ಬೋಂಡ ಇದುವರೆಗೆ ಕೇವಲ ಸಂತೆಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಇತ್ತೀಚೆಗೆ ಸಂತೆ ಬೋಂಡ ತನ್ನ ಅದೇ ಹೆಸರಿನಲ್ಲೆ ಫೈವ್‌ಸ್ಟಾರ್‌ ಹೋಟೆಲ್, ಪ್ರತಿಷ್ಠಿತ ಕ್ಲಬ್‌ಗಳಲ್ಲೂ ಸ್ಥಾನ ಪಡೆದಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಂದು ಕಾಲದಲ್ಲಿ ಕೇವಲ ಬಡವರ ಇಷ್ಟದ ತಿಂಡಿಯಾಗಿದ್ದ ಸಂತೆ ಬೋಂಡ ಈಗ ಶ್ರೀಮಂತರ ಬಾಯಿಚಪಲ ತೀರಿಸುವ ಹಂತಕ್ಕೆ ತಲುಪಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಬಡವರ ಸಂತೆ ಬೋಡ ಈಗ ಫೈವ್‌ಸ್ಟಾರ್‌ ಹೋಟೆಲ್‌ಗಳಲ್ಲೂ ಲಭ್ಯ. ಹೌದು.... ವಾರದ ಸಂತೆಯ ದಿನ ಸಂತೆಗೆಂದು ಬಂದವರು ಪುರಿ, ಸಂತೆಬೋಡ ಖರೀದಿಸದಿದ್ದರೆ ಆ ವಾರದ ಸಂತೆಯೆ ಅಪೂರ್ಣ ಎಂಬ ಪರಿಕಲ್ಪನೆ ಗ್ರಾಮೀಣ ಜನರಲ್ಲಿ ಇಂದಿಗೂ ನೆಲೆಸಿದೆ. ಕಡಿಮೆ ಹಣಕ್ಕೆ ಹೆಚ್ಚಿನ ತಿಂಡಿ ದೊರೆಯುತ್ತದೆ ಎಂಬ ಕಾರಣಕ್ಕೆ ಅನಾದಿಕಾಲದಿಂದ ಸಂತೆಗೆ ಬರುವ ಕೂಲಿಕಾರ್ಮಿಕರು ಬಡ ಮಧ್ಯಮವರ್ಗದ ಬಹುತೇಕರು ಸಂತೆಬೋಂಡ, ಪುರಿ ಖರೀದಿಸದೇ ತೆರಳುತ್ತಿರಲಿಲ್ಲ. ಒಂದೇ ರೀತಿಯ ಎಣ್ಣೆಯಲ್ಲಿ ಸಾಕಷ್ಟು ಬಾರಿ ಸಂತೆಬೋಂಡ ಕರಿಯುತ್ತಾರೆಂಬ ಕಾರಣಕ್ಕೆ ಬಹುತೇಕ ಮೇಲ್ವರ್ಗದ ಹಾಗೂ ಆರೋಗ್ಯದ ಬಗ್ಗೆ ಅಪಾರ ಕಳಕಳಿ ಹೊಂದಿರುವ ಜನರಿಗೆ ಸಂತೆ ಬೋಂಡ ಅಪಥ್ಯ. ಸಬ್ಬಸಿಗೆ ಸೊಪ್ಪು, ಕಡ್ಲೆಹಿಟ್ಟು ಮಿಶ್ರಣದ ಬೋಂಡ ಎಂತಹವರ ಬಾಯಲ್ಲೂ ನೀರು ತರಿಸುತ್ತದೆ. ಇಂತಹ ಬೋಂಡ ಇದುವರೆಗೆ ಕೇವಲ ಸಂತೆಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಇತ್ತೀಚೆಗೆ ಸಂತೆ ಬೋಂಡ ತನ್ನ ಅದೇ ಹೆಸರಿನಲ್ಲೆ ಫೈವ್‌ಸ್ಟಾರ್‌ ಹೋಟೆಲ್, ಪ್ರತಿಷ್ಠಿತ ಕ್ಲಬ್‌ಗಳಲ್ಲೂ ಸ್ಥಾನ ಪಡೆದಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಂದು ಕಾಲದಲ್ಲಿ ಕೇವಲ ಬಡವರ ಇಷ್ಟದ ತಿಂಡಿಯಾಗಿದ್ದ ಸಂತೆ ಬೋಂಡ ಈಗ ಶ್ರೀಮಂತರ ಬಾಯಿಚಪಲ ತೀರಿಸುವ ಹಂತಕ್ಕೆ ತಲುಪಿದೆ.