ಕನ್ನಡಪ್ರಭ ವಾರ್ತೆ ಬನ್ನೂರು
ಗುರುಗಳು ಅಂದು ಕಲಿಸಿದ ಪಾಠದ ಪ್ರತಿಫಲವೇ ಇಂದು ನಾವೆಲ್ಲರೂ ಜೀವನದ ಹಾದಿಯಲ್ಲಿ ಉತ್ತಮವಾಗಿ ಸಾಗಲು ಮಾರ್ಗವಾಗಿದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಹಳೆ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ತಮ್ಮ ಗುರುಗಳ ಮುಂದೆ ವ್ಯಕ್ತಪಡಿಸಿದರು.ಪಟ್ಟಣದ ಸಂತೆಮಳದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವತಿಯಿಂದ ಭಾನುವಾರ ನಡೆದ 1988-89ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳ ಗುರುವಂದನೆ, ಸ್ನೇಹ ಸಮ್ಮಿಲನ ಮತ್ತು ನೂತನ ಶಾಲಾ ವೇದಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗೌರವ ಸಮರ್ಪಿಸಿದ ನಂತರ ತಮ್ಮ ಒಳ ನುಡಿಗಳನ್ನು ತಮ್ಮ ನೆಚ್ಚಿನ ಗುರುಗಳಿಗೆ ತಿಳಿಸಿದರು.
37 ವರ್ಷಗಳ ಬಳಿಕ ನಾವೆಲ್ಲರು ಒಟ್ಟಾಗಿ ಒಂದು ವೇದಿಕೆಯಲ್ಲಿ ಸೇರುವ ಮೂಲಕ ನೆಚ್ಚಿನ ಗುರುಗಳನ್ನು ನೆನದು ಅವರಿಗೆ ಗೌರವ ವಂದನೆ ತಿಳಿಸುತ್ತಿದ್ದೇವೆ ಎಂದರು.ಈ ನಿಟ್ಟಿನಲ್ಲಿ ನಾವೆಲ್ಲರೂ ಕಲಿತ ಶಾಲೆಗೆ ಎನಾದರು ಮಾಡಬೇಕು ಎನ್ನುವಂತ ಮಹತ್ವಕಾಂಕ್ಷೆಯಿಂದ ರಾಷ್ಟ್ರಕವಿ ಕುವೆಂಪು ಶಾಲಾ ವೇದಿಕೆಯನ್ನು ನೂತನವಾಗಿ ನಿರ್ಮಿಸಿ ಇಂದು ನಮ್ಮ ನೆಚ್ಚಿನ ಗುರುಗಳಿಂದ ಉದ್ಘಾಟನೆ ಮಾಡಿಸಿದೆವು. ನಾವು ಕಲಿತ ಶಾಲೆಯನ್ನು ನಾವೇಲ್ಲರು ಇಂದು ನೋಡಿದಾಗ ನಮಗೆ ಪುಳಕಿತರಾಗಿದ್ದು, ಎಲ್ಲರೂ ಸೇರಿ ಈ ಮಹತ್ವದ ಕಾರ್ಯವನ್ನು ನೆರವೇರಿಸಿದ್ದಾಗಿ ತಿಳಿಸಿದರು.
ಈ ವೇಳೆ ಸಂತೆಮಳದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ 1988-89ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದ ಗುರುಗಳಾದ ಸಿ. ಪುಟ್ಟಸ್ವಾಮಿ, ವೀರಯ್ಯ, ಬಸವಯ್ಯ, ಎಂ.ಎಸ್. ಕೃಷ್ಣಮೂರ್ತಿ, ಟಿ.ಆರ್. ವೆಂಕಟೇಶ್, ಅಲಮೇಲಮ್ಮ, ಎ. ಮಂಜುಳಾ ಅವರನ್ನು ಬಾಲ್ಯದ ಎಲ್ಲಾ ಗೆಳಯ ಗೆಳತಿಯರು ಸೇರಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಈ ವೇಳೆ ಮಾತನಾಡಿದ ಸತೀಶ್ ನಾಯಕ್, ಹಲವು ವರ್ಷಗಳ ಆಸೆ ಪೂರೈಸಿದ್ದು, ತುಂಬಾ ಸಂತೋಷ ತಂದಿದೆ. ಎಲ್ಲಾ ಗೆಳೆಯ ಮತ್ತು ಗೆಳತಿಯರನ್ನು ಮತ್ತು ವಿದ್ಯೆ ಕಲಿಸಿದ ಗುರುಗಳನ್ನು ನೋಡುವಂತ ಭಾಗ್ಯ ದೊರೆಯಿತು ಎಂದರು.
ಮರಿಸ್ವಾಮಿ ಮಾತನಾಡಿ, ಇದೊಂದು ಅವಿಸ್ಮರಣೀಯ ದಿನವಾಗಿದ್ದು, ಜೀವನದಲ್ಲಿ ಮರೆಯದ ನೆನಪಾಗಿ ಉಳಿಯಲಿದೆ. ನಿಮ್ಮೆಲ್ಲರ ಸಹಕಾರ ನಿರಂತರವಾಗಿದ್ದು, ಮುಂದಿನ ದಿನದಲ್ಲಿಯು ಇಂತಹ ಕಾರ್ಯಕ್ರಮ ಮಾಡುವ ಮೂಲಕ ಕಲಿತ ಶಾಲೆಯ ಅಭಿವೃದ್ಧಿ ಮಾಡೋಣ ಎಂದರು.ರೈತ ಮುಖಂಡ ಬಿ.ಟಿ. ಮಹೇಶ್, ಎಂ. ಸಿದ್ದೇಶ್ವರ ಮೊದಲಾದವರು ಮಾತನಾಡಿದರು.
ಶಾಲೆಯ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಸಿ.ಆರ್.ಪಿ. ಬೋರೇಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಇದ್ದರು.