ರಾಮನಗರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಬಿಡದಿ ಟೌನ್ ಶಿಪ್ ಜಾರಿ ಮಾಡುವುದಾಗಿ ದುರ್ಯೋಧನನ ರೀತಿ ಹಠ ಮಾಡಬೇಡಿ. ಇಲ್ಲದಿದ್ದರೆ ದುರ್ಯೋಧನನಿಗೆ ಆದ ಗತಿಯೇ ನಿಮಗೂ ಆಗುತ್ತದೆ. ಈ ಟೌನ್‌ಶಿಪ್ ವಿರುದ್ಧದ ಹೋರಾಟವೇ ಕಾಂಗ್ರೆಸ್ ಸರ್ಕಾರದ ಕೊನೆ ಮೊಳೆಯಾಗುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದರು.
ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ನೇತೃತ್ವದಲ್ಲಿ ಪ್ರಾರಂಭವಾದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇದೊಂದು ದುಷ್ಟ ಸರ್ಕಾರ, ದುಷ್ಟ ಮುಖ್ಯಮಂತ್ರಿ. ಇವರ ವಿರುದ್ದವೇ ಈ ಹೋರಾಟ ನಡೆಯುತ್ತಿದೆ ಎಂದರು.ಬಿಡದಿ ಟೌನ್‌ಶಿಪ್ ಯೋಜನೆ ಜಾರಿ ವಿಚಾರದಲ್ಲಿ ಕಾಂಗ್ರೆಸ್ಸೆ ರಚಿಸಿದ್ದ ಸತ್ಯ ಶೋಧನಾ ಸಮತಿ ವರದಿಯಲ್ಲಿ ಈ ಯೋಜನೆ ಮಾಡಿದರೆ ಉಳಿಗಾಲ ಇಲ್ಲವೆಂದು ತಿಳಿಸಿದೆ. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಆ ವರದಿಯನ್ನು ಬಹಿರಂಗ ಪಡಿಸಬೇಕು. ಇಲ್ಲದಿದ್ದರೆ ನಿಮ್ಮ ಯೋಗ್ಯತೆ ರಾಜ್ಯದ ಜನರ ಮುಂದೆ ಹರಾಜಾಗುತ್ತದೆ ಎಂದು ಎಚ್ಚರಿಸಿದರು.
ಬಿಡದಿ ಟೌನ್ ಶಿಪ್ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ, ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಸತ್ಯ ಶೋಧನಾ ಸಮತಿ ರಚಿಸಿತ್ತು. ಆ ಸಮಿತಿಯಲ್ಲಿ ಹಾಲಿ ಮುಖ್ಯಮಂತ್ರಿಗಳಾಗಿರುವ ಡಿ.ಕೆ.ಶಿವಕುಮಾರ್ ಸದಸ್ಯರಾಗಿದ್ದರು. ಆ ಸಮಿತಿ ಕೊಟ್ಟ ವರದಿಯಲ್ಲಿ ಟೌನ್ ಶಿಪ್ ಮಾಡುವುದು ಬೇಡ. ರೈತರ ಭೂಮಿಯನ್ನು ಮುಟ್ಟಿದರೆ ಸರ್ವನಾಶ ಆಗುತ್ತೇವೆಂದು ಸಮಿತಿ ಸದಸ್ಯರಾಗಿದ್ದ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದರು. ಅಲ್ಲದೆ, ವಿಧಾನಸಭೆ ಅಧಿವೇಶನದಲ್ಲೂ ಡಿ.ಕೆ.ಶಿವಕುಮಾರ್ ಯೋಜನೆ ಜಾರಿ ಮಾಡುವುದಿಲ್ಲ ಎಂದಿದ್ದರು. ಆದರೀಗ ಅದೇ ಡಿ.ಕೆ.ಶಿವಕುಮಾರ್ ಯಾವ ಮುಖ ಇಟ್ಟುಕೊಂಡು ಯೋಜನೆಯನ್ನು ಜಾರಿ ಮಾಡಲು ಹೊರಟಿದ್ದಾರೆ. ಪ್ರಾಯಶ್ಚಿತ್ತ ಯಾರು ಮಾಡಿಕೊಳ್ಳಬೇಕು ಎಂದು ಅಶೋಕ್ ಪ್ರಶ್ನಿಸಿದರು.ನಾವು ಅಧಿಕಾರಕ್ಕೆ ಬಂದ್ರೆ ಟೌನ್‌ಶಿಪ್ ರದ್ದು :
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು ಮಾತನಾಡಿ, ಆಗಸ್ಟ್ 13ರಿಂದ ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ತಾವು ಟೌನ್ ಶಿಪ್ ಯೋಜನೆ ವಿರೋಧಿಸುತ್ತೇವೆ. ಅದೇ ವೇಳೆ ವಿಧಾನಸೌಧದ ಹೊರಗಡೆ ನೀವು ಹೋರಾಟ ಮಾಡಿ, ಕೇಂದ್ರ ಸಚಿವ ಕುಮಾರಸ್ವಾಮಿ ಈಗಾಗಲೆ ಹೇಳಿರುವಂತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಟೌನ್ ಶಿಪ್ ಯೋಜನೆ ರದ್ದು ಮಾಡುತ್ತೇವೆ ಎಂದು ಪುನರುಚ್ಛರಿಸಿದರು.
ಟೌನ್ ಶಿಪ್ ಯೋಜನೆ ಕುಮಾರಸ್ವಾಮಿ ಅವರ ಪಾಪದ ಕೂಸು ಅಂತ ಹೇಳುವ ಕಾಂಗ್ರೆಸ್ ಅದನ್ನೇಕೆ ಇಟ್ಟುಕೊಂಡಿದ್ದಾರೆ? ಪಾಪದ ಕೂಸು ಅಲ್ಲವೇ ಬಿಟ್ಟು ಬಿಡಿ. ಭೂಸ್ವಾಧೀನ ವಿಚಾರದಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಇದ್ದಾಗ 5(1), 6(1) ಆಗಿರಲಿಲ್ಲ. ಅವಾರ್ಡ್ ಆಗಿರಲಿಲ್ಲ. ಇವೆಲ್ಲವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ತಾವು ತಿಂದು ಮೇಕೆ ಮೂತಿಗೆ ಒರಸಿದಂತೆ ಕುಮಾರಸ್ವಾಮಿ ಅವರ ಸರ್ಕಾರದ ವಿರುದ್ಧ ಆಪಾದನೆ ಮಾಡುತ್ತಿದ್ದಾರೆ. ಇಲ್ಲಿ ಟೌನ್ ಶಿಪ್ ಹೆಸರಿನಲ್ಲಿ ಲೂಟಿ ಹೊಡೆದು ರಾಹುಲ್ ಗಾಂಧಿಗೆ ತಲುಪಿಸುವ ಹುನ್ನಾರ ಎಂದು ಹರಿಹಾಯ್ದರು.
ಕಾಂಗ್ರೆಸ್ ಸರ್ಕಾರ ಸುಮಾರು 4 ಕೋಟಿ ವೆಚ್ಚ ಮಾಡಿ, ದಿನಪತ್ರಿಕೆಗಳ ಮುಖಪುಟಗಳಲ್ಲಿ ಜಾಹೀರಾತು ಕೊಟ್ಟಿದೆ. ಅದರಲ್ಲಿ ನಮಗೆ (ಬಿಜೆಪಿ-ಜೆಡಿಎಸ್) ಪ್ರಶ್ನೆಗಳ ಸರಮಾಲೆ ಹಾಕಿದ್ದಾರೆ. ಈ ಪಾದಯಾತ್ರೆಯನ್ನು ಪ್ರಾಯಶ್ಚಿತ್ತ ಪಾದಯಾತ್ರೆ ಅಂತ ಹೇಳಿದ್ದಾರೆ. 500ಕ್ಕೂ ಹೆಚ್ಚು ದಿನದಿಂದ ನಮ್ಮ ಭೂಮಿ, ನಮ್ಮ ಹಕ್ಕು ಅಂತ ರೈತರು ಭೂಮಿ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಈ ಹೋರಾಟಕ್ಕೆ ತಮ್ಮ ಪಕ್ಷದ ಬೆಂಬಲವಿದೆ ಎಂದು ಅಶೋಕ್ ಹೇಳಿದರು.ಕೋಟ್ ................
ನಮ್ಮ ಭೂಮಿ, ನಮ್ಮ ಹಕ್ಕು ಹೋರಾಟಕ್ಕೆ ಕಾಂಗ್ರೆಸ್ ಸರ್ಕಾರ ನಡುಗಿದೆ. ಹೀಗಾಗಿಯೇ ದಿನ ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹೀರಾತು ಕೊಟ್ಟಿದ್ದಾರೆ. ಹೋರಾಟಕ್ಕೆ ಮುನ್ನ ಲ್ಯಾಂಡ್ ಶೇರ್ ಅನ್ನು 60-40 ಅನ್ನುತ್ತಿದ್ದರು. ಈಗ 50-50ಗೆ ಬಂದಿದ್ದಾರೆ. ಮೊದಲು 2 ಕೋಟಿ ಪರಿಹಾರ ಇತ್ತು, ಈಗ ಇನ್ನೂ ಹೆಚ್ಚಾಗಿದೆ. ಅಂದರೆ ಹೋರಾಟಕ್ಕೆ ಸರ್ಕಾರ ಬಗ್ಗುತ್ತಿದೆ. ಈ ಸರ್ಕಾರವನ್ನು ಇನ್ನಷ್ಟು ಬಗ್ಗಿಸಬೇಕು. ಮನೆಗೆ ಕಳುಹಿಸುವವರೆಗೂ ಹೋರಾಟ ನಡೆಯಬೇಕು.- ಆರ್.ಅಶೋಕ್ , ವಿಪಕ್ಷ ನಾಯಕರು
9ಕೆಆರ್ ಎಂಎನ್ .ಜೆಪಿಜಿಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ನೇತೃತ್ವದಲ್ಲಿ ಪ್ರಾರಂಭವಾದ ಪಾದಯಾತ್ರೆಗೆ ಚಾಲನೆ ನೀಡಿ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿದರು.
