ಬ್ರಿಟಿಷರೇ ಭಾರತ ಬಿಟ್ಟು ತೊಲಗಿ, ಕ್ವಿಟ್ ಇಂಡಿಯಾ ಚಳವಳಿಯ 84ನೇ ವರ್ಷದ ಸವಿನೆನಪಿಗಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಸವಿನೆನಪಿನ ದಿನವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ, ಕ್ವಿಟ್ ಇಂಡಿಯಾ ಚಳವಳಿಯ 84ನೇ ವರ್ಷದ ಸವಿನೆನಪಿಗಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಸವಿನೆನಪಿನ ದಿನವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ನಗರದ ಸರಕಾರಿ ಜೂನಿಯರ್ ಕಾಲೇಜು ಆವರಣದಲ್ಲಿರುವ ರಾಷ್ಟ್ರಪಿತ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮಗಾಂಧಿ ಭಾವಚಿತ್ರಕ್ಕೆ ಕಾಂಗ್ರೆಸ್ ಮುಖಂಡರು ಪುಷ್ಪನಮನ ಸಲ್ಲಿಸುವ ಮೂಲಕ ಸ್ವಾತಂತ್ರ ಹೋರಾಟಗಾರರ ತ್ಯಾಗ, ಬಲಿದಾನವನ್ನು ನೆನಪು ಮಾಡಿಕೊಂಡರು.

ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಮಾತನಾಡಿ, ಕ್ವಿಟ್ ಇಂಡಿಯಾ ಚಳವಳಿ ಭಾರತೀಯರ ಪಾಲಿಗೆ ಒಂದು ಪುಣ್ಯದ ದಿನ. ಬ್ರಿಟಿಷರು ದೇಶ ತೊರೆಯುವಾಗ ಪ್ರಾಕೃತಿಕ ಸಂಪತ್ತಿನ ಜೊತೆಗೆ೪ ಎಲ್ಲವನ್ನು ಕೊಳೆ ಹೊಡೆದುಕೊಂಡು ಹೋಗಿದ್ದರು. ಆದರೂ ಇಂದು ಭಾರತ ವಿಶ್ವದಲ್ಲಿ ಒಂದು ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ನಿಂತಿದ್ದರೆ ಅದಕ್ಕೆ ನೆಹರು ಅವರು ಹಾಕಿಕೊಟ್ಟ ಭದ್ರ ಬುನಾದಿಗಳೇ ಕಾರಣ. ಪಂಚವಾರ್ಷಿಕ ಯೋಜನೆಗಳ ಮೂಲಕ ಕೃಷಿ, ಕೈಗಾರಿಕೆ,ಶಿಕ್ಷಣ,ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಭಾರತ ಅಭಿವೃದ್ದಿ ಪಥದತ್ತ ಸಾಗಲು ಸಹಕಾರಿಯಾದವು. ಅಂತಹ ನೆಹರು ಅವರನ್ನು ಬಿಜೆಪಿಯವರು ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸುವುದು ಹಾಸ್ಯಾಸ್ಪದ ಎಂದರು. ವಿದೇಶದಲ್ಲಿ ಓದಿ ಬಂದ ನೆಹರು ಮತ್ತು ಗಾಂಧಿ ತಮ್ಮ ಎಲ್ಲಾ ಆಸ್ತಿಗಳನ್ನು ದೇಶಕ್ಕಾಗಿ ದಾನ ಮಾಡಿ, ಸ್ವಾತಂತ್ರ ಚಳವಳಿಯನ್ನು ಕಟ್ಟಿದರು.ಗಾಂಧೀಜಿಗೆ ಸ್ವಾತಂತ್ರ ನಂತರ ಈ ದೇಶದ ಮೊದಲ ಪ್ರಧಾನಿಯಾಗುವ ಅವಕಾಶ ಇದ್ದರೂ ಸಹ ಅದನ್ನು ತಿರಸ್ಕರಿಸಿ,ನೆಹರು ಅವರಿಗೆ ಅವಕಾಶ ನೀಡಿದರು.ಇದರ ಹಿಂದಿನ ಘನ ಉದ್ದೇಶವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳ ಬೇಕಾಗಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ‍್ಯದರ್ಶಿ ಆರ್.ರಾಮಕೃಷ್ಣ, ಭಾರತದಲ್ಲಿ ಬ್ರಿಟಿಷರ ಉಪಟಳ ಹೆಚ್ಚಾಗಿ, ದೇಶದ ಪ್ರಾಕೃತಿಕ ಸಂಪತ್ತನ್ನು ಕೊಳ್ಳೆ ಹೊಡೆಯುವುದು ವ್ಯಾಪಕವಾದಾಗ ದೇಶದ ಬಗ್ಗೆ ಯೋಜಿಸುವ ಎಲ್ಲಾ ನಾಯಕರು ಒಗ್ಗೂಡಿ ಎ.ಒ.ಹ್ಯೂಮ್ ಅವರ ಅಧ್ಯಕ್ಷತೆಯಲ್ಲಿ ಸ್ವಾತಂತ್ರ ಚಳವಳಿಗಾಗಿ ಕಾಂಗ್ರೆಸ್ ಸ್ಥಾಪಿಸಿ, ಸ್ವಾತಂತ್ರ ಆಂದೋಲನವನ್ನು ಮತ್ತಷ್ಟು ಗಟ್ಟಿಗೊಳಿಸಿದರು ಎಂದರು.

ಹಿರಿಯ ಮುಖಂಡ ಷಣ್ಮುಗಪ್ಪ ಮಾತನಾಡಿ,1942 ರ ಆಗಸ್ಟ್ 8 ರಂದು ಬಾಂಬೆಯಲ್ಲಿ ಮಹಾತ್ಮಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಭೆಯ ತೀರ್ಮಾನದಂತೆ ಕ್ವಿಟ್ ಇಂಡಿಯಾ ಚಳವಳಿಯನ್ನು ಆರಂಭಿಸಲಾಯಿತು. ಇದರ ತೀವ್ರತೆಯನ್ನು ಅರಿತ ಬ್ರಿಟಿಷರು ಅನಿವಾರ‍್ಯವಾಗಿ 1948 ರಲ್ಲಿ ಸ್ವಾತಂತ್ರ ನೀಡಲೇಬೇಕಾಯಿತು.ಅಂದಿನ ಬದ್ದತೆ ಮತ್ತು ಹೋರಾಟದ ಕಿಚ್ಚನ್ನು ಇಂದಿನ ಯುವ ಸಮೂಹ ಬೆಳೆಸಿಕೊಳ್ಳಬೇಕಾಗಿದೆ ಎಂದರು. ಜಿಲ್ಲಾ ಕಾಂಗ್ರೆಸ ವಕೀಲರ ವಿಭಾಗದ ಅಧ್ಯಕ್ಷ ಸುರೇಶ್‌, ಅಲ್ಪಸಂಖ್ಯಾತರ ವಿಭಾಗದ ಅಹಮದ್, ಗ್ರಾಮಾಂತರ ಕ್ಷೇತ್ರ ಕೆಂಪಣ್ಣ ಹಾಗೂ ಪ್ರಚಾರ ಸಮಿತಿ ಕಾರ್ಯದರ್ಶಿ ಶಿವಾಜಿ ಕ್ವಿಟ್ ಇಂಡಿಯಾ ಚಳವಳಿ ಕುರಿತು ಮಾತನಾಡಿದರು.ಕಾರ‍್ಯಕ್ರಮದಲ್ಲಿ ಮಂಜುನಾಥ್, ತರುಣೇಶ್,ಕೆಂಪರಾಜು, ನ್ಯಾತೇಗೌಡ, ಸೌಭಾಗ್ಯ, ಸುಜಾತ, ಸೌಭಾಗ್ಯಮ್ಮ, ಎಸ್ಟಿ ಸೆಲ್‌ನ ಕುಮಾರಸ್ವಾಮಿ, ಕೈದಾಳ ರಮೇಶ್, ಅಂಬರೀಷ್, ನಾಗರಾಜು, ಮುಬೀನ, ಸಹೇರಾ ಮತ್ತಿತರರು ಭಾಗವಹಿಸಿದ್ದರು.