ಸಂಸ್ಕೃತ ಅತ್ಯಂತ ಸುಲಭದ, ಸರಳ ಭಾಷೆ

| Published : Aug 24 2024, 01:17 AM IST

ಸಾರಾಂಶ

ಸಂಸ್ಕೃತ ಭಾಷೆಯು ಎಲ್ಲಾ ಭಾಷೆಗಳ ತಾಯಿಯಂತೆ

ಕನ್ನಡಪ್ರಭ ವಾರ್ತೆ ಮೈಸೂರು

ಸಂಸ್ಕೃತ ಅತ್ಯಂತ ಸುಲಭದ ಹಾಗೂ ಸರಳ ಭಾಷೆಯಾಗಿದ್ದು, ನಮಗೆ ಅರಿವಿಲ್ಲದೆ ದಿನನಿತ್ಯದ ವ್ಯವಹಾರದಲ್ಲಿ ಹಲವಾರು ಸಂಸ್ಕೃತ ಶಬ್ದಗಳನ್ನು ಬಳಸುತ್ತೇವೆ ಎಂದು ಸಂಸ್ಕೃತ ಭಾರತೀಯ ಡಾ. ಮೋಹನ್ ತಿಳಿಸಿದರು.

ನಗರದ ಸರಸ್ವತಿಪುರಂನ ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಂಸ್ಕೃತೋತ್ಸವವನ್ನು ಉದ್ಘಾಟಿಸಿದ ಬಳಿಕ ಭಾರತೀಯ ಗಣಿತ ಪರಂಪರೆಯಲ್ಲಿ ಸಂಸ್ಕೃತದ ಬಳಕೆ ಕುರಿತು ಉಪನ್ಯಾಸ ನೀಡಿದ ಅವರು, ಸಂಸ್ಕೃತ ಭಾಷೆಯು ಅತ್ಯಂತ ಪ್ರಾಚೀನ ಭಾಷೆಯಾಗಿದ್ದು, ದೇವ ಭಾಷೆ, ಸರಳ ಭಾಷೆ ಎಂದು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಸಂಸ್ಕೃತ ಭಾಷೆಯು ಎಲ್ಲಾ ಭಾಷೆಗಳ ತಾಯಿಯಂತೆ ಎಂದು ಹೇಳಿದರು.

ಹಲವಾರು ಋಷಿಗಳು, ಕವಿಗಳು ಸಂಸ್ಕೃತದಲ್ಲಿ ಸಾಹಿತ್ಯ ರಚನೆ ಮಾಡಿ ಸಂಸ್ಕೃತ ಭಾಷೆಯನ್ನು ಶ್ರೀಮಂತಗೊಳಿಸಿ ಅನೇಕ ಯುವಕರಿಗೆ ಮಾರ್ಗದರ್ಶಕರಾಗಿದ್ದಾರೆ. ಸಂಸ್ಕೃತ ಭಾಷೆಗೂ, ಗಣಿತಶಾಸ್ತ್ರಕ್ಕೂ ಅವಿನಾಭಾವ ಸಂಬಂಧವಿದ್ದು, ಗಣಿತಶಾಸ್ತ್ರಕ್ಕೆ ಸಂಬಂಧಿಸಿದಂತೆ ಹಲವಾರು ಸಂಸ್ಕೃತಜ್ಞರು ಕೃತಿಗಳನ್ನು ರಚಿಸಿದ್ದಾರೆ. ಭಾಸ್ಕರಾಚಾರ್ಯ, ಲೀಲಾವತಿ ಮುಂತಾದವರು ಪ್ರಾತಃಸ್ಮರಣೀಯರು ಎಂದರು.

ಹೆಸರಾಂತ ಭೌತಶಾಸ್ತ್ರಜ್ಞ ಐನ್ ಸ್ಟೀನ್, ಕ್ಷಿಪಣಿ ಮನುಷ್ಯ ಡಾ. ಅಬ್ದುಲ್ ಕಲಾಂ ಕೂಡ ಸಂಸ್ಕೃತ ಭಾಷೆಯನ್ನು ತಿಳಿದವರಾಗಿದ್ದರು. ಸಂಸ್ಕೃತ ಗ್ರಂಥಗಳಲ್ಲಿ ಗಣಿತದ 8 ಮೂಲಭೂತ ತತ್ವಗಳು, ದಶಮಾಂಶ ಮತ್ತು ಭಿನ್ನರಾಶಿಗಳ ಅಧ್ಯಯನ, ಪೂರ್ಣಾಂಕ ಮತ್ತು ವರ್ಗಸಮೀಕರಣಗಳ ಬಗ್ಗೆ ವಿವರಣೆ, ಸಮಾಂತರ ಮತ್ತು ಗುಣೋತ್ತರ ಶ್ರೇಣಿ ಮತ್ತು ಶ್ರೇಣಿಗಳ ಬಗ್ಗೆ ವಿವರಣೆಯನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಈ ಸಂಸ್ಕೃತ ಗ್ರಂಥಗಳ ಪರಾಮರ್ಶನೆಯನ್ನು ಮಾಡಿ ಗಣಿತಶಾಸ್ತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂದು ಅವರು ಕರೆ ನೀಡಿದರು.

ಇದೇ ವೇಳೆ ಸಂಸ್ಕೃತ ರಸಪ್ರಶ್ನೆ ಮತ್ತು ಸ್ಮರಣಶಕ್ತಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಕೃತ ರಸಪ್ರಶ್ನೆ- ವಿ. ಶಾರದಾ(ಪ್ರಥಮ), ವಿಶ್ರುತ್ ಎಸ್. ಪ್ರಸಾದ್(ದ್ವಿತೀಯ), ಕೆ.ವಿ. ಅದ್ವೈತ್(ತೃತೀಯ). ಸ್ಮರಣಶಕ್ತಿ ಸ್ಪರ್ಧೆ- ರಿತೀಶ(ಪ್ರಥಮ), ಕೀರ್ತನ ಆರ್. ನಾಯಕ (ದ್ವಿತೀಯ) ಮತ್ತು ಕೆ. ಸ್ಫೂರ್ತಿ (ತೃತೀಯ).

ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್. ವಾಸುದೇವ ಭಟ್, ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್, ಸಂಸ್ಕೃತ ಉಪನ್ಯಾಸಕ ಕೆ.ವಿ. ಸಂಜಯ, ಹಿಂದಿ ಉಪನ್ಯಾಸಕ ಎನ್. ಪ್ರದೀಪ್ ಮೊದಲಾದವರು ಇದ್ದರು. ಕೆ. ಭುವನಾ ಪ್ರಾರ್ಥಿಸಿದರು. ಹರಿದ್ವರ್ಣ ಜೋಯೀಸ್ ಅವರು ವೇದಘೋಷವನ್ನು ಪ್ರಸ್ತುತಪಡಿಸಿದರು. ಕೆ.ವಿ. ಅದ್ವೈತ್ ಸ್ವಾಗತಿಸಿದರು. ವಿ. ರಿತೀಶ ವಂದಿಸಿದರು. ಅನಿರುದ್ಧ ನಿರೂಪಿಸಿದರು.