ಗಂಗೆಕೊಳ್ಳದಲ್ಲಿ ಸಣ್ಣು ಗೌಡ ಶವ ಪತ್ತೆ

| Published : Jul 24 2024, 12:21 AM IST

ಸಾರಾಂಶ

ಶಿರೂರಿನಲ್ಲಿ ಗುಡ್ಡ ಕುಸಿತವಾಗುತ್ತಿದ್ದಂತೆ ಅಪಾರ ಪ್ರಮಾಣದ ಕಲ್ಲು ಮಣ್ಣು ಗಂಗಾವಳಿ ನದಿಗೆ ಬಿದ್ದುದರಿಂದ ನೀರು ಸುನಾಮಿ ರೀತಿಯಲ್ಲಿ ಗಂಗಾವಳಿ ನದಿಯ ಇನ್ನೊಂದು ಪಾರ್ಶ್ವದ ಉಳುವರೆಗೆ ನುಗ್ಗಿತ್ತು. ಉಳುವರೆಯಲ್ಲಿ ಮನೆಯ ಸಮೀಪ ಇದ್ದ ಸಣ್ಣು ಗೌಡ ಕಣ್ಮರೆಯಾಗಿದ್ದರು.

ಕಾರವಾರ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಣ್ಮರೆಯಾಗಿದ್ದ ಸಣ್ಣು ಹನುಮಂತ ಗೌಡ ಎಂಬಾಕೆಯ ಶವ ಮಂಗಳವಾರ ಗಂಗೆಕೊಳ್ಳ ಬಳಿ ಸಂಗಮ ಪ್ರದೇಶದಲ್ಲಿ ಪತ್ತೆಯಾಗಿದೆ. ಇದರೊಂದಿಗೆ ದುರಂತದಲ್ಲಿ ನಾಪತ್ತೆಯಾದ 10 ಜನರಲ್ಲಿ 8 ಜನರ ಶವ ಪತ್ತೆಯಾದಂತಾಗಿದೆ. ಶಿರೂರಿನಲ್ಲಿ ಗುಡ್ಡ ಕುಸಿತವಾಗುತ್ತಿದ್ದಂತೆ ಅಪಾರ ಪ್ರಮಾಣದ ಕಲ್ಲು ಮಣ್ಣು ಗಂಗಾವಳಿ ನದಿಗೆ ಬಿದ್ದುದರಿಂದ ನೀರು ಸುನಾಮಿ ರೀತಿಯಲ್ಲಿ ಗಂಗಾವಳಿ ನದಿಯ ಇನ್ನೊಂದು ಪಾರ್ಶ್ವದ ಉಳುವರೆಗೆ ನುಗ್ಗಿತ್ತು. ಉಳುವರೆಯಲ್ಲಿ ಮನೆಯ ಸಮೀಪ ಇದ್ದ ಸಣ್ಣು ಗೌಡ ಕಣ್ಮರೆಯಾಗಿದ್ದರು. ಉಳುವರೆಯಿಂದ ಸುಮಾರು 2 ಕಿಮೀ ದೂರದ ಗಂಗೆಕೊಳ್ಳ ಎಂಬಲ್ಲಿ ಗಂಗಾವಳಿ ಹಾಗೂ ಅರಬ್ಬಿ ಸಮುದ್ರ ಸಂಗಮ ಪ್ರದೇಶದ ತೀರದಲ್ಲಿ ಶವ ಪತ್ತೆಯಾಗಿದೆ. ಗಂಗಾವಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯ

ಕಾರವಾರ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಶೋಧ ಹಾಗೂ ತೆರವು ಕಾರ್ಯಾಚರಣೆ ಮುಂದುವರಿದಿದೆ. ಗಂಗಾವಳಿ ನದಿಯಲ್ಲಿ ಸಂಗ್ರಹವಾದ ಮಣ್ಣಿನ ಅಡಿಯಲ್ಲಿ ಪತ್ತೆ ಕಾರ್ಯ ಕೇಂದ್ರೀಕೃತವಾಗಿದೆ. ದುರಂತದಲ್ಲಿ ನಾಪತ್ತೆಯಾಗಿದ್ದ ಸಣ್ಣು ಗೌಡ ಎಂಬಾಕೆಯ ಶವ ಗಂಗೆಕೊಳ್ಳ ಸಂಗಮ ಪ್ರದೇಶದಲ್ಲಿ ಪತ್ತೆಯಾಗಿದೆ.ದುರಂತದಲ್ಲಿ ಕಣ್ಮರೆಯಾದ 10 ಜನರಲ್ಲಿ 8 ಶವ ಪತ್ತೆಯಾದಂತಾಗಿದ್ದು, ಎಲ್ಲ ಶವಗಳೂ ಸಮುದ್ರದಲ್ಲಿ ಪತ್ತೆಯಾಗಿದೆಯೇ ಹೊರತೂ ಮಣ್ಣಿನಡಿ ಯಾರ ಶವವೂ ಪತ್ತೆಯಾಗಿಲ್ಲ.

ಸೇನಾಪಡೆ ತಂಡ ಜಿಪಿಆರ್ ಮೂಲಕ ಶೋಧ ನಡೆಸುತ್ತಿದ್ದರೆ, ನೌಕಾಪಡೆ ಮುಳುಗು ತಜ್ಞರು ಸ್ಕೂಬಾ ಡೈವಿಂಗ್ ಮೂಲಕ ಹುಡುಕಾಟ ನಡೆಸಿದ್ದಾರೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಬೋಟ್‌ಗಳ ಮೂಲಕ ಪತ್ತೆ ಕಾರ್ಯ ಮುಂದುವರಿಸಿದೆ. ಆದರೆ ಮಂಗಳವಾರ ಸಂಜೆ ತನಕ ಯಾವುದೇ ಸುಳಿವು ದೊರಕಿಲ್ಲ.

ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಮಳೆರಾಯ ಸ್ವಲ್ಪ ಮಟ್ಟಿನ ಬಿಡುವು ನೀಡಿದ್ದರಿಂದ ಕಾರ್ಯಾಚರಣೆಗೆ ವೇಗ ಸಿಕ್ಕಿದೆ. ಈಗ ಬಹುತೇಕ ಗಂಗಾವಳಿ ನದಿಯಲ್ಲಿ ಶೋಧ ಮುಂದುವರಿದಿದ್ದು, ನಾಪತ್ತೆಯಾಗಿರುವ ಇಬ್ಬರ ಶೋಧ ಕಾರ್ಯದತ್ತವೇ ಕೇಂದ್ರೀಕೃತವಾಗಿದೆ.ಶಾಸಕ ಸತೀಶ ಸೈಲ್ ಮುತುವರ್ಜಿಯಲ್ಲಿ ಬೆಳಗಾವಿಯಿಂದ ಬೂಮ್ ಪೋಕ್ಲೇನ್ ಕಾರ್ಯಾಚರಣೆಗೆ ಬರುತ್ತಿದೆ. ಇದು 60 ಅಡಿ ಆಳದ ತನಕ ಮಣ್ಣನ್ನು ಎತ್ತಬಲ್ಲದು ಎಂದು ಹೇಳಲಾಗಿದೆ.ಹೆದ್ದಾರಿ ಪಕ್ಕದ ಮಣ್ಣಿನ ರಾಶಿಯನ್ನು ಸಮತಟ್ಟುಗೊಳಿಸುವ ಕಾರ್ಯ ನಡೆಯುತ್ತಿದೆ. ಶಿರೂರಿನಲ್ಲಿ ಇನ್ನೂ ಗುಡ್ಡ ಕುಸಿಯುವ ಸಾಧ್ಯತೆ ಇದೆ ಎಂದು ಜಿಯಾಲಾಜಿಕಲ್ ಸರ್ವೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಹೆದ್ದಾರಿ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ.

ಮತ್ತೊಬ್ಬ ಚಾಲಕ ನಾಪತ್ತೆ: ದೂರು

ಕೇರಳದ ಚಾಲಕ ಅರ್ಜುನ್ ಹಾಗೂ ಕುಮಟಾದ ಜಗನ್ನಾಥ ನಾಯ್ಕ ಶವ ಪತ್ತೆಯಾಗಬೇಕಾಗಿದೆ. ಈ ನಡುವೆ ತಮಿಳುನಾಡಿನ ಚಾಲಕ ಸರವಣನ್ ನಾಪತ್ತೆಯಾಗಿರುವುದಾಗಿ ದೂರು ಬಂದಿದೆ. ಗಂಗೆಕೊಳ್ಳದ ಲೋಕೇಶ ಕೂಡ ಕಣ್ಮರೆಯಾಗಿದ್ದು, ಈ ದುರಂತದಲ್ಲಿ ಮೃತರ ಸಂಖ್ಯೆ 12ಕ್ಕೇರುವ ಸಾಧ್ಯತೆ ಇದೆ. ದುರಂತದಲ್ಲಿ ನಾಪತ್ತೆಯಾದವರಲ್ಲಿ ಈಗಾಗಲೆ 8 ಶವಗಳು ಸಿಕ್ಕಿದ್ದು, ಉಳಿದವರೂ ಬದುಕಿರುವ ಸಾಧ್ಯತೆ ಇಲ್ಲ ಎಂದು ಕಾರ್ಯಾಚರಣೆ ನಡೆಸುತ್ತಿರುವವರು ಅಭಿಪ್ರಾಯಪಟ್ಟಿದ್ದಾರೆ.