್ರತ್ಯೇಕವಾಗಿ ಖರೀದಿಸಿದರು.

ಒಂದು ಕೆಜಿ ಎಳ್ಳಿಗೆ 280 ರು., ಕತ್ತರಿಸಿದ ಬೆಲ್ಲ ಕೆಜಿಗೆ 140 ರು., ಕಡಲೆ ಬೀಜ (ಬೆಳೆ) ಕೆಜಿಗೆ 200 ರು., ಹುಂಡೆ ಕಡಲೇ ಬೀಜ ಕೆಜಿಗೆ 180 ರು., ಕತ್ತರಿಸಿದ ಕೊಬ್ಬರಿ ಕೆಜಿಗೆ 250 ರಿಂದ 280 ರು.ಗೆ ಮಾರಾಟವಾಯಿತು. ಬಣ್ಣ ಬಣ್ಣದ ಹಾಗೂ ವಿವಿಧ ಆಕೃತಿಯ ಕಲ್ಲು ಸಕ್ಕರೆ ಅಚ್ಚುಗಳು ಗ್ರಾಹಕರ ಗಮನ ಸೆಳೆಯಿತು.

ಸಂಕ್ರಾಂತಿ ಹಬ್ಬದ ಹಿನ್ನೆಲೆ ನಗರದಲ್ಲಿ ಹೂವಿನ ಬೆಲೆ ಸ್ವಲ್ಪ ಏರಿಕೆಯಾಗಿದೆ. ಸಾಮಾನ್ಯ ದಿನಕ್ಕಿಂತ 20 ರಿಂದ 30 ರು. ಏರಿಕೆಯಾಗಿದೆ. ಸೇವಂತಿಗೆ 80 ರಿಂದ 100 ರು. ಮಲ್ಲಿಗೆ ಮೀಟರ್ ಗೆ 150- 200 ರು., ಕನಕಾಂಬರ 150, ಕಾಕಡ 80 - 100 ರು., ಮರಳೆ 80 ರು. ಹಾಗೂ ಬಾಳೆ ಹಣ್ಣು ಕೆಜಿಗೆ 70- 80 ರು.ಗೆ ಮಾರಾಟವಾಯಿತು. ತರಕಾರಿ ಮತ್ತು ಹಣ್ಣುಗಳು ಬೆಲೆಯೂ ಸ್ವಲ್ಪ ಏರಿಕೆಯಾಗಿತ್ತು.