ರೈತರು ಬೆಳೆದ ದವಸ, ಧಾನ್ಯ, ತರಕಾರಿ ಮಾರಾಟಕ್ಕೆ ಸಂತೆ ತೆರೆಯಿರಿ: ಪ್ರಕಾಶ್‌

| Published : Oct 28 2024, 12:50 AM IST

ರೈತರು ಬೆಳೆದ ದವಸ, ಧಾನ್ಯ, ತರಕಾರಿ ಮಾರಾಟಕ್ಕೆ ಸಂತೆ ತೆರೆಯಿರಿ: ಪ್ರಕಾಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು ತಾಲೂಕಿನ ಮಹಾಲಿಂಗನ ಕಟ್ಟೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಗ್ರಾಮ ಘಟಕ ಉದ್ಘಾಟನೆಯನ್ನು ಜಿಲ್ಲಾಧ್ಯಕ್ಷ ಪ್ರಕಾಶ್ ನೆರವೇರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹನೂರು ರೈತರು ಬೆಳೆದ ದವಸಧಾನ್ಯ ತರಕಾರಿಗಳನ್ನು ಮಾರಾಟ ಮಾಡಲು ಸಂತೆ ತೆರೆಯಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.

ತಾಲೂಕಿನ ಸಮೀಪದ ಮಹಾಲಿಂಗನ ಕಟ್ಟೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಗ್ರಾಮ ಘಟಕ ಸಂಘಟನೆ ಉದ್ಘಾಟಿಸಿ ಅವರು ಮಾತನಾಡಿದರು. ಮಹಾಲಿಂಗನ ಕಟ್ಟೆ ಹಾಗೂ ಲೊಕ್ಕನಹಳ್ಳಿ ಹನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಬೆಳೆದ ದವಸ ಧಾನ್ಯಗಳನ್ನು ಮತ್ತು ತರಕಾರಿ ವಿವಿಧ ಹಣ್ಣು ಸೊಪ್ಪು ಸೇರಿದಂತೆ ರೈತರಿಗೆ ಮಾರಾಟ ಮಾಡಲು ಸ್ಥಳಾವಕಾಶವಿಲ್ಲದೆ ತಮಿಳುನಾಡು ಹಾಗೂ ಕೊಳ್ಳೇಗಾಲ ಚಾಮರಾಜನಗರ ಮೈಸೂರು ಇನ್ನಿತರ ಕಡೆಗೆ ಮಾರಾಟ ಮಾಡಲು ತೆರಳ ಬೇಕಾಗಿರುವುದರಿಂದ ಹನೂರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆರ್‌ಎಂಸಿಯಲ್ಲಿ ವಾರದ ಸಂತೆ ತೆರೆಯಲು ಅವಕಾಶ ಕಲ್ಪಿಸಿ ಎಂದರು.

ರೈತರಿಗೆ ನೇರವಾಗಿ ಮಾರಾಟ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಮತ್ತು ತಾವು ಬೆಳೆದ ಪ್ರತಿಯೊಂದು ಬೆಳೆಯ ದವಸ ಧಾನ್ಯ ಹಾಗೂ ತರಕಾರಿ ಇನ್ನಿತರ ವಸ್ತುಗಳನ್ನು ಮಾರಾಟ ಮಾಡಲು ಸಂಬಂಧಿಸಿದ ಜಿಲ್ಲಾಡಳಿತ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿ ರಸ್ತೆಗಳೆಲ್ಲ ಗುಂಡಿಮಯವಾಗಿ ಸಂಚರಿಸಲಾಗದೆ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹನೂರು ಪಟ್ಟಣದಿಂದ ಲೊಕ್ಕನಹಳ್ಳಿ ರಸ್ತೆ ಮಾರ್ಗದಲ್ಲಿ ಸಿಗುವ ತಟ್ಟೆ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ಪೂರ್ಣಗೊಳ್ಳದೆ ರಸ್ತೆಯ ಎರಡು ಬದಿಗಳಲ್ಲಿ ಭಾರಿ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದು, ಅರ್ಧಕ್ಕೆ ನಿಂತಿರುವ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಪ್ರಯಾಣಿಕರಿಗೆ ಹಾಗೂ ಈ ಭಾಗದ ರೈತ ಬಾಂಧವರಿಗೆ ಅನುಕೂಲ ಕಲ್ಪಿಸಬೇಕು. ಈ ರಸ್ತೆ ಮಾರ್ಗವಾಗಿ ರಸ್ತೆಯ ಎರಡು ಬದಿಗಳಲ್ಲಿಯೂ ಹಲವಾರು ಒಣಮರಗಳು ಒಳಗೆ ನಿಂತಿವೆ. ಪ್ರಯಾಣಿಕರ ಮೇಲೆ ಬಿದ್ದು ಪ್ರಾಣ ಹಾನಿ ಸಂಭವಿಸುವ ಮುನ್ನ ಸಂಬಂಧ ಪಟ್ಟ ಅರಣ್ಯ ಇಲಾಖೆ ಪಿಡಬ್ಲ್ಯೂಡಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ನೀರಾವರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಹುಬ್ಬೆ ಹುಣಸೆ ಜಲಾಶಯದ ನಾಲೆಗಳನ್ನು ದುರಸ್ತಿ ಪಡಿಸಿ ನೀರು ಬಿಡುವ ಮೂಲಕ ನೀರಾವರಿ ಯೋಜನೆಗೆ ರೈತರಿಗೆ ಅನುಕೂಲ ಕಲ್ಪಿಸಬೇಕು ಅಪಾರ ಪ್ರಮಾಣದ ನೀರು ತಟ್ಟೆಹಳ್ಳದ ಮೂಲಕ ತಮಿಳುನಾಡಿನ ಪಾಲಾಗುತ್ತಿದೆ. ಸಾಕಷ್ಟು ಮಳೆಯಾಗಿ ಜಲಾಶಯ ತುಂಬಿದ್ದರೂ ರೈತರಿಗೆ ಇದರ ಉಪಯೋಗ ಇಲ್ಲದಂತಾಗಿದೆ. ಕೂಡಲೇ ಸಂಬಂಧಿಸಿದ ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ಮಹಾಲಿಂಗನ ಕಟ್ಟೆ ಸುತ್ತಮುತ್ತಲಿನ ರೈತರ ಜಮೀನಿಗೆ ತೆರಳುವ ರಸ್ತೆಗಳನ್ನು ದುರಸ್ತಿಪಡಿಸಿ. ಈ ಭಾಗದಲ್ಲಿರುವ ರೈತರು ವ್ಯವಸಾಯ ನಂಬಿ ಬದುಕುತ್ತಿರುವುದರಿಂದ ರೈತರಿಗೆ ಅನುಕೂಲವಾಗುವ ಬೆಳೆ ಬೆಳೆಯಲು ತೋಟಗಾರಿಕೆ ಹಾಗೂ ಕೃಷಿ ಇಲಾಖೆ, ಅಧಿಕಾರಿಗಳು ರೈತರಿಗೆ ಇಲಾಖೆ ವತಿಯಿಂದ ಸಿಗುವ ಪ್ರತಿಯೊಂದು ಸವಲತ್ತನ್ನು ತಲುಪಿಸಲು ವಿಫಲರಾಗಿದ್ದಾರೆ. ಹನೂರು ಪಟ್ಟಣದ ಕೃಷಿ ಇಲಾಖೆ ಅಧಿಕಾರಿಗಳು ಇದಕ್ಕೆ ಪೂರಕವಾಗಿ ರೈತರಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು. ಜಲತ್ವ ಸಮಸ್ಯೆಗಳಿಗೆ ಜನಪ್ರತಿನಿಧಿ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಗಮನಹರಿಸಿ ಎಂದರು.

ಇದೇ ಸಂದರ್ಭದಲ್ಲಿ ಮುಳ್ಳೂರು ವೀರಭದ್ರಸ್ವಾಮಿ, ಕೊಳ್ಳೇಗಾಲ ಕಾರ್ಯದರ್ಶಿ ಕುಣಗಳ್ಳಿ ಶಂಕರ್, ಜಿಲ್ಲಾ ಅಧ್ಯಕ್ಷೀಯ ಮಂಡಳಿ ಸದಸ್ಯರಾದ ಪಾಪಣ್ಣ, ಜಿಲ್ಲಾ ಉಪಾಧ್ಯಕ್ಷ ಮಹೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲೋಕೇಶ್ ಹಾಗೂ ಹನೂರು ಮಾದಪ್ಪ ಸೇರಿ ವಿವಿಧ ಗ್ರಾಮದ ರೈತ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.