ಸಾರಾಂಶ
ಚಿಕ್ಕಮಗಳೂರು, ಒಕ್ಕಲಿಗರ ಸಂಸ್ಕೃತಿ, ಸಂಸ್ಕಾರವನ್ನು ಯುವ ಪೀಳಿಗೆಗೂ ಕಲಿಸಿ ಸಮಾಜಮುಖಿ ಕೆಲಸಗಳನ್ನು ಮಾಡಬೇಕೆಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮಿ ನುಡಿದರು.
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಒಕ್ಕಲಿಗರ ಸಂಸ್ಕೃತಿ, ಸಂಸ್ಕಾರವನ್ನು ಯುವ ಪೀಳಿಗೆಗೂ ಕಲಿಸಿ ಸಮಾಜಮುಖಿ ಕೆಲಸಗಳನ್ನು ಮಾಡಬೇಕೆಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮಿ ನುಡಿದರು.ನಗರದ ಎಐಟಿ ವೃತ್ತದಲ್ಲಿ ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘ ನೂತನವಾಗಿ ನಿರ್ಮಿಸಿರುವ ಬೆಳ್ಳಿ ಭವನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು. ವಿಘಟನಾತ್ಮಕವಾದ ಸಮಾಜ ಒಗ್ಗೂಡಿದಾಗ ಶಕ್ತಿ ಬರುತ್ತದೆ. ಹೀಗಾಗಿ ಆ ಸಮುದಾಯದ ಶಕ್ತಿ ಸಂಘಟನಾತ್ಮಕ, ರಚನಾತ್ಮವಾಗಿ ಬೆಳೆಯಲು ಸಾಧ್ಯವಾಗಿದೆ. ಈ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿ ಕಡೆಗೆ ಹೋಗಿದ್ದೆಯಾದಲ್ಲಿ ಉದ್ಧಾರ ಆಗುವುದು ದೇಶ ಎಂದ ಶ್ರೀಗಳು, ಈ ಸಂದರ್ಭದಲ್ಲಿ ಸಮುದಾಯದ ಎಲ್ಲ ಹಿರಿಯರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.ಒಕ್ಕಲಿಗ ಜನಾಂಗದವರು ಸಂಘ ಸಂಘಟನೆ ಮೂಲಕ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿಯೂ ಬೆಳೆದು ಸಮಾಜಮುಖಿ ಕೆಲಸ ಗಳನ್ನು ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಬೆಳ್ಳಿ ಬಾಗಿನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಚಿಕ್ಕಮಗಳೂರಿಗೆ ಸಾಕಷ್ಟು ಪ್ರವಾಸಿ ಗರು ಬರುತ್ತಿದ್ದಾರೆ. ಇಲ್ಲಿ ಪ್ರವಾಸೋದ್ಯಮ ಬೆಳೆಸುವಲ್ಲಿ ಸಂಘ ಸಂಸ್ಥೆ ಸಾರ್ವಜನಿಕರ ಅಭಿಪ್ರಾಯ ಪಡೆಯುತ್ತಿದ್ದೇವೆ. ಸ್ವಾಮೀಜಿಗಳು ತಮ್ಮ ಮಾರ್ಗದರ್ಶನ, ಸಲಹೆ ನೀಡಬೇಕು ಎಂದರು.ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಮಾತನಾಡಿ, ಒಕ್ಕಲಿಗರೇ ಕೃಷಿ ಸಂಸ್ಕೃತಿ ರೂವಾರಿಗಳು. ಒಕ್ಕಲಿಗರು ಸಮುಷ್ಠಿ ಹಿತವನ್ನು ಬಯಸುವವರು. ಪ್ರಾಣಿ ಪಕ್ಷಿಗಳ ಬಗ್ಗೆ ಆಲೋಚಿಸುವವರು. ಒಕ್ಕಲಿಗ ಸಂಸ್ಕೃತಿ ಬೇಧ ಭಾವ ಮಾಡಿದ ಸಮಾಜವಲ್ಲ. ಉದಾತ್ತ ಸಂಸ್ಕೃತಿ ವಾರಸುದಾರರು ನಾವು ಎಂದರು.
ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ನಮ್ಮ ಒಕ್ಕಲಿಗರ ಸಮಾಜದ ಜನಾಂಗ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಲು ಸಾಧ್ಯ ಎಂಬುವುದಕ್ಕೆ ಸುಂದರವಾದ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಗೊಳ್ಳುತ್ತಿರುವುದೇ ಸಾಕ್ಷಿ, ಹಲವಾರು ಯೋಜನೆಗಳ ಯೋಚನೆಗಳ ಚಿಂತನೆಗಳಡಿ ಒಕ್ಕಲಿಗ ಸಂಘ ಮುಂದೆ ಸಾಗುತ್ತಿದೆ ಎಂದರು.ವೈಯಕ್ತಿಕ ರಾಜಕಾರಣ ಮಾಡುವುದು ಸರಿಯಲ್ಲ, ಬದುಕಿಗೆ ಕಪ್ಪು ಚುಕ್ಕಿ ಇಡುವ ಕೆಲಸ ನಡೆಯುತ್ತಿದೆ. ವೈಯಕ್ತಿಕವಾಗಿ ಯಾರನ್ನೂ ದೂಷಣೆ ಮಾಡಬಾರದು. ನಮ್ಮಗಳ ಬದುಕು ಏಡಿಗಳಾಗಬಾರದು, ಒಬ್ಬರ ಕಾಲನ್ನು ಇನ್ನೊಬ್ಬರು ಹಿಡಿದು ಎಳೆಯುವಂತಾಗಬಾರದು ಎಂದು ಹೇಳಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ಸಂಘದ ಸರ್ವ ಸದಸ್ಯರ ಸಹಕಾರದಿಂದ ಬೆಳ್ಳಿ ಭವನ ಕಟ್ಟಡ ಅತಿ ಕಡಿಮೆ ಅವಧಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಒಕ್ಕಲಿಗರ ಸಂಘ ಪ್ರಸ್ತುತ 10 ಸಾವಿರ ಸದಸ್ಯರನ್ನು ಹೊಂದಿದ್ದು, ಜೆವಿಎಸ್ ಶಾಲೆ ಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಕಲಿಸಲು ಹೆಚ್ಚು ಆದ್ಯತೆ ನೀಡಲಾಗಿದೆ. ಶಾಲೆ 2 ಹಳೇ ಬಸ್ಸಿನ ಜೊತೆಗೆ ಪ್ರಸ್ತುತ 2 ಹೊಸ ಬಸ್ಸುಗಳನ್ನು ಖರೀದಿಸಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಶಾಸಕ ಟಿ.ಡಿ. ರಾಜೇಗೌಡ, ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇ ಗೌಡ, ಮಾಜಿ ಸಚಿವ ಡಿ.ಎನ್. ಜೀವರಾಜ್, ಭದ್ರಾ ಕಾಡ ಅಧ್ಯಕ್ಷ ಡಾ.ಅಂಶುಮಂತ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್, ಗೌರವ ಕಾರ್ಯದರ್ಶಿ ಎಂ.ಸಿ. ಪ್ರಕಾಶ್, ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ರೀನಾ ಸುಜೇಂದ್ರ, ಸುಜಿತ್, ಮೇಘನಾ ಉಪಸ್ಥಿತರಿದ್ದರು.ಪೋಟೋ ಫೈಲ್ ನೇಮ್ 25 ಕೆಸಿಕೆಎಂ 5ಚಿಕ್ಕಮಗಳೂರಿನ ಎಐಟಿ ವೃತ್ತದಲ್ಲಿ ಜಿಲ್ಲಾ ಒಕ್ಕಲಿಗರ ಸಂಘ ನಿರ್ಮಾಣ ಮಾಡಿರುವ ಬೆಳ್ಳಿ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮವನ್ನು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಉದ್ಘಾಟಿಸಿದರು. ಸಚಿವ ಕೆ.ಜೆ. ಜಾರ್ಜ್, ಟಿ.ಡಿ. ರಾಜೇಗೌಡ, ಸಿ.ಟಿ. ರವಿ, ಪ್ರಾಣೇಶ್, ಭೋಜೇಗೌಡ, ಟಿ. ರಾಜಶೇಖರ್ ಇದ್ದರು.