ಸಾರಾಂಶ
ಸುವರ್ಣ ನುಡಿ ಸಂಭ್ರಮ ಐವತ್ತು, ಪ್ರಕೃತಿ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ.
ಕನ್ನಡಪ್ರಭ ವಾರ್ತೆ, ತರೀಕೆರೆನಮ್ಮ ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಯಿಂದ ದೂರ ಇರಬೇಕು. ತಂತ್ರಜ್ಞಾನ ಪ್ರಭಾವ ನಮ್ಮ ಮಕ್ಕಳ ಮೇಲೆ ಬೀರಿದ್ದು . ತಾಯಂದಿರು ಮಕ್ಕಳಿಗೆ ನಮ್ಮ ಸಂಸ್ಕಾರ ಹೇಳಿಕೊಟ್ಟು ಪ್ರಭಾವ ಬೀರಬೇಕು ಎಂದು ಪ್ರಕೃತಿ ಶ್ರೀ ಕಲಾ ಕುಟೀರ ಅಧ್ಯಕ್ಷರಾದ ಉಮಾಪ್ರಕಾಶ್ ಹೇಳಿದರು.ಕಸಾಪ, ಪ್ರಕೃತಿಶ್ರೀ ಕಲಾ ಕುಟೀರ ಇವರ ಸಂಯುಕ್ತ ಆಶ್ರಯದಲ್ಲಿ ಉಮಾ ಪ್ರಕಾಶ್ ಅವರ ಮನೆಯಂಗಳದಲ್ಲಿ ನಡೆದ ಸುವರ್ಣ ನುಡಿ ಸಂಭ್ರಮ- 50, ಪ್ರಕೃತಿ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು. ನಮ್ಮ ಹಿಂದಿನ ತಲೆಮಾರಿನವರು ನಮಗೆ ಸಂಸ್ಕಾರ ಹೇಳಿಕೊಟ್ಟಿದ್ದರಿಂದ ನಾವು ಅದರ ಪಾಲನೆಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಅದೇ ರೀತಿ ಜ್ಞಾನಾರ್ಜನೆಗೆ ಹಲವು ಕಥೆಗಳನ್ನು ಹೇಳಿ ಪುಸ್ತಕ ತಂದುಕೊಟ್ಟು ಓದುವಂತೆ ಪ್ರೇರೇಪಿಸುತ್ತಿದ್ದರು. ಮೊಬೈಲ್ , ಟಿವಿ ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುತ್ತಿದ್ದು, ಆದಷ್ಟು ಅದರಿಂದ ದೂರವಿರುವಂತೆ ಸಲಹೆ ನೀಡಿ ಪುಸ್ತಕ ಸಂಸ್ಕೃತಿಗೆ ಮುನ್ನುಡಿ ಬರೆಯಬೇಕು. ತಾಯಂದಿರು ಮಕ್ಕಳಿಗೆ ಓದಲು ಕಲಿಸಲು ಕಾಳಜಿವಹಿಸಬೇಕು ಎಂದರು.ಶಾರದಾ ಸತ್ಸಂಗ ಅಧ್ಯಕ್ಷೆ ಶಾಂತ ರೇವಣ್ಣ ಮಾತನಾಡಿ ಶ್ರೀ ಸ್ವಾಮಿ ವಿವೇಕಾನಂದರು ನಮಗೆಲ್ಲ ಸ್ಫೂರ್ತಿ, ಮಾತೃಭಾಷೆಯನ್ನು ಪ್ರೀತಿಸಿ, ಹೆಚ್ಚು ಬಳಸಬೇಕು. ಬೇರೆ ಭಾಷೆಯನ್ನು ಗೌರವಿಸಿ ಎಂದು ಹೇಳಿದರು.ಶಿಕ್ಷಕಿ ಡಾ. ನಾಗಜ್ಯೋತಿ ಮಹಿಳಾ ಸಾಹಿತ್ಯದ ತೌಲನಾತ್ಮಕ ಚಿಂತನೆ ಕುರಿತು ಮಾತನಾಡಿ ಮಹಿಳೆಯರು ಸಾಹಿತ್ಯಕ್ಕೂ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಬಿ.ಟಿ. ಲಲಿತಾ ನಾಯಕ್. ಅನುಪಮಾ ನಿರಂಜನ್, ಕಮಲಾ ಹಂಪನ, ಸವಿತಾ ನಾಗಭೂಷಣ್ ಹೀಗೆ ಮಹಿಳೆಯರ ಪಟ್ಟಿ ದೊಡ್ಡದಾಗಿ ಬೆಳೆಯುತ್ತಲೇ ಹೋಗುತ್ತಿದೆ. ಮಹಿಳೆಯರ ಪಾತ್ರ ಅತಿಮುಖ್ಯ ವಾಗಿದ್ದು ಸಮಾಜಮುಖಿಯಾಗಿ ಅವರು ಬಹಳಷ್ಟು ಶ್ರಮಿಸುತ್ತಿದ್ದಾರೆ ಎಂದರು.ಕಸಾಪ ಅಧ್ಯಕ್ಷ ರವಿ ದಳವಾಯಿ ಮಾತನಾಡಿ, ತಂತ್ರಜ್ಞಾನ ಪ್ರಭಾವದಿಂದ ಕನ್ನಡ ಮಾತನಾಡುವವರು ಕಡಿಮೆ ಯಾಗುತ್ತಿದ್ದು. ನಾವು ಕನ್ನಡವನ್ನು ಗೌರವಿಸಿದರೆ ನಮ್ಮ ಹೆತ್ತ ತಾಯಿಯನ್ನು ಗೌರವಿಸಿದಂತೆ ಅದು ಇಂತಹ ರಾಜ್ಯೋತ್ಸವ, ಮನೆಯಂಗಳದ ಕಾರ್ಯಕ್ರಮಗಳ ಮೂಲಕ ಹೆಚ್ಚು ಪ್ರಚಾರಗಳ ಮೂಲಕ ಕನ್ನಡ ಅನುಷ್ಠಾನಗೊಳಿಸಬೇಕು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ತಿಳಿಸಿದರು. ಜಿಟಿವಿ ಮಹಾ ನಟಿ ರನ್ನರ್ ಅಪ್ ತರೀಕೆರೆ ಟಿ.ಎಸ್. ದನ್ಯಶ್ರೀ ರವರಿಗೆ ಪ್ರಕೃತಿ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಂಜುನಾಥ್ ಕನ್ನಡ ಗೀತೆಗಳನ್ನು ಹಾಡಿದರು. ಪ್ರಕಾಶ್. ಲೇಖಕ ತ.ಮ.ದೇವಾನಂದ್, ಪತ್ರಕರ್ತ ನಾಗರಾಜ್, ಮಮತ, ಉಮಾ ದಯಾನಂದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
22ಕೆಟಿಆರ್.ಕೆ.6ಃತರೀಕೆರೆಯಲ್ಲಿ ಉಮಾ ಪ್ರಕಾಶ್ ಅವರ ಮನೆಯಂಗಳದಲ್ಲಿ ನಡೆದ ಸುವರ್ಣ ನುಡಿ ಸಂಭ್ರಮ ಐವತ್ತು, ಪ್ರಕೃತಿ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಕೃತಿಶ್ರೀ ಕಲಾ ಕುಟೀರ ಅಧ್ಯಕ್ಷೆ ಉಮಾ ಪ್ರಕಾಶ್, ತಾ.ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಮತ್ತಿತರರು ಭಾಗವಹಿಸಿದ್ದರು.