ಸಾರಾಂಶ
ಹುಲುಮಕ್ಕಿ ದಾಸಮಠದಲ್ಲಿ ಶ್ರೀ ವೆಂಕಟರಮಣ ಸ್ವಾಮಿ ಜಾತ್ರೋತ್ಸವ
ಕನ್ನಡಪ್ರಭ ವಾರ್ತೆ, ಕೊಪ್ಪದೇವರ ಭಾಷೆಯೆಂದು ಕರೆಯಿಸಿಕೊಳ್ಳುವ ಸಂಸ್ಕೃತದಲ್ಲಿ ವೇದ ಉಪನಿಷತ್‌ಗಳು ಎಲ್ಲವೂ ಇರುವುದರಿಂದ ನಮ್ಮ ಸಂಸ್ಕೃತಿ ಉಳಿಯಲು ಸಂಸ್ಕೃತದಿಂದ ಸಾಧ್ಯ ಎಂದು ಶ್ರೀಕ್ಷೇತ್ರ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಹೊರವಲಯದ ಹುಲುಮಕ್ಕಿಯ ದಾಸಮಠದಲ್ಲಿ ನಡೆದ ಶ್ರೀ ವೆಂಕಟರಮಣ ಸ್ವಾಮಿ ಜಾತ್ರೋತ್ಸವದ ಧರ್ಮಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರೀಕ್ಷೇತ್ರ ಆದಿಚುಂಚನಗಿರಿ ಶ್ರೀಗಳಾದ ಬಾಲಗಂಗಾಧರ ನಾಥ ಸ್ವಾಮೀಜಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ರಾಜ್ಯದ ಉದ್ದಗಲಕ್ಕೂ ಉತ್ತಮ ಶೈಕ್ಷಣಿಕ ಕೇಂದ್ರಗಳು ಮತ್ತು ಆರೋಗ್ಯ ಕೇಂದ್ರ ಸ್ಥಾಪಿಸಿದಂತೆ ಸಂಸ್ಕೃತ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಈ ಕೇಂದ್ರದಲ್ಲಿ ೫೦೦೦ ವಿದ್ಯಾರ್ಥಿಗಳು ಸಂಸ್ಕೃತ ಭಾಷೆ ಕಲಿಯುತ್ತಿದ್ದು ಇಲ್ಲಿ ಕಲಿತ ಅನೇಕರು ವಿವಿಧೆಡೆ ವೇದ, ಉಪನಿಷತ್ ಸೇರಿದಂತೆ ಅನೇಕ ವಿಚಾರಗಳಲ್ಲಿ ಮಹಾಪಂಡಿತರೆನಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಪೂಜ್ಯ ಬಾಲಗಂಗಾಧರ ನಾಥರ ಶ್ರಮ ಅವಿಸ್ಮರಣೀಯ ಎಂದ ಅವರು ದಾಸಮಠ ಪುರಾತನ ಇತಿಹಾಸ ಹೊಂದಿದ ಪುಣ್ಯಕ್ಷೇತ್ರ. ಈ ಪುಣ್ಯಕ್ಷೇತ್ರ ೧೦೦ ಎಕರೆ ಪ್ರದೇಶದಲ್ಲಿತ್ತು. ಕಾಲ ಕಳೆದಂತೆ ೩ ಎಕರೆಗೆ ಸೀಮಿತವಾಗಿದೆ.ಎಲ್ಲರ ಸಹಕಾರದೊಂದಿಗೆ ಇಲ್ಲೊಂದು ಭವ್ಯವಾದ ದೇವಸ್ಥಾನ ನಿರ್ಮಾಣದ ಸಂಕಲ್ಪ ಹೊಂದಿದ್ದು ಉತ್ತರ ಭಾರತ, ದಕ್ಷಿಣ ಭಾರತ ಎರಡೂ ಪ್ರದೇಶಗಳ ಕಲ್ಲುಗಳನ್ನು ಸೇರಿಸಿ ವಿಶೇಷವಾದ ಭವ್ಯವಾದ ದೇವಸ್ಥಾನವು ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ನಿರ್ಮಾಣವಾಗಲಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು. ಪರಮಪೂಜ್ಯ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರು ಸಂಸ್ಕೃತ- ಸಂಸ್ಕೃತಿಗೆ ನೀಡಿದ ಕೊಡುಗೆ ಎನ್ನುವ ಮಹಾ ಗ್ರಂಥ ರಚಿಸಿ ಡಾಕ್ಟರೇಟ್ ಪದವಿ ಪಡೆದ ಆದಿಚುಂಚನಗಿರಿ ಕ್ಷೇತ್ರದ ಮಂಗಳೂರು ಶಾಖಾ ಮಠದ ಶ್ರೀಗಳಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಜಾತ್ರಾಮಹೋತ್ಸವದ ಪ್ರಯುಕ್ತ ಹರಿಕಥಾಮೃತ ಹಾಗೂ ಭಜನಾ ಕಮ್ಮಟಗಳು ನಡೆದವು. ಶನಿವಾರ ಬೆಳಿಗ್ಗೆ ಅಭಿಷೇಕ, ಕುಂಕುಮೋತ್ಸವ, ಅವಭೃತ ಮಹಾ ಮಂಗಳಾರತಿ ರಾತ್ರಿ ಪಲ್ಲಕ್ಕಿ ಉತ್ಸವ ನಡೆಯಿತು.