ಸಾರಾಂಶ
ಗೋಕರ್ಣ: ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣದ ಜತೆ ಸಮಾಜದಲ್ಲಿ ಮಾದರಿಯಾಗಿ ಬದುಕುವ ಶಿಕ್ಷಣವನ್ನು ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಶ್ರೀಸಾರ್ವಭೌಮ ಗುರುಕುಲ ನೀಡುತ್ತಿದ್ದು, ಶೇ. 100 ಅಂಕದ ಜತೆ ಶೇ. 100 ಉತ್ತಮ ಸಂಸ್ಕಾರವನ್ನು ಕೊಡುತ್ತಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.
ಶುಕ್ರವಾರ ಮೂಲಮಠ ಅಶೋಕೆಯಲ್ಲಿ ನಡೆದ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳಿಗೆ ಹಾಗೂ ಈ ಸಾಧನೆಗೆ ಕಾರಣರಾದ ಶಿಕ್ಷಕ ವೃಂದಕ್ಕೆ ಶತಸಂಭ್ರಮ ವಿಶೇಷ ಪುರಸ್ಕಾರ ಕಾರ್ಯಕ್ರಮದ ಪುರಸ್ಕರಿಸಿ ಆರ್ಶೀವಚನ ನೀಡಿದರು.ಹಕ್ಕಿ ಹೇಗೆ ಮೊಟ್ಟೆಯನ್ನು ಕಾವು ಕೊಟ್ಟು ಮರಿ ಮಾಡುತ್ತದೆಯೋ ಹಾಗೇ ಗುರು ಆತ್ಮದ ಅರಿವಿನ ಕಾವು ನೀಡಿ ಅಜ್ಞಾನದಿಂದ ಜ್ಞಾನದೆಡೆಗೆ ಬರಲು ಕಾರಣನಾಗುತ್ತಾನೆ. ಹೀಗೆ ಉತ್ತಮ ಶಿಕ್ಷಣ ನೀಡಿದ ಗುರುವೃಂದವು ಅಭಿನಂದನಾರ್ಹರರು. ಸಾಧನೆಗೆ ಕಾರಣರಾದ ಇವರನ್ನು ಸನ್ಮಾನಿಸುತ್ತಿದೇವೆ. ಈ ವಷಾರಂಭ ಹರ್ಷಾರಂಭವಾಗಲಿ. ನಿರಂತರ ಸಾಧನೆ ಇರಲಿ ಎಂದು ಆಶಿಸಿದರು. ಪ್ರಸಕ್ತ ವರ್ಷ ಸಾಧನೆ ಮಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅವರು ನೀಡಿದ ಶುಲ್ಕವನ್ನು ಮರಳಿ ನೀಡಲಾಗುತ್ತಿದೆ ಎಂದರು. ಎಲ್ಲರೂ ಒಟ್ಟಾಗಿ ಒಂದೇ ಮನಸ್ಸಿನಿಂದ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ ಉತ್ತಮವಾಗಿ ಮನ್ನಡೆಸಿಕೊಂಡು ಹೋಗಬೇಕು ಎಂದರು.ವಿದ್ಯಾರ್ಥಿಗಳಿಗೆ ಯಶಸ್ಸು ಎಂಬುದು ಬಾಯಿಗೆ ರುಚಿ ತಿಂಡಿ ನೀಡಿದಂತೆ ಇರಬೇಕು. ಅಂದರೆ ಮತ್ತೆ ಅದು ಬೇಕು ಎಂಬ ಹಂಬಲದಂತೆ ಮತ್ತಷ್ಟು ಯಶಸ್ಸು ಸಾಧಿಸಲು ಪ್ರೇರಪಣೆಯಾಗಬೇಕು ಎಂದರು.
ಇದಕ್ಕೂ ಮೊದಲು ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಪನ್ನಗ್ ಭಟ್, ದ್ವಿತೀಯ ಸ್ಥಾನ ಪಡೆದ ರಾಮಚಂದ್ರ ಉಪಾಧ್ಯ, ತೃತೀಯ ಸ್ಥಾನ ಪಡೆದ ಸುಮಖ ಹೆಗಡೆ, ತನ್ವಿ ಗೌರಿ ಹಾಗೂ ಪಿಯುಸಿ ಸಾಧನೆ ಮಾಡಿ ಕಾಂತಿ ಭಟ್ ಹಾಗೂ ಉನ್ನತ ಸ್ಥಾನ ಪಡೆದ ಎಲ್ಲ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕ ವೃಂದವರನ್ನು ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.ಸಾರ್ವಭೌಮ ಗುರುಕುಲದ ಮುಖ್ಯಾಧ್ಯಾಪಕಿ ಸೌಭಾಗ್ಯ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಶಶಿಕಲಾ ಕೂರ್ಸೆ, ಭೌತಶಾಸ್ತ್ರ ವಿಭಾಗದ ಶಿಕ್ಷಕಿ ಯಶಸ್ವಿನಿ, ಪರಂಪರಾ ಗುರುಕುಲದ ಶಿಕ್ಷಕರಾದ ನರಸಿಂಹ ಭಟ್, ಶಿಕ್ಷಕ ಲೋಹಿತ ಹೆಬ್ಬಾರ್, ಮಂಜುನಾಥ ಶರ್ಮಾ ಮಾತನಾಡಿದರು.ಕಾರ್ಯಕ್ರಮದಲ್ಲಿ ವಿವಿವಿ ಗೌರವಾಧ್ಯಕ್ಷ ಡಿ.ಡಿ. ಶರ್ಮಾ, ವ್ಯವಸ್ಥಾ ಪರಿಷತ್ತಿನ ಅಧ್ಯಕ್ಷ ಮಂಜುನಾಥ ಭಟ್ಟ, ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ಅರುಣ ಹೆಗಡೆ, ವಿವಿವಿ ಮಹಾ ಸಮಿತಿಯ ಅಧ್ಯಕ್ಷ ಎಸ್.ಎಸ್. ಹೆಗಡೆ, ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉದಯಶಂಕರ್ ಮಿತ್ತೂರು, ಶಿವ ಗುರುಕುಲದ ಪ್ರಾಚಾರ್ಯ ಮಂಜುನಾಥ ಭಟ್ಟ, ಪಾರಂಪರಿಕ ವಿಭಾಗದ ವರಿಷ್ಟಾಚಾರ್ಯ ಸತ್ಯನಾರಾಯಣ ಶರ್ಮಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಈಶ್ವರ ಭಟ್ ಹಾಗೂ ಗಣೇಶ ಜೋಶಿ ನಿರ್ವಹಿಸಿದರು.ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಮನೆಯಂತೆ ತಮ್ಮನ್ನು ನೋಡಿಕೊಳ್ಳುವ ರೀತಿ ಹಾಗೂ ಸಿಗುವ ಉತ್ತಮ ಶಿಕ್ಷಣ ಶ್ರೀಗಳ ಆರ್ಶೀವಾದ ನಮ್ಮ ಮುಂದಿನ ಜೀವನಕ್ಕೆ ದಾರದೀಪವಾಗಿದೆ ಎಂದರು. ಗುರುಕುಲ ವಿದ್ಯಾರ್ಥಿಗಳಿಂದ ವಿಶೇಷ ಗುರುವಂದನಾ ಹಾಡು, ನೃತ್ಯ ನಡೆದಿದ್ದು ಎಲ್ಲರನ್ನು ಆಕರ್ಷಿಸಿತು.