ಯುವ ಸಮುದಾಯ ಸ್ವಾರ್ಥಕ್ಕಾಗಿ ಕವಿತೆಗಳನ್ನು ರಚಿಸದೇ ಸಮಾಜದ ಹಿತಕ್ಕಾಗಿ ಕವಿತೆಗಳನ್ನು ಬರೆಯಬೇಕಾಗಿದೆ. ಸಾಹಿತ್ಯ ಕ್ಷೇತ್ರಕ್ಕೆ ಕಾರ್ಮೋಡ ಕವಿದಿದ್ದು, ಧರ್ಮ ಮತ್ತು ರಾಜಕಾರಣದ ತುಲನೆಯ ವ್ಯವಸ್ಥೆಯಿಂದ ಹೊರಬರಬೇಕಾಗಿದೆ. ಕವಿತೆಗಳಲ್ಲಿ ಬರೀ ಸಂಭ್ರಮದ ವಿಚಾರವಲ್ಲ, ಹಬ್ಬಗಳಲ್ಲಿ ಬಳಸುವ ಪದಗಳನ್ನು ಬಳಸಿ, ಈ ನೆಲದ ಮತ್ತು ನಾಡಿನ ಸಂಸ್ಕೃತಿಯನ್ನು ಉಳಿಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಸಂಕ್ರಾಂತಿ ಎಂಬುದು ಸ್ನೇಹ, ಸೌಹಾರ್ದತೆ ಹಾಗೂ ಭಾವೈಕ್ಯತೆಯ ಸಂಕೇತವಾಗಿದೆ. ದೀರ್ಘವಾದ ಕತ್ತಲೆಯಿಂದ ಸುದೀರ್ಘವಾದ ಬೆಳಕಿನೆಡೆಗೆ ಸಾಗುವುದೇ ಸಂಕ್ರಾಂತಿ ಎಂದು ಜಾನಪದ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ್ ಅಭಿಪ್ರಾಯಪಟ್ಟರು.

ತಾಲೂಕಿನ ವಂದಾರಗುಪ್ಪೆ ಗ್ರಾಮದಲ್ಲಿ ಜಿಲ್ಲಾ ಮತ್ತು ತಾಲೂಕು ಕಸಾಪ ಹಮ್ಮಿಕೊಂಡಿದ್ದ ಸಂಕ್ರಾಂತಿ ಕವಿಗೋಷ್ಠಿ ಹಾಗೂ ಗೀತಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಕ್ರಾಂತಿಯ ನಿಜವಾದ ಅರ್ಥ ಮನುಷ್ಯನನ್ನು ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವುದಾಗಿದೆ ಎಂದರು.

ಕಾವ್ಯವೆಂಬುದು ಸೃಜನಶೀಲ ಪ್ರಕ್ರಿಯೆ. ಕಾವ್ಯವೆಂಬುದು ಸಾಧಾರಣವಾದುದಲ್ಲ. ಕಾವ್ಯ ಕೃಷಿಯೇ ಭಾವನೆಗಳನ್ನು ಹೊರಹರಿಸುವುದಕ್ಕೆ ಭಾಷೆಯ ಮುಖಾಂತರ ವ್ಯಕ್ತಪಡಿಸುವುದು. ಕವಿ ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತಿರಬೇಕು. ಕವಿ ಮತ್ತು ರೈತ ಸಮಾಜದ ಎರಡು ಕಣ್ಣುಗಳಿದ್ದಂತೆ. ರೈತನಾದವನು ಭೂಮಿಯ ಜೊತೆ ಬೌದ್ಧಿಕ, ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತಾನೆ. ಕವಿ ಕಾವ್ಯದ ಜೊತೆಗೆ ಧ್ಯಾನಸ್ಥಿತಿಯನ್ನು ಹೊಂದಿದ್ದು, ಕಾವ್ಯಕ್ಕೆ ತನ್ನದೇ ಆದ ಅಭೀಂಸೆ ಇದೆ ಎಂದು ತಿಳಿಸಿದರು.

ವಿಎಸ್‌ಎಸ್‌ಎನ್ ಅಧ್ಯಕ್ಷ ವಿ.ಬಿ. ಚಂದ್ರು ಮಾತನಾಡಿ, ಅಂಧಕಾರದಲ್ಲಿರುವ ಸಮಾಜಕ್ಕೆ ಕವಿಗಳು ಕಾವ್ಯಗಳ ಮೂಲಕ ಕಣ್ಣು ತೆರೆಸಬೇಕಾಗಿದೆ. ಪ್ರಸ್ತುತ ವಿದ್ಯಮಾನದಲ್ಲಿ ಎಚ್ಚರಿಸುವ ಕೈಗಳು ಇಲ್ಲದಿರುವ ಕಾರಣ ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.

ವಿಎಸ್‌ಎಸ್‌ಎನ್ ನಿರ್ದೇಶಕ ರಾಂಪುರ ರಾಜಣ್ಣ ಮಾತನಾಡಿ, ವರ್ಷದ ಮೊದಲ ಹಬ್ಬ ಸಂಕ್ರಾಂತಿಯಾಗಿದ್ದು, ಹಳ್ಳಿಗಳಲ್ಲಿ ಸಡಗರದಿಂದ ಆಚರಿಸುವ ಹಬ್ಬದ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಹಳ್ಳಿಗಳಿಂದ ಪಟ್ಟಣಗಳಿಗೆ ಹೋಗಿ ಜೀವನ ಕಟ್ಟಿಕೊಳ್ಳುತ್ತಿರುವ ರೈತರು, ದಿನೇ ದಿನೇ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಮಾತನಾಡಿ, ಯುವ ಸಮುದಾಯ ಸ್ವಾರ್ಥಕ್ಕಾಗಿ ಕವಿತೆಗಳನ್ನು ರಚಿಸದೇ ಸಮಾಜದ ಹಿತಕ್ಕಾಗಿ ಕವಿತೆಗಳನ್ನು ಬರೆಯಬೇಕಾಗಿದೆ. ಸಾಹಿತ್ಯ ಕ್ಷೇತ್ರಕ್ಕೆ ಕಾರ್ಮೋಡ ಕವಿದಿದ್ದು, ಧರ್ಮ ಮತ್ತು ರಾಜಕಾರಣದ ತುಲನೆಯ ವ್ಯವಸ್ಥೆಯಿಂದ ಹೊರಬರಬೇಕಾಗಿದೆ. ಕವಿತೆಗಳಲ್ಲಿ ಬರೀ ಸಂಭ್ರಮದ ವಿಚಾರವಲ್ಲ, ಹಬ್ಬಗಳಲ್ಲಿ ಬಳಸುವ ಪದಗಳನ್ನು ಬಳಸಿ, ಈ ನೆಲದ ಮತ್ತು ನಾಡಿನ ಸಂಸ್ಕೃತಿಯನ್ನು ಉಳಿಸಬೇಕಾಗಿದೆ ಎಂದರು.

ವೇದಿಕೆಯಲ್ಲಿ ಗ್ರಾಪಂ ಸದಸ್ಯ ಎಸ್.ಪ್ರಭಾಕರ್, ಎಂಪಿಸಿಎಸ್ ಅಧ್ಯಕ್ಷ ಎನ್.ರಾಜೇಶ್, ಕಸಾಪ ನಿಕಟಪೂರ್ವ ತಾಲೂಕು ಅಧ್ಯಕ್ಷ ಶ್ರೀನಿವಾಸ ರಾಂಪುರ, ನಿವೃತ್ತ ಅಧ್ಯಾಪಕ ಚನ್ನವೀರೇಗೌಡ, ಜಿಲ್ಲಾ ಸಂಚಾಲಕ ಚಕ್ಕೆರೆ ಪುಟ್ಟಸ್ವಾಮಿ, ವೀಣಾ ಇದ್ದರು.

ಕವಿಗೋಷ್ಠಿಯಲ್ಲಿ ಬಿ.ಚಲುವರಾಜು ಮತ್ತೀಕೆರೆ, ಕೂ.ಗಿ.ಗಿರಿಯಪ್ಪ, ಕೂರಣಗೆರೆ ಕೃಷ್ಣಪ್ಪ, ಮಂಜೇಶ್‌ಬಾಬು, ಎಂ.ಶ್ರೀನಿವಾಸ್ ಅಬ್ಬೂರು, ಡಾ.ಹೇಮಂತ್‌ಕುಮಾರ್, ಬಸವರಾಜು ಅರಳಾಪುರ ಮುಂತಾದವರು ಕವಿತೆ ವಾಚಿಸಿದರು. ಗೀತಗಾಯನವನ್ನು ಗೋವಿಂದಹಳ್ಳಿ ಶಿವಣ್ಣ, ಕೆಂಗಲ್ ವಿನಯ್‌ಕುಮಾರ್, ರಾಮಕೃಷ್ಣಯ್ಯ ಬ್ರಹ್ಮಣೀಪುರ ನಡೆಸಿಕೊಟ್ಟರು.