ಸಾರಾಂಶ
ಹುಬ್ಬಳ್ಳಿ:
ಕವಿಯತ್ರಿ ವಿಭಾ ಅವರ ಹೆಸರಿನಲ್ಲಿ ನೀಡುವ 2025ರವಿಭಾ ಸಾಹಿತ್ಯ ಪ್ರಶಸ್ತಿ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ''''ಮಡಿಲ ಕೂಸಿಗೆ ಮಣ್ಣಿನ ಸೆರಗು'''' ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಪ್ರಶಸ್ತಿಯು ₹ 10000 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.ಈ ಕಾಲದ ಎಲ್ಲ ತಲ್ಲಣ ಮತ್ತು ಆತಂಕಗಳಿಗೆ ಒಂದು ಕ್ರಿಯಾಶೀಲವಾದ ಪ್ರತಿಕ್ರಿಯೆಯಾಗಿ, ವಿಭಿನ್ನ ನೆಲೆಯ ಕಾವ್ಯ ಗುಣ ಹೊಂದಿರುವುದು ಮತ್ತು ಪ್ರಸ್ತುತ ಸಮಾಜದಲ್ಲಿ ತಲೆದೋರಿರುವ ಅನೇಕ ವೈರುಧ್ಯಗಳು ವೈಯಕ್ತಿಕ ಅಥವಾ ಸಾಮಾಜಿಕ ಎರಡಕ್ಕೂ ಸಮಾನವಾಗಿ ಸ್ಪಂದಿಸುವ ಗುಣ ಹೊಂದಿರುವುದರಿಂದ ''''ಮಡಿಲ ಕೂಸಿಗೆ ಮಣ್ಣಿನ ಸೆರಗು'''' ಆಯ್ಕೆಮಾಡಲಾಗಿದೆ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ. ವಿಮರ್ಶಕರಾದ ಡಾ. ಸಿರಾಜ್ ಅಹಮದ್ ಮತ್ತು ಡಾ. ವಿಜಯಾ ಗುತ್ತಲ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕವಿ ಪರಿಚಯ:ಸಂತೆಬೆನ್ನೂರು ಫೈಜ್ನಟ್ರಾಜ್ ಹುಟ್ಟಿದ್ದು 1972ರಲ್ಲಿ, ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕು ಸಂತೆಬೆನ್ನೂರಿನಲ್ಲಿ. ದಾವಣಗೆರೆಯ ಡಯಟ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕಥೆ, ಕವಿತೆ, ಪ್ರಬಂಧ, ಮಕ್ಕಳ ಸಾಹಿತ್ಯ, ಹೀಗೆ ವಿವಿಧ ಪ್ರಕಾರಗಳಲ್ಲಿ ಆಸಕ್ತಿಯುಳ್ಳವರು. ಈಗಾಗಲೇ 14 ಕೃತಿಗಳು ಹೊರಬಂದಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರ ಸಂದಿವೆ.