ಸಾರಾಂಶ
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ಸಹಯೋಗದೊಂದಿಗೆ ಸಿದ್ಧಮಲ್ಲೇಶ್ವರ ಸಂಸ್ಕೃತ ಪಾಠಶಾಲಾ, ವತಿಯಿಂದ ನಗರದ ಯುನಿವರ್ಸ್ ಸ್ಕೂಲ್ ಶಾಲಾ ಆವರಣದಲ್ಲಿ ಅಸ್ಮಾಕಂ ಸಂಸ್ಕೃತಮ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಂಸ್ಕೃತ ಭಾಷೆ ಆಧುನಿಕ ಜಗತ್ತಿಗೆ ಕಲ್ಪವೃಕ್ಷ ಕಾಮಧೇನುವಿನಂತೆ ಎಂದು ಜೆಎಸ್ಎಸ್ ಸಂಸ್ಕೃತ ಪಾರಶಾಲೆಯ ಸಹ ಶಿಕ್ಷಕರು ಹಾಗೂ ವೇದಾಗಮ ಪ್ರವೀಣರು ಆದ ವಿದ್ವಾನ್ ಕೆ.ಬಿ.ಮಲ್ಲಿಕಾರ್ಜುನ್ ತಿಳಿಸಿದರು.ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ಸಹಯೋಗದೊಂದಿಗೆ ನಗರದ ಸಿದ್ಧಮಲ್ಲೇಶ್ವರ ಸಂಸ್ಕೃತ ಪಾಠಶಾಲಾ, ವತಿಯಿಂದ ನಗರದ ಯುನಿವರ್ಸ್ ಸ್ಕೂಲ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ "ಅಸ್ಮಾಕಂಸಂಸ್ಕೃತಮ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು,ಬಾಲ್ಯದಿಂದಲೇ ಮಕ್ಕಳು ಉತ್ತಮ ಸಂಸ್ಕಾರ ಸಂಸ್ಕೃತಿಗಳನ್ನು ಬೆಳೆಸಿಕೊಳ್ಳಬೇಕು. ಸಂಸ್ಕೃತ ಎಂಬ ವಾಕ್ಯದಲ್ಲಿ ವಿಶಾಲವಾದ ಅರ್ಥವಿದೆ. ವಸುದೈವ ಕುಟುಂಬಕಂ ಎಂಬ ಮನೋಭಾವನೆಯನ್ನು ನಾನು ನನ್ನದು ಎಂಬ ಸ್ವಾರ್ಥತೆಯನ್ನು ದೂರ ಮಾಡಿ, ದಯೆ ಕರುಣೆ ಶಾಂತಿ ಸಹನ ಕ್ಷಮಾ ಗುಣಗಳಿಂದ ಆತ್ಮಾಭಿಮಾನಿಯಾಗಿರಬೇಕು ಎಂದು ತಿಳಿಸುತ್ತದೆ ಎಂದರು.ಪ್ರತಿಯೊಂದು ವಸ್ತುವಿಗೂ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಮೌಲ್ಯಗಳು ಇವೆ ಎಂದು ಅರಿತು ನಾವೆಲ್ಲರೂ ಒಂದೇ ಎಂಬ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಈ ದೃಷ್ಟಿಯಲ್ಲಿ ಸಂಸ್ಕೃತ ವಿಶ್ವವಿದ್ಯಾಲಯವು ಕಾರ್ಯೋನ್ಮುಖವಾಗಿರುವುದು ಶ್ಲಾಘನೀಯ ಎಂದರು. ಸಮಾರಂಭದಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುಬ್ರಹ್ಮಣ್ಯ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ, ಸಿದ್ದಮಲ್ಲೇಶ್ವರ ಸಂಸ್ಕೃತ ಪಾಠ ಶಾಲೆಯ ಮುಖ್ಯೋಪಾಧ್ಯಾಯ ಮಹಾದೇವಸ್ವಾಮಿ ಹಾಗೂ ಸಂಸ್ಕೃತ ಅಧ್ಯಾಪಕರಾದ ನಂದೀಶ್ ಪ್ರಭುಸ್ವಾಮಿ ಮತ್ತು ಯೂನಿವರ್ಸ್ ಶಾಲಾ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು. ಸಮಾರಂಭದ ಅಂಗವಾಗಿ ಅಸ್ಮಾಕಂ ಸಂಸ್ಕೃತಂ ಎಂಬ ನಾಮಫಲಕ ಹಿಡಿದು ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.