ಸಾರಾಂಶ
ಮೆಹರೀಶ್ ಅಭಿಮತ । ಜಿಲ್ಲಾ ಮತ್ತು ತಾಲೂಕು ಕಸಾಪದಿಂದ ಸಂಕ್ರಾಂತಿ ಕವಿಗೋಷ್ಠಿ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣಸಂಕ್ರಾಂತಿ ರೈತರ ಪಾಲಿಗೆ ವಿಶೇಷ ಹಾಗೂ ನಮ್ಮ ಗ್ರಾಮೀಣ ಸೊಗಡು ಬಿಂಬಿಸುವ ಹಬ್ಬವಾಗಿದೆ. ವೈಭವೋಪೇರಿತವಾಗಿ ಹಬ್ಬಗಳನ್ನು ಆಚರಿಸಿದರೆ ಸಾಲದು, ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಹಬ್ಬಗಳ ಮಹತ್ವವನ್ನು ಯುವಪೀಳಿಗೆಗೆ ತಿಳಿಸಬೇಕು ಎಂದು ಟಿಎಪಿಸಿಎಂಎಸ್‌ನ ಮಾಜಿ ಅಧ್ಯಕ್ಷ ಎಂ.ಸಿ.ಎಚ್.ಮೆಹರೀಶ್ ಅಭಿಪ್ರಾಯಪಟ್ಟರು.
ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಸಾಹಿತ್ಯ ಕುಟೀರದಲ್ಲಿ ಜಿಲ್ಲಾ ಮತ್ತು ತಾಲೂಕು ಕಸಾಪ ಹಮ್ಮಿಕೊಂಡಿದ್ದ ಸಂಕ್ರಾಂತಿ ಕವಿಗೋಷ್ಠಿ ಹಾಗೂ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಬ್ಬಗಳ ಆಚರಣೆಯಿಂದ ನಮ್ಮ ಮನಸ್ಸು ಪ್ರಫುಲಗೊಳ್ಳುವ ಜತೆಗೆ ನಮ್ಮ ಸಂಸ್ಕೃತಿಯೂ ಉಳಿಯುತ್ತದೆ. ಹಬ್ಬಗಳನ್ನು ಆಚರಣೆಯನ್ನಾಗಿ ನೋಡದೇ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ನೋಡಬೇಕು ಎಂದರು.ಕಸಾಪ ಜಿಲಾಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ, ಸಂಬಂಧಗಳು ಗಟ್ಟಿಗೊಳ್ಳಲು ಹಬ್ಬಗಳ ಆಚರಣೆ ವೇದಿಕೆಯಾಗಿದೆ. ಹಬ್ಬ, ಹರಿದಿನಗಳನ್ನು ಸಾಹಿತ್ಯದ ಮೂಲಕ ಆಚರಿಸಬೇಕು. ಮನುಷ್ಯನ ಸಂಬಂಧಗಳನ್ನು ಬೆಸೆಯುವ ಕೆಲಸವಾಗಬೇಕು. ಪೌರಾಣಿಕ ಕಾರ್ಯಕ್ರಮಗಳ ಮೂಲಕ ಪರಂಂಪರೆಯನ್ನು ಉಳಿಸಿ ಜ್ಞಾನದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು.ಉತ್ತಮ ಸಮಾಜ ನಿರ್ಮಾಣ ಮಾಡುವತ್ತ ಸಾಗಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಮತ್ತೀಕೆರೆ ಬಿ.ಚಲುವರಾಜು ಮಾತನಾಡಿ, ಕಾವ್ಯ ಸಾಹಿತ್ಯದ ಪ್ರಕಾರಗಳಲ್ಲಿ ರಮ್ಯವಾದುದು.ಗದ್ಯ ತೆರೆದಿಡುತ್ತಾ ಹೋದರೆ, ಕಾವ್ಯ ಮುಚ್ಚಿಡುತ್ತಾ ಹೋಗುತ್ತದೆ. ಕಾವ್ಯ ಬಗೆ ಬಗೆಯ ಉಪಮಾನಗಳಿಂದ ಕೂಡಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ರಾಂಪುರ, ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಎಸ್.ಟಿ.ಮುರುಳಿ, ಎಸ್.ಜಿ.ಭೀಮೇಶ್, ಗ್ರಾಪಂ ಸದಸ್ಯ ಶ್ರೀನಿವಾಸ್, ನಿವೃತ್ತ ರೇಷ್ಮೆ ವಲಯಾಧಿಕಾರಿ ಎಂ.ಕೆ.ಜಯರಾಜು, ಕಸಾಪ ತಾಲೂಕು ಕಾರ್ಯದರ್ಶಿ ರಾಮಕೃಷ್ಣಯ್ಯ ಬ್ರಹ್ಮಣೀಪುರ, ಕೋಶಾಧ್ಯಕ್ಷ ಟಿ.ಎಸ್.ಶ್ರೀಕಾಂತ್ ಇನ್ನಿತರರಿದ್ದರು.
ಕವಿಗೋಷ್ಠಿಯಲ್ಲಿ ದೇ.ನಾರಾಯಣಸ್ವಾಮಿ, ಎಲೆಕೇರಿ ಶಿವರಾಂ, ಸೀಬನಹಳ್ಳಿ ಪಿ.ಸ್ವಾಮಿ, ಕೂರಣಗೆರೆ ಕೃಷ್ಣಪ್ಪ, ವಿ.ಪಿ.ವರದರಾಜು, ಮಂಜೇಶ್‌ಬಾಬು, ಮೇದರದೊಡ್ಡಿ ಹನುಮಂತು ಕವಿತೆ ವಾಚಿಸಿದರು. ಗೀತಗಾಯನವನ್ನು ಗೋವಿಂದಹಳ್ಳಿ ಶಿವಣ್ಣ, ಕೆ.ಎಚ್.ಕುಮಾರ್ ನಡೆಸಿಕೊಟ್ಟರು.-----------
ಶೆಟ್ಟಿಹಳ್ಳಿ ಗ್ರಾಮದ ಸಾಹಿತ್ಯ ಕುಟೀರದಲ್ಲಿ ಜಿಲ್ಲಾ ಮತ್ತು ತಾಲೂಕು ಕಸಾಪ ಹಮ್ಮಿಕೊಂಡಿದ್ದ ಸಂಕ್ರಾಂತಿ ಕವಿಗೋಷ್ಠಿ ಹಾಗೂ ಗೀತಗಾಯನ ಕಾರ್ಯಕ್ರಮವನ್ನು ಟಿಎಪಿಸಿಎಂಎಸ್‌ನ ಮಾಜಿ ಅಧ್ಯಕ್ಷ ಎಂ.ಸಿ.ಎಚ್.ಮೆಹರೀಶ್ ಹಾಗೂ ಅತಿಥಿಗಳು ಉದ್ಘಾಟಿಸಿದರು.