ಸಂತೋಷ್ ಲಾಡ್ ಹಾಗೂ ಈ. ತುಕಾರಾಂ ಕ್ಷೇತ್ರದ ಅಭಿವೃದ್ಧಿಯ ಜೋಡೆತ್ತುಗಳು- ಅನ್ನಪೂರ್ಣಾ ತುಕಾರಾಂ

| Published : Nov 01 2024, 12:10 AM IST

ಸಂತೋಷ್ ಲಾಡ್ ಹಾಗೂ ಈ. ತುಕಾರಾಂ ಕ್ಷೇತ್ರದ ಅಭಿವೃದ್ಧಿಯ ಜೋಡೆತ್ತುಗಳು- ಅನ್ನಪೂರ್ಣಾ ತುಕಾರಾಂ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯಾಗಲಿ ಅಥವಾ ಕಾಂಗ್ರೆಸ್ ಆಗಲಿ ಯಾರೂ ಅವರ ಮನೆಯಿಂದ ಜನತೆಗೆ ಹಣ ನೀಡುವುದಿಲ್ಲ.

ಸಂಡೂರು: ಸಚಿವ ಸಂತೋಷ್ ಲಾಡ್, ಸಂಸದ ತುಕಾರಾಂ ಸಂಡೂರು ಅಭಿವೃದ್ಧಿಯ ಜೋಡೆತ್ತುಗಳು. ಅವರ ಅಭಿವೃದ್ಧಿಯ ರಥಕ್ಕೆ ನಾನು ಹೆಗಲು ಕೊಡಲು ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣಾ ತುಕಾರಾಂ ಮನವಿ ಮಾಡಿದರು.

ತಾಲೂಕಿನ ಗಂಗಲಾಪುರ, ಬನ್ನಿಹಟ್ಟಿ, ನಾಗಲಾಪುರ, ತಾಳೂರು, ಜೋಗ, ವಡ್ಡು, ಬಸಾಪುರ, ಹಳೆ ದರೋಜಿ, ತಾರಾನಗರ, ಕುರೆಕುಪ್ಪ, ಏಳುಬೆಂಚಿ, ತಿಮ್ಮಲಾಪುರ, ಹೊಸ ಮಾದಾಪುರ, ಹೊಸ ದರೋಜಿ ಹಾಗೂ ಹಳೆ ಮಾದಾಪುರ ಗ್ರಾಮಗಳಲ್ಲಿ ಗುರುವಾರ ಅವರು ಭರ್ಜರಿಯಾಗಿ ಪ್ರಚಾರ ನಡೆಸಿದರು. ಕ್ಷೇತ್ರದ ಜನತೆ ಬಹುಮತದಿಂದ ನನ್ನನ್ನು ಗೆಲ್ಲಿಸಿ, ಜನರ ಸೇವೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.

ಸಚಿವ ಸಂತೋಷ್ ಲಾಡ್ ಮಾತನಾಡಿ, ಬಿಜೆಪಿಯಾಗಲಿ ಅಥವಾ ಕಾಂಗ್ರೆಸ್ ಆಗಲಿ ಯಾರೂ ಅವರ ಮನೆಯಿಂದ ಜನತೆಗೆ ಹಣ ನೀಡುವುದಿಲ್ಲ. ಜನತೆ ನೀಡುತ್ತಿರುವ ತೆರಿಗೆಯ ಹಣವನ್ನು ಅವರಿಗೆ ಮುಟ್ಟಿಸುವ ಕೆಲಸ ಸರ್ಕಾರದ ಕೆಲಸವಾಗಿದೆ. ಆ ಕೆಲಸವನ್ನು ಕಾಂಗ್ರೆಸ್ ಪ್ರಾಮಾಣಿಕವಾಗಿ ಮಾಡುತ್ತಿದೆ. ರಾಜ್ಯದಲ್ಲಿ ೨೦೦೮ರಿಂದ ೨೦೨೨ರ ಮಧ್ಯ 10 ವರ್ಷ ಬಿಜೆಪಿ ಆಡಳಿತವಿತ್ತು. ಬಿಜೆಪಿಯ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು, ಕರುಣಾಕರ ರೆಡ್ಡಿ ಸಚಿವರಾಗಿದ್ದರು. ಶಾಂತಕ್ಕ, ವೈ.ದೇವೇಂದ್ರಪ್ಪ ಸಂಸದರಾಗಿದ್ದರು. ತಾಳೂರು, ವಡ್ಡು ಬಸಾಪುರ ಮುಂತಾದ ಗ್ರಾಮಗಳ ಅಭಿವೃದ್ಧಿಗೆ ಏನಾದರೂ ಗ್ರ್ಯಾಂಟ್‌ ಬಂದಿದೆಯಾ? ತಾಲೂಕಿನ ಎಲ್ಲ ಗ್ರಾಮಗಳು ಅಭಿವೃದ್ಧಿ ಕಂಡಿರುವುದು ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಎಂದರು.

ಅಧಿಕಾರ ಶಾಶ್ವತವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ನೀವೇ ಸತ್ಯ. ನಾನು ಹಣ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ರಾಜಕಾರಣದಲ್ಲಿ ಧರ್ಮ ಇರಬೇಕು. ಬಡಜನತೆಯ ಸೇವೆಗಾಗಿ ನಾನು ರಾಜಕಾರಣದಲ್ಲಿದ್ದೇನೆಯೇ ಹೊರತು ಸ್ವಹಿತಕ್ಕಾಗಿ ಅಲ್ಲ. ಕ್ಷೇತ್ರದ ಜನತೆ ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣಾ ತುಕಾರಾಂ ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಅಭ್ಯರ್ಥಿಯ ಪರವಾಗಿ ಮತಯಾಚಿಸಿದರು.

ಸಂಸದ ಈ.ತುಕಾರಾಂ ಅಭ್ಯರ್ಥಿಯ ಪರ ಮತಯಾಚಿಸಿ, ಕ್ಷೇತ್ರದಲ್ಲಿ ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸಲು ನಾವು ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ಕ್ಷೇತ್ರದಲ್ಲಿ ಉತ್ತಮ ರಸ್ತೆಗಳಾಗಿವೆ. ತಾಳೂರಿನಲ್ಲಿ ₹೫೪ ಲಕ್ಷ ವೆಚ್ಚದಲ್ಲಿ ನೂತನ ಗ್ರಾಪಂ ಕಟ್ಟಡವನ್ನು ನಿರ್ಮಿಸಲಾಗಿದೆ. ಬ್ರಿಡ್ಜ್ ಆಗಿದೆ. ಆಗಾಗ್ಗೆ ತಾಳೂರು, ನಾಗಲಾಪುರ ಮಾರ್ಗದ ನಾಲೆಯನ್ನು ದುರಸ್ತಿಗೊಳಿಸಿ, ನಾರಿಹಳ್ಳದ ನೀರನ್ನು ಪೂರೈಕೆ ಮಾಡುತ್ತಿರುವುದರಿಂದ, ಈ ಭಾಗದ ಕೃಷಿಗೆ ಅನುಕೂಲವಾಗಿದೆ. ತಾಳೂರಿನಲ್ಲಿ ₹೧.೪೮ ಕೋಟಿ ವೆಚ್ಚದಲ್ಲಿ ಪ್ರೌಢಶಾಲೆಯನ್ನು ನಿರ್ಮಿಸಲಾಗಿದೆ. ಬನ್ನಿಹಟ್ಟಿಯಲ್ಲಿ ₹೧೦ ಕೋಟಿ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಆರಂಭಿಸಲಾಗಿದೆ ಎಂದರು.

ವಿಠಲಾಪುರ ಹಾಗೂ ಹಾವಿನಮಡುಗು ಮಧ್ಯ ₹೩ ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ₹೩೨ ಕೋಟಿ ವೆಚ್ಚದಲ್ಲಿ ೩೨ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಲಾಗಿದೆ. ತಾರಾನಗರ-ಲಿಂಗದಹಳ್ಳಿ ಮಧ್ಯ ₹೨.೫೦ ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ಹೀಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಕ್ಷೇತ್ರದ ಜನತೆ ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಆಶಾಲತಾ ಸೋಮಪ್ಪ, ತಿಪ್ಪೇಸ್ವಾಮಿ ಸೇರಿದಂತೆ ಹಲವು ಪಕ್ಷದ ಮುಖಂಡರು ಉಪಸ್ಥಿತರಿದ್ದರು.