ಸನ್ನಡತೆಯೇ ಸಮಾಜದ ಆಸ್ತಿ: ಶ್ರೀ ಚಿನ್ಮಯಾನಂದ ಸ್ವಾಮಿ

| Published : Sep 02 2024, 02:01 AM IST

ಸಾರಾಂಶ

ತರೀಕೆರೆ, ಸನ್ಮಾರ್ಗ, ಸದಾಚಾರ, ಒಳ್ಳೆಯ ಆಲೋಚನೆ ಮತ್ತು ಸನ್ನಡತೆ ರೂಢಿಸಿಕೊಂಡಾಗ ನಾವು ಸಮಾಜಕ್ಕೆ ಆಸ್ತಿಯಾಗುತ್ತೇವೆ ಎಂದು ತಿಂಥಣಿ ಬ್ರಿಜ್ ಶ್ರೀ ಕನಕ ಗುರುಪೀಠ ಶ್ರೀ ಚಿನ್ಮಯಾನಂದ ಮಹಾಸ್ವಾಮಿ ಹೇಳಿದ್ದಾರೆ.

ಲಕ್ಕವಳ್ಳಿಯಲ್ಲಿ ಸಾಮೂಹಿಕ ಶ್ರೀ ಲಕ್ಷ್ಮಿ ಪೂಜೆ ಒಕ್ಕೂಟ ಪದಗ್ರಹಣ ಕಾರ್ಯಕ್ರಮಕನ್ನಡಪ್ರಭ ವಾರ್ತೆ ತರೀಕೆರೆ

ಸನ್ಮಾರ್ಗ, ಸದಾಚಾರ, ಒಳ್ಳೆಯ ಆಲೋಚನೆ ಮತ್ತು ಸನ್ನಡತೆ ರೂಢಿಸಿಕೊಂಡಾಗ ನಾವು ಸಮಾಜಕ್ಕೆ ಆಸ್ತಿಯಾಗುತ್ತೇವೆ ಎಂದು ತಿಂಥಣಿ ಬ್ರಿಜ್ ಶ್ರೀ ಕನಕ ಗುರುಪೀಠ ಶ್ರೀ ಚಿನ್ಮಯಾನಂದ ಮಹಾಸ್ವಾಮಿ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ತರೀಕೆರೆ ಶ್ರೀ ಮಹಾಗಣಪತಿ ಸೇವಾ ಸಮಿತಿ ಲಕ್ಕವಳ್ಳಿ, ಪ್ರಗತಿಬಂಧು ಸ್ವಸಹಾಯ ಒಕ್ಕೂಟ ಲಕ್ಕವಳ್ಳಿ ಶ್ರೀ ಮಹಾಗಣಪತಿ ಸಮುದಾಯ ಭವನದಲ್ಲಿ ಸಾಮೂಹಿಕ ಶ್ರೀಲಕ್ಷ್ಮಿ ಪೂಜೆ ಮತ್ತು ಒಕ್ಕೂಟ ಪದಗ್ರಹಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಮನುಷ್ಯ ಧರ್ಮದ ದಾರಿಯಲ್ಲಿ ನಡೆದಾಗ ಭಗವಂತನ ಅನುಗ್ರಹ ಪ್ರಾಪ್ತವಾಗುತ್ತದೆ. ಧರ್ಮಸ್ಥಳ ಧರ್ಮಾಧಿಕಾರಿ ಹಳ್ಳಿ ಹಳ್ಳಿಗಳಲ್ಲಿ ವಿವಿಧ ಪೂಜಾ ಕಾರ್ಯಕ್ರಮ ನಡೆಸಿ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ನುಡಿದರು.

ಲಕ್ಕವಳ್ಳಿ ಗ್ರಾಪಂ ಅಧ್ಯಕ್ಷ ಅಬ್ದುಲ್ ರೆಹಮಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮದಲ್ಲಿ ಎಲ್ಲ ಮಹಿಳೆಯರು ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಅವಕಾಶವನ್ನು ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ನೀಡಿದೆ. ಇಂತಹ ಕಾರ್ಯಕ್ರಮ ಪ್ರತಿಯೊಬ್ಬರಿಗೂ ಹೊಸ ಶಕ್ತಿ ಹಾಗೂ ಚೈತನ್ಯ ನೀಡುತ್ತದೆ ಎಂದು ತಿಳಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕಮಗಳೂರು ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ, ನೂತನ ಒಕ್ಕೂಟದ ಪದಾಧಿಕಾರಿ ಗಳಿಗೆ ಜವಾಬ್ದಾರಿ ಹಸ್ತಾಂತರ ಮಾಡಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಸ್ವಾವಲಂಬನೆ ಜೊತೆಗೆ ಸದಸ್ಯರಲ್ಲಿ ಧಾರ್ಮಿಕ ಚಿಂತನೆ, ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದರು.

ಕೆರೆ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಗ್ರಾಮ ಅಭಿವೃದ್ಧಿ ಯೋಜನೆ ಚಾರಿಟೇಬಲ್ ಟ್ರಸ್ಟ್ ಆಗಿ ರಾಜ್ಯಕ್ಕೆ ಮಾದರಿಯಾದ ಮದ್ಯ ವರ್ಜನ ಶಿಬಿರಗಳು, ಸಮುದಾಯ ಅಭಿವೃದ್ಧಿ, ಕೃಷಿ , ಶುದ್ಧಗಂಗಾ, ವಿಮಾ, ಕೆರೆಗಳ ಪುನಶ್ಚೇತನ ಕಾರ್ಯಕ್ರಮ ನಿರಂತರ ನಡೆಸಿಕೊಂಡು ಬರುತ್ತಿದ್ದು ರಾಜ್ಯಕ್ಕೆ ಮಾದರಿಯಾಗಿದೆ. ನೂತನ ಜವಾಬ್ದಾರಿ ಪಡೆದ ಪದಾಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡಿ ಒಕ್ಕೂಟ ಬಲವರ್ಧನೆಗೊಳಿಸಿ ಎಂದರು.

ಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷ ಎಲ್ ಎನ್ ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಕ್ತರಲ್ಲಿ ಅಡಗಿರುವ ಭಕ್ತಿ ಶ್ರದ್ಧೆ ಸಂರಕ್ಷಿಸಲು ಇಂತಹ ಕಾರ್ಯಕ್ರಮ ನಮಗೆ ಪ್ರೇರಣೆ ಎಂದು ತಿಳಿಸಿದರು.

ಶ್ರೀ ಲಲಿತಾ ಸಹಸ್ರನಾಮ ಮತ್ತು ಲಕ್ಷ್ಮಿಪೂಜೆಯನ್ನು ಪುರೋಹಿತ ಲಕ್ಕವಳ್ಳಿ ಶ್ರೀ ಹರ್ಷಭಟ್ ನಡೆಸಿಕೊಟ್ಟರು. ತಾಲೂಕು ಯೋಜನಾಧಿಕಾರಿ ಕುಸುಮಾಧರ್ ಕೆ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಕೆ ಎಸ್ ರಮೇಶ್‌, ಮಹಾಗಣಪತಿ ಸಮುದಾಯ ಭವನ ಅಧ್ಯಕ್ಷ ಎಲ್ ಎಂ ಸುಬ್ರಮಣಿ. ಕೃಷಿ ಮೇಲ್ವಿಚಾರಕ ಸಂತೋಷ್, ವಲಯದ ಮೇಲ್ವಿಚಾರಕ ಸುರೇಶ್, ಲಕ್ಷ್ಮಿ ಪೂಜಾ ಸಮಿತಿ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

31ಕೆಟಿಆರ್.ಕೆ.1ಃ

ತರೀಕೆರೆಯ ಲಕ್ಕವಳ್ಳಿಯಲ್ಲಿ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ನಡೆಸಿದ ಸಾಮೂಹಿಕ ಶ್ರೀ ಲಕ್ಷ್ಮಿ ಪೂಜೆ, ಪದಗ್ರಹಣ ಕಾರ್ಯಕ್ರಮವನ್ನು ಲಕ್ಕವಳ್ಳಿ ಗ್ರಾಪಂ ಅಧ್ಯಕ್ಷ ಅಬ್ದುಲ್ ರೆಹಮಾನ್ ಉದ್ಘಾಟಿಸಿದರು. ತಿಂಥಣಿಬ್ರಿಜ್ ಶ್ರೀ ಕನಕ ಗುರುಪೀಠ ಶ್ರೀ ಚಿನ್ಮಯಾನಂದ ಸ್ವಾಮಿ, ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ, ಯೋಜನಾಧಿಕಾರಿ ಕೆ.ಕುಸುಮಾಧರ್ ಮತ್ತಿತರರು ಇದ್ದರು.