ಸಂಸ್ಕೃತ ಹೃದಯದ ಭಾಷೆ: ಗುರುಪಾದಪ್ಪ ಅಂಬಲಿ

| Published : Feb 01 2025, 12:02 AM IST

ಸಾರಾಂಶ

ಜೀವನ ಜ್ಞಾನದಿಂದ ಅಲಂಕರಿಸಬೇಕೇ ವಿನಃ ಆಭರಣದಿಂದ ಅಲ್ಲ. ಜೀವನದಲ್ಲಿ ಎಲ್ಲ ಅಲಂಕಾರಗಳೂ ಕ್ಷಣಿಕ, ಜ್ಞಾನದ ಅಲಂಕಾರ ಶಾಶ್ವತವಾದದ್ದು. ಜ್ಞಾನದಿಂದ ಕೂಡಿದ ಮನುಷ್ಯ ಜೀವನದಲ್ಲಿ ಸರಳವಾಗಿ ಬದುಕನ್ನು ಸಾಗಿಸಲಿಕ್ಕೆ ಸಾಧ್ಯವಾಗುತ್ತದೆ‌ ಎಂದು ಉತ್ತರ ಭಾರತದ ಸಂಸ್ಕೃತ ಭಾರತೀ ಅಧ್ಯಕ್ಷ ಗುರುಪಾದಪ್ಪ ಅಂಬಲಿ ಹೇಳಿದರು.

ಹನುಮಸಾಗರ: ಸಂಸ್ಕೃತ ಭಾಷೆ ವಿಶ್ವಭಾಷೆಯಾಗಿದೆ, ಸಂಸ್ಕೃತ ಕಲಿಯುವುದು ಅತಿ ಸುಲಭವಾದದ್ದು ಎಂದು ಉತ್ತರ ಭಾರತದ ಸಂಸ್ಕೃತ ಭಾರತೀ ಅಧ್ಯಕ್ಷ ಗುರುಪಾದಪ್ಪ ಅಂಬಲಿ ಹೇಳಿದರು.

ಗ್ರಾಮದ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಹತ್ತು ದಿವಸಗಳ ಉಚಿತ ಸಂಸ್ಕೃತ ಸಂಭಾಷಣೆ ಶಿಬಿರ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಾಲೆಗೆ ಹೋಗಿ‌‌ ಶುಲ್ಕ ಕೊಟ್ಟು ಕಲಿಯುತ್ತಾರೆ. ಆದರೆ ಇಲ್ಲಿ ಯಾವುದೇ ಶುಲ್ಕ ಇರುವುದಿಲ್ಲ. ಉಚಿತವಾಗಿ ಹತ್ತು ದಿವಸದಲ್ಲಿ ಮಾತನಾಡಲಿಕ್ಕೆ ಕಲಿಯುತ್ತೀರಿ. ಹನುಮಸಾಗರ ಸಂಸ್ಕೃತ ಸಾಗರವಾಗಬೇಕು. ಜೀವನ ಜ್ಞಾನದಿಂದ ಅಲಂಕರಿಸಬೇಕೇ ವಿನಃ ಆಭರಣದಿಂದ ಅಲ್ಲ. ಜೀವನದಲ್ಲಿ ಎಲ್ಲ ಅಲಂಕಾರಗಳೂ ಕ್ಷಣಿಕ, ಜ್ಞಾನದ ಅಲಂಕಾರ ಶಾಶ್ವತವಾದದ್ದು. ಜ್ಞಾನದಿಂದ ಕೂಡಿದ ಮನುಷ್ಯ ಜೀವನದಲ್ಲಿ ಸರಳವಾಗಿ ಬದುಕನ್ನು ಸಾಗಿಸಲಿಕ್ಕೆ ಸಾಧ್ಯವಾಗುತ್ತದೆ‌ ಎಂದು ಹೇಳಿದರು.

ನಮ್ಮ ದೇಶದ ಸಂಸ್ಕೃತ ಭಾಷೆಯನ್ನು ಬೆಳೆಸಬೇಕು. ನಿಸ್ವಾರ್ಥದಿಂದ ಸೇವೆ ಮಾಡಬೇಕು. ನಮ್ಮ ರಕ್ತದಲ್ಲಿ ಸಂಸ್ಕೃತ ಭಾಷೆ ಇದೆ, ಅದು ಮರೆಯಾಗಿದೆ. ನಿತ್ಯ ಒಂದು ತಾಸು ಸಂಸ್ಕೃತ ಅಭ್ಯಾಸ ‌ಮಾಡಿದರೆ ತಾನಾಗಿಯೇ ನಿಮಗೆ ಸಂಸ್ಕೃತ ಬರುತ್ತದೆ. ವ್ಯಾಕರಣ ಶುದ್ಧವಾದ ಭಾಷೆ ಸಂಸ್ಕೃತ. ಇನ್ನುಳಿದ ಭಾಷೆಗಳಿಂದ ಭಿನ್ನವಾಗಿದೆ. ಆಂಗ್ಲಭಾಷೆ ನಮ್ಮ ಸಂಸ್ಕೃತಿ ಹಾಳು ಮಾಡುತ್ತಿದೆ. ನಮ್ಮ ಸಂಸ್ಕೃತ ಭಾಷೆ ಅಮೃತ ಭಾಷೆಯಾಗಿದೆ. ದೇವ ಭಾಷೆಯಾಗಿದೆ. ಜ್ಞಾನಪೀಠ ಪ್ರಶಸ್ತಿ ತೆಗೆದುಕೊಂಡವರು ಎಲ್ಲರೂ ಸಂಸ್ಕೃತ ಕಲಿತವರು. ನಾವು ಏನೇ ಕೆಲಸ ಮಾಡಿದರೂ ಹೃದಯದಿಂದ ಮಾಡಬೇಕು. ಒಳ್ಳೆಯ ಕೆಲಸ ಮಾಡುವುದು, ಉತ್ತಮ ಸಮಾಜಕ್ಕಾಗಿ ಸಮಾಜನಿಧಿಯನ್ನು ಕೊಡಬೇಕು. ಭಾಷೆ ಮತ್ತು ದೇಶ ಒಂದು ಅವಿನಾಭಾವ ಸಂಬಂಧವಿರುತ್ತದೆ. ಭಾಷೆ ನಾಷವಾದರೆ ಸಂಸ್ಕೃತಿ ನಾಶವಾಗುತ್ತದೆ ಮತ್ತು ದೇಶ ನಾಶವಾಗುತ್ತದೆ. ಇಂತಹ ನಾಶವಾಗುತ್ತಿರುವ ಭಾಷೆಯನ್ನು ಎಲ್ಲರೂ ಬೆಳೆಸುವ ಕಾರ್ಯ ಮಾಡಬೇಕು ಎಂದರು.

ಉತ್ತರ ಭಾರತದ ಸಂಸ್ಕೃತ ಭಾರತೀ ಉಪಾಧ್ಯಕ್ಷ ಚಂದ್ರಶೇಖರ,‌ ದೇವಾಂಗ ಸಮಾಜದ ಅಧ್ಯಕ್ಷ ಶಂಕ್ರಪ್ಪ ಸಿನ್ನೂರ, ಶಿವಶಂಕರ ಮೆದಿಕೇರಿ. ಸುಬ್ರತ‌‌ ಆಹೋ, ಡಾ. ಶಂಕರ ಹುಲಮನಿ, ರಾಮ ಕಾಟ್ವಾ, ಸುನಂದಾ ಮೆದಿಕೇರಿ, ಸುನೀತಾ ಕೊಮಾರಿ, ಈರಪ್ಪ ಸಿನ್ನೂರ, ಶ್ರೀನಿವಾಸ ಸಿನ್ನೂರ ಇತರರು ಇದ್ದರು.