ಸಾರಾಂಶ
ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆ, ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪದವಿ ಸ್ವೀಕರಿಸಿದ ೧೫೬ ಪುಟಾಣಿಗಳ ಪರವಾಗಿ ಲೇಕ್ಷಾ, ವಿಹಾನ್, ಮತ್ತು ಅನನ್ಯ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕನ್ನಡಪ್ರಭ ವಾರ್ತೆ ಕಲ್ಯಾಣಪುರಇಲ್ಲಿನ ಸಂತೆಕಟ್ಟೆಯ ಮೌಂಟ್ ರೋಸರಿ ಆಂಗ್ಮ ಮಾಧ್ಯಮ ಕಿಂಡರ್ ಗಾರ್ಟನ್ ನಲ್ಲಿ ಪೂರ್ವ ಪ್ರಾಥಮಿಕ ಶಾಲೆಯ ಡಿಪ್ಲೊಮಾ ವ್ಯಾಸಂಗ ಯಶಸ್ವಿಯಾಗಿ ಪೂರ್ಣಗೊಳಿಸಿದ ಪುಟಾಣಿಗಳಿಗೆ ಪದವಿ ಪ್ರಧಾನ ಸಮಾರಂಭವು ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿ ಸಂತೆಕಟ್ಟೆಯ ಖ್ಯಾತ ಮಕ್ಕಳತಜ್ಞ ಡಾ. ಆರುಣ್ ವರ್ಣೇಕರ್ ಪುಟಾಣಿಗಳಿಗೆ ಪದವಿ ಪ್ರಧಾನ ಮಾಡಿ, ಮಕ್ಕಳನ್ನು ಎಳವೆಯಲ್ಲಿಯೇ ಮೊಬೈಲ್, ವಿಡಿಯೋ ಗೇಮ್ಸ್‌ಗಳಿಂದ ದೂರ ಇಟ್ಟು ಪುಸ್ತಕಗಳನ್ನು ಪ್ರೀತಿಸುವ ಕಡೆಗೆ, ಮಾತೃ ಭಾಷೆ, ಸಂಪ್ರಾದಾಯ, ಸಂಸ್ಕಾರಗಳನ್ನು ತಿಳಿ ಹೇಳಿ ದೇಶಭಕ್ತಿಯನ್ನು ಪ್ರೇರೇಪಿಸುವುದು ಮಹತ್ತರ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಹೇಳಿದರು.ಅಧ್ಯಕ್ಷತೆಯನ್ನು ವಹಿಸಿದ್ದ ಚರ್ಚಿನ ಸಹಾಯಕ ಧರ್ಮಗುರುಗಳು ಮಾತನಾಡಿ, ಪುಟಾಣಿಗಳಿಗೆ ಶಿಸ್ತು ಹಾಗು ಉತ್ತಮ ಮಾರ್ಗದರ್ಶನ ನೀಡಿದ್ದಲ್ಲಿ ಅವರು ಮನೆಮಂದಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವರು ಎಂದು ಶುಭ ಹಾರೈಸಿದರು.
ಶಿಕ್ಷಕಿ ಸೋಫಿಯಾ ಪುಟಾಣಿ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪೋಷಕರ ಪರವಾಗಿ ಶರತ್ ಆಚಾರ್ಯ ಮತ್ತು ಟ್ರೀಜಾ ಮೆಂಡೋನ್ಸಾ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ಕೆ.ಜಿ ವಿಭಾಗದ ಎಲ್ಲಾ ಶಿಕ್ಷಕಿಯರನ್ನು ಅವರು ಕೊಡುವ ಮಾರ್ಗದರ್ಶನ ಮತ್ತು ತಾಳ್ಮೆಯನ್ನು ಶ್ಲಾಫಿಸಿದರು.ಪದವಿ ಸ್ವೀಕರಿಸಿದ ೧೫೬ ಪುಟಾಣಿಗಳ ಪರವಾಗಿ ಲೇಕ್ಷಾ, ವಿಹಾನ್, ಮತ್ತು ಅನನ್ಯ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪೋಷಕ ಪ್ರತಿನಿಧಿ ಸನ್ನಿಧಿ ಪ್ರಭು ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆ, ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಆನ್ಸಿಲ್ಲಾ ಸ್ವಾಗತಿಸಿ ವರದಿ ಮಂಡಿಸಿದರು. ಕೆ.ಜಿ. ವಿಭಾಗದ ಮುಖ್ಯಸ್ಥೆ ಶಿಕ್ಷಕಿ ಸಫೀನಾ ನಿರೂಪಿಸಿ ಶಿಕ್ಷಕಿ ಸರಸ್ವತಿ ವಂದಿಸಿದರು.