ಸಾರಾಂಶ
ಸಂಕ್ರಾಂತಿ ಹಿನ್ನೆಲೆ ಸಿದ್ಧಾರೂಢರ ಮಠಕ್ಕೆ ಬೆಳಗ್ಗೆಯಿಂದ ಸಂಜೆಯ ವರೆಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಆರೂಢರ ಗದ್ದುಗೆಯ ದರ್ಶನ ಪಡೆದರು. ಮೂರುಸಾವಿರ ಮಠ ಸೇರಿದಂತೆ ನಗರದಲ್ಲಿರುವ ಪ್ರಮುಖ ದೇವಸ್ಥಾನಗಳಲ್ಲೂ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಹುಬ್ಬಳ್ಳಿ:
ವರ್ಷದ ಮೊದಲ ಹಿಂದೂ ಹಬ್ಬವಾದ ಮಕರ ಸಂಕ್ರಾಂತಿಯನ್ನು ಜನರು ಸಡಗರ, ಸಂಭ್ರಮದಿಂದ ಆಚರಿಸಿದರು. ಮಠ, ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರೆ, ಉದ್ಯಾನಗಳಲ್ಲಿ ಸಾವಿರಾರು ಜನರು ಕುಟುಂಬ ಸಮೇತರಾಗಿ ಆಗಮಿಸಿ ಸಹಭೋಜನ ಸವಿದರು.ಕುಟುಂಬ ಸಮೇತರಾಗಿ ಪ್ರಮುಖ ಪ್ರವಾಸಿ ತಾಣಗಳಿಗೆ, ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದರೆ, ಇನ್ನು ಕೆಲವರು ಮನೆಯಲ್ಲಿಯೇ ತರಹೇವಾರಿ ಭಕ್ಷ್ಯಗಳನ್ನು ತಯಾರಿಸಿ ದೇವಸ್ಥಾನ, ಉದ್ಯಾನಗಳಿಗೆ ತೆರಳಿ ಸಹಭೋಜನ ಮಾಡಿದರು. ಮಹಿಳೆಯರು ಸಾಂಪ್ರದಾಯಿಕ ಇಳಕಲ್ಲು, ರೇಷ್ಮೆ ಸೀರೆಯಲ್ಲಿ ತೊಟ್ಟು ಸಂಭ್ರಮಿಸಿದರು.
ಬಿಳಿಜೋಳ, ಸಜ್ಜೆ, ಎಳ್ಳಿನ ರೊಟ್ಟಿ, ಶೇಂಗಾ ಹಾಗೂ ಎಳ್ಳಿನ ಹೋಳಿಗೆ, ಬದನೆಕಾಯಿ ಪಲ್ಯ, ಅವರೆಕಾಳು, ಪುಂಡಿಪಲ್ಲೆ, ಎಣ್ಣೆಗಾಯಿ, ಹೆಸರುಕಾಳಿನ, ಸೌತೇಕಾಯಿ ಪಲ್ಯೆ, ಗಜ್ಜರಿ, ಜಿಲೇಬಿ, ಶೇಂಗಾ ಚೆಟ್ನಿ ಸೇರಿದಂತೆ ವಿವಿಧ ಬಗೆಯ ಭಕ್ಷ್ಯಭೋಜನಗಳು ಹಬ್ಬದ ಸಂಭ್ರಮ ಹೆಚ್ಚಿಸಿದವು.ಸಿದ್ಧಾರೂಢ ಮಠಕ್ಕೆ ಭಕ್ತರ ದಂಡು:
ಸಂಕ್ರಾಂತಿ ಹಿನ್ನೆಲೆ ಸಿದ್ಧಾರೂಢರ ಮಠಕ್ಕೆ ಬೆಳಗ್ಗೆಯಿಂದ ಸಂಜೆಯ ವರೆಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಆರೂಢರ ಗದ್ದುಗೆಯ ದರ್ಶನ ಪಡೆದರು. ಮೂರುಸಾವಿರ ಮಠ ಸೇರಿದಂತೆ ನಗರದಲ್ಲಿರುವ ಪ್ರಮುಖ ದೇವಸ್ಥಾನಗಳಲ್ಲೂ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಉಣಕಲ್ ಕೆರೆ ಉದ್ಯಾನ, ನೃಪತುಂಗ ಬೆಟ್ಟ, ತೋಳನಕೆರೆ, ನೀರಸಾಗರ ಜಲಾಶಯ, ಕೆಲಗೇರಿ ಕೆರೆ, ನವೀಲುತೀರ್ಥ, ಬಾದಾಮಿ, ಬನಶಂಕರಿ, ಮಹಾಕೂಟ, ಕೂಡಲಸಂಗಮ, ಗೋಕರ್ಣ, ಧರ್ಮಸ್ಥಳ, ಮುರ್ಡೇಶ್ವರ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ತೆರಳಿದ ಜನರು ಪುಣ್ಯ ಸ್ಥಾನ ಮಾಡಿ ಮರಳಿದರು.ಬಸ್ ರಶ್:
ನಗರದಿಂದ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಚರಿಸುತ್ತಿದ್ದ ಬಸ್‌ಗಳ ಸಂಖ್ಯೆ ಹೆಚ್ಚಿಸಿದರೂ ಸಹ ಬೆಳಗಿನ ವೇಳೆ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂದಿತು. ಪಾರ್ಕಿಂಗ್‌ಗೂ ಪರದಾಟ:ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಒಂದೇ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಇಲ್ಲಿನ ಉಣಕಲ್ಲು ಕೆರೆ ಉದ್ಯಾನದ ಮುಂದೆ ಕಾರು, ಬೈಕ್ ನಿಲ್ಲಿಸಲು ಜಾಗವಿಲ್ಲದೇ ಪರದಾಡುವಂತಾಯಿತು.