ಸಾರಾಂಶ
ಸಿಂಧನೂರಿನ ಮಿನಿವಿಧಾನಸೌಧ ಕಚೇರಿಯಲ್ಲಿ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿಯನ್ನು ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಸಿಂಧನೂರು
ಸಂತ ಸೇವಾಲಾಲ್ ಮಹಾರಾಜರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಕೆಓಎಫ್ ಅಧ್ಯಕ್ಷ ವೆಂಕಟರಾವ್ ನಾಡಗೌಡ ಹೇಳಿದರು.ನಗರದ ಮಿನಿವಿಧಾನಸೌಧ ಕಚೇರಿಯಲ್ಲಿ ತಾಲೂಕಾಡಳಿತ ವತಿಯಿಂದ ಗುರುವಾರ ನಡೆದ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಶರಣರ, ಸಂತರ ಸಂದೇಶಗಳು ಶಾಂತಿ, ಸಾಮರಸ್ಯದ ನಾಡು ಕಟ್ಟಬೇಕೆಂಬುದಾಗಿದೆ. ಅವರ ಜಯಂತಿಗಳು ಆಚರಣೆಗೆ ಸೀಮಿತವಾಗಬಾರದು. ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜಯಂತಿ ಆಚರಣೆಗೆ ಅರ್ಥ ಬರುತ್ತದೆ. ಸರ್ಕಾರಿ ಸೌಲಭ್ಯಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳುವವರು ಬಂಜಾರ್ ಸಮುದಾಯದವರು. ಹೀಗಾಗಿಯೇ ಆಶಾಳ ತಾಂಡದಲ್ಲಿ ಮನೆಗೊಬ್ಬ ಸರ್ಕಾರಿ ಅಧಿಕಾರಿಯಾಗಿ ಬದುಕು ರೂಪಿಸಿಕೊಂಡಿದ್ದಾರೆ ಎಂದರು.ನಂತರ ಸುಕಾಲಪೇಟೆ ರಸ್ತೆಯ ಹಳೆ ಬೃಂದಾವನ ಹೋಟೆಲ್ ಮುಂಭಾಗದಲ್ಲಿರುವ ಸಂತ ಸೇವಾಲಾಲ್ ವೃತ್ತದಲ್ಲಿರುವ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಬಿಜೆಪಿ ಮುಖಂಡ ರಾಜೇಶ ಹಿರೇಮಠ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಲಿಮಲಿಕ್ ವಕೀಲ, ನಿರುಪಾದೆಪ್ಪ ಗುಡಿಹಾಳ ವಕೀಲ, ಜೆಡಿಎಸ್ ಯುವ ಮುಖಂಡ ಸೈಯ್ಯದ್ ಆಸೀಫ್, ಮುಖಂಡರಾದ ಕೆ.ಮರಿಯಪ್ಪ, ಅಲ್ಲಮಪ್ರಭು ಪೂಜಾರ್, ಕೃಷ್ಣ ಚವ್ಹಾಣ್ ಸೇರಿದಂತೆ ಮತ್ತಿತರರು ಇದ್ದರು.