ಸಂತೋಷ ಉಪಮೇಯರ್‌? ಮೇಯರ್‌ ಸ್ಥಾನಕ್ಕೆ ಜ್ಯೋತಿ, ಪೂಜಾ ಪೈಪೋಟಿ

| Published : Jun 30 2025, 12:34 AM IST

ಸಂತೋಷ ಉಪಮೇಯರ್‌? ಮೇಯರ್‌ ಸ್ಥಾನಕ್ಕೆ ಜ್ಯೋತಿ, ಪೂಜಾ ಪೈಪೋಟಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯಲ್ಲಿ ಮೇಯರ್‌- ಉಪಮೇಯರ್‌ಗಾಗಿ ಕಳೆದ ಹದಿನೈದು ದಿನಗಳಿಂದ ತೀವ್ರ ಲಾಬಿ ನಡೆಯುತ್ತಿದೆಯಾದರೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಇಬ್ಬರು ಊರಲ್ಲಿ ಇರಲಿಲ್ಲ. ಹೀಗಾಗಿ ಅಷ್ಟೊಂದು ರಂಗು ಬಂದಿರಲಿಲ್ಲ. ಇದೀಗ ಭಾನುವಾರ ರಾತ್ರಿ ಇಬ್ಬರು ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಸಚಿವ ಜೋಶಿ, ಶಾಸಕರಾದ ಬೆಲ್ಲದ, ಮಹೇಶ ಟೆಂಗಿನಕಾಯಿ ಮೂವರು ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿದ್ದಾರೆ.

ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ 24ನೆಯ ಅವಧಿಯ ಮೇಯರ್‌- ಉಪಮೇಯರ್‌ ಚುನಾವಣೆ ಜೂ. 30ರಂದು ನಡೆಯಲಿದೆ. ಪೂರ್ವ ಕ್ಷೇತ್ರದ ಪೂಜಾ ಶೇಜವಾಡ್ಕರ್‌, ಜ್ಯೋತಿ ಪಾಟೀಲ ನಡುವೆ ತುರುಸಿನ ಪೈಪೋಟಿ ನಡೆದಿದ್ದು, ಉಪಮೇಯರ್‌ ಸ್ಥಾನಕ್ಕೆ ಸಂತೋಷ ಚವ್ಹಾಣ ಪಕ್ಕಾ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಕಾಂಗ್ರೆಸ್‌ನಿಂದ ಮೇಯರ್‌ ಸ್ಥಾನಕ್ಕೆ ಸುವರ್ಣಾ ಕಲ್ಲಕುಂಟ್ಲಾ ಹಾಗೂ ಉಪಮೇಯರ್‌ ಸ್ಥಾನಕ್ಕೆ ಶಂಭು ಸಾಲ್ಮನಿ ಕಣಕ್ಕಿಳಿಯಲಿದ್ದಾರೆ. ಮೇಯರ್‌ ಸ್ಥಾನವೂ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರೆ, ಉಪಮೇಯರ್‌ ಸ್ಥಾನವೂ ಹಿಂದುಳಿದ ಬ ವರ್ಗಕ್ಕೆ ಮೀಸಲಾಗಿದೆ.

ಬಿರುಸಿನ ಚಟುವಟಿಕೆ: ಬಿಜೆಪಿಯಲ್ಲಿ ಮೇಯರ್‌- ಉಪಮೇಯರ್‌ಗಾಗಿ ಕಳೆದ ಹದಿನೈದು ದಿನಗಳಿಂದ ತೀವ್ರ ಲಾಬಿ ನಡೆಯುತ್ತಿದೆಯಾದರೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಇಬ್ಬರು ಊರಲ್ಲಿ ಇರಲಿಲ್ಲ. ಹೀಗಾಗಿ ಅಷ್ಟೊಂದು ರಂಗು ಬಂದಿರಲಿಲ್ಲ. ಇದೀಗ ಭಾನುವಾರ ರಾತ್ರಿ ಇಬ್ಬರು ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಸಚಿವ ಜೋಶಿ, ಶಾಸಕರಾದ ಬೆಲ್ಲದ, ಮಹೇಶ ಟೆಂಗಿನಕಾಯಿ ಮೂವರು ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿದ್ದಾರೆ.

ತಡರಾತ್ರಿ ವರೆಗೂ ನಡೆದ ಸಭೆಯಲ್ಲಿ ಪಾಲಿಕೆಯ ಪ್ರತಿ ಸದಸ್ಯರು, ಪಕ್ಷದ ಮಂಡಳ ಅಧ್ಯಕ್ಷರು ಸೇರಿದಂತೆ ಹಿರಿಯ ಮುಖಂಡರಿಂದ ಅಭಿಪ್ರಾಯ ಪಡೆದಿರುವ ಮೂವರು ಮುಖಂಡರು, ಬಳಿಕ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ತದನಂತರ ಕೋರ್‌ ಕಮಿಟಿ ಸಭೆಯನ್ನೂ ನಡೆಸಿದ್ದು, ಆದರೆ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.

ತೀವ್ರ ಪೈಪೋಟಿ: ಬಿಜೆಪಿಯಲ್ಲಿ ಮೇಯರ್‌ ಸ್ಥಾನಕ್ಕೆ ಪೂರ್ವ ಕ್ಷೇತ್ರದ ಪೂಜಾ ಶೇಜವಾಡ್ಕರ್‌, ಶೀಲಾ ಕಾಟ್ಕರ್‌, ಧಾರವಾಡದ ಜ್ಯೋತಿ ಪಾಟೀಲ ಸೇರಿದಂತೆ 8ಕ್ಕೂ ಹೆಚ್ಚು ಜನ ಆಕಾಂಕ್ಷಿಗಳಿದ್ದಾರೆ. ಆದರೆ, ಪೂಜಾ ಹಾಗೂ ಜ್ಯೋತಿ ಹೆಸರು ಮುಂಚೂಣಿಗೆ ಬಂದಿವೆ. ಈ ವರೆಗೂ ಪೂರ್ವ ಕ್ಷೇತ್ರಕ್ಕೆ ಈ ಅವಧಿಯಲ್ಲಿ ಒಮ್ಮೆಯೂ ಮೇಯರ್‌ಗಿರಿ ನೀಡಿಲ್ಲ. ಹೀಗಾಗಿ ಪೂಜಾ ಶೇಜವಾಡ್ಕರ್‌ ಅವರಿಗೆ ಮೇಯರ್‌ ಸ್ಥಾನ ನೀಡಬೇಕು ಎಂಬ ಅಭಿಪ್ರಾಯವನ್ನು ಕೆಲವರು ತಿಳಿಸಿದ್ದರೆ, ರಾಮಪ್ಪ ಬಡಿಗೇರ್‌ ಅವರು ಪಶ್ಚಿಮ ಕ್ಷೇತ್ರದವರಾದರೂ ಹುಬ್ಬಳ್ಳಿಯವರೇ ಆಗಿದ್ದಾರೆ. ಹೀಗಾಗಿ ಈ ಸಲ ಧಾರವಾಡಕ್ಕೆ ನೀಡಿದರೆ ಒಳಿತು ಎಂಬ ಅಭಿಪ್ರಾಯನ್ನು ಜ್ಯೋತಿ ಪಾಟೀಲ ಪರ ಕೆಲ ಸದಸ್ಯರು ನೀಡಿದ್ದಾರೆ. ಈ ಇಬ್ಬರಲ್ಲಿ ಒಬ್ಬರು ಮೇಯರ್‌ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸಂತೋಷ ಉಪಮೇಯರ್‌?: ಇನ್ನು ಸಾಮಾನ್ಯ ಬ ವರ್ಗಕ್ಕೆ ಮೀಸಲಾಗಿರುವ ಉಪಮೇಯರ್‌ ಸ್ಥಾನಕ್ಕೆ ಸಂತೋಷ ಚವ್ಹಾಣ, ಶಂಕರ ಶೇಳಕೆ, ಆನಂದ ಯಾವಗಲ್‌ ಆಕಾಂಕ್ಷಿಗಳಿದ್ದಾರೆ. ಆದರೆ, ಶಂಕರ ಶೇಳಕೆ ಈಗಾಗಲೇ ನಗರ ಯೋಜನಾ ಸ್ಥಾಯಿ ಸಮಿತಿಯಲ್ಲಿರುವುದರಿಂದ ಅವರನ್ನು ಪರಿಗಣಿಸುವುದು ಕಷ್ಟ. ಸಂತೋಷ ಚವ್ಹಾಣ ಹೆಸರು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಸಂತೋಷ ಚವ್ಹಾಣ ಉಪಮೇಯರ್‌ ಆದರೆ ಧಾರವಾಡದ ಜ್ಯೋತಿ ಪಾಟೀಲ ಅವರನ್ನು ಪರಿಗಣಿಸಬಹುದು. ಪೂಜಾ ಶೇಜವಾಡ್ಕರ್‌ ಮೇಯರ್‌ ಆದರೆ ಧಾರವಾಡದ ಶೇಳಕೆ ಅಥವಾ ಯಾವಗಲ್‌ ಅವರನ್ನು ಪರಿಗಣಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಬಲಾಬಲ: 82 ಸಂಖ್ಯೆ ಬಲದ ಪಾಲಿಕೆಯಲ್ಲಿ 39 ಬಿಜೆಪಿ, 33 ಕಾಂಗ್ರೆಸ್‌, 3 ಎಐಎಂಐಎಂ, 1 ಜೆಡಿಎಸ್‌, 6 ಪಕ್ಷೇತರ ಸದಸ್ಯರಿದ್ದಾರೆ. ಪಕ್ಷೇತರರ ಪೈಕಿ ಇಬ್ಬರು ಕಾಂಗ್ರೆಸ್‌ ಬೆಂಬಲಿತರಾಗಿದ್ದರೆ, ಮೂವರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಜೆಡಿಎಸ್‌ನ ಒಬ್ಬರು ಕೂಡ ಬಿಜೆಪಿಗೆ ಬೆಂಬಲಿಸಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಪಕ್ಷೇತರರ ಪೈಕಿ ಒಬ್ಬರು ತಟಸ್ಥವಾಗಿ ಉಳಿದಿದ್ದು, ಆಗಿನ ಪರಿಸ್ಥಿತಿ ನೋಡಿಕೊಂಡು ಮತ ಚಲಾಯಿಸಲಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ ಮೂವರು ಸದಸ್ಯರನ್ನು ಹೊಂದಿರುವ ಎಐಎಂಐಎಂ ಕೂಡ ಹಿಂದಿನಂತೆ ಕಣಕ್ಕೆ ಇಳಿಯಲಿದೆ.