ಸಾರಾಂಶ
- ಮನವಿ ತಿರಸ್ಕರಿಸಿದ ಧಾರ್ಮಿಕ ದತ್ತಿ ಇಲಾಖೆ । ಕಳೆದ ಬಾರಿ ಒಂದು ದಿನ ಅವಕಾಶ ಕೊಟ್ಟಿದ್ದಕ್ಕೆ, ಈ ಬಾರಿ 3 ದಿನ ಕೇಳಿದ ಸಮಿತಿ,
ಆರ್. ತಾರಾನಾಥ್ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದತ್ತಪೀಠದ ಆವರಣದೊಳಗೆ ಕಳೆದ ಬಾರಿ ದತ್ತಜಯಂತಿಯ ಕೊನೆಯ ದಿನ ಹೋಮ ನಡೆಸಲು ಅವಕಾಶ ನೀಡಲಾಗಿತ್ತು. ಅದರಂತೆ ಈ ಬಾರಿಯೂ ಕೂಡ ಅವಕಾಶ ನೀಡುವಂತೆ ದತ್ತಪೀಠ ಸಂವರ್ಧನಾ ಸಮಿತಿ ಜಿಲ್ಲಾಡಳಿತಕ್ಕೆ ಕೋರಿಕೊಂಡಿತ್ತು.
ಕಳೆದ ಬಾರಿ ಹೋಮಕ್ಕೆ ಅವಕಾಶ ನೀಡಿದ್ದು ಒಂದು ದಿನ ಮಾತ್ರ. ಆದರೆ, ಈ ಬಾರಿ ಮೂರು ದಿನವೂ ಅದೇ ಸ್ಥಳದಲ್ಲಿ ಹೋಮಕ್ಕೆ ಅವಕಾಶ ನೀಡಬೇಕೆಂದು ದತ್ತಪೀಠ ಸಂವರ್ಧನಾ ಸಮಿತಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕೋರಿಕೆ ಸಲ್ಲಿಸಿತ್ತು.ಸಭೆಯಲ್ಲಿ ಚರ್ಚೆಯಾದ ವಿಷಯದ ವರದಿಯನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಡಿ. 7 ರಂದು ಜಿಲ್ಲಾಡಳಿತ ರವಾನೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಇಲಾಖೆ ಆಯುಕ್ತರು ಜಿಲ್ಲಾಧಿಕಾರಿಗೆ ಡಿ.13 ರಂದು ಪತ್ರ ಬರೆದು ಈ ಹಿಂದೆ 2022 ರಲ್ಲಿ ನಡೆದಂತೆ ಈ ವರ್ಷ ಸೂಕ್ತ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ನಿಯಮಾನುಸಾರ ನಡೆಸಲು ಮಾತ್ರ ಸೂಚನೆ ನೀಡಿದ್ದಾರೆ.
ಅಂದರೆ, ಮೂರು ದಿನಗಳ ಕಾಲ ಹೋಮ, ಹವನ ನಡೆಸಲು ಅವಕಾಶ ನೀಡಬಾರದು, ಕಳೆದ ವರ್ಷದಂತೆ ಒಂದು ದಿನ ಮಾತ್ರ ಅವಕಾಶ ನೀಡಬೇಕೆಂದು ಪರೋಕ್ಷವಾಗಿ ಹೇಳಿದೆ. ಜಿಲ್ಲಾಡಳಿತವೂ ಕೂಡ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶನದಂತೆ ದತ್ತಜಯಂತಿ ಆಚರಿಸಲು ಅವಕಾಶ ನೀಡಲಾಗುವುದೆಂದು ತಿಳಿಸಿದೆ.ಒಂದು ದಿನ ಹೋಮಕ್ಕೆ ಅವಕಾಶ ನೀಡಿದ್ದರಿಂದ ಈ ಬಾರಿ ಮೂರು ದಿನ ಹೋಮ ನಡೆಸಲು ಅವಕಾಶ ನೀಡುವಂತೆ ಕೇಳಲು ಅವಕಾಶ ಮಾಡಿಕೊಟ್ಟಿತು. ಈ ಅವಕಾಶಕ್ಕೆ ಈಗಿನ ಕಾಂಗ್ರೆಸ್ ಸರ್ಕಾರ ಬ್ರೇಕ್ ಹಾಕುತ್ತೆ ಎಂಬ ಲೆಕ್ಕಾಚಾರ ತಪ್ಪಾಗಿದೆ. ಬಿಜೆಪಿ ಸರ್ಕಾರ ಮಾಡಿದ ಸಂಪ್ರದಾಯಕ್ಕೆ ಕಾಂಗ್ರೆಸ್ ಸರ್ಕಾರ ಮುದ್ರೆ ಹಾಕಿ ಪಾಸ್ ಮಾಡಿದಂತಾಗಿದೆ. ವಿವಾದಿತ ಸ್ಥಳ:
ದತ್ತಪೀಠದ ವಿವಾದಿತ ಸ್ಥಳದಲ್ಲಿ ಹೊಸ ಆಚರಣೆಗೆ ಅವಕಾಶ ಇಲ್ಲ. ಕಳೆದ ವರ್ಷ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ದಲ್ಲಿದ್ದಾಗ ದತ್ತಪೀಠದ ವಿಷಯದಲ್ಲಿ ತರಾತುರಿಯಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿತ್ತು.ಅವುಗಳಲ್ಲಿ ಪ್ರಮುಖವಾಗಿ ದತ್ತಪೀಠ ಸಂವರ್ಧನಾ ಸಮಿತಿ ರಚನೆ, ಇಬ್ಬರು ಹಿಂದೂ ಅರ್ಚಕರ ನೇಮಕ, ಮೂರು ದಿನ ನಡೆಯಲಿರುವ ದತ್ತಜಯಂತಿಯಲ್ಲಿ ಕೊನೆಯ ದಿನ ದತ್ತಪೀಠದ ಆವರಣದೊಳಗೆ ಹೋಮಕ್ಕೆ ಅವಕಾಶ. ಈ ಬೆಳವಣಿಗೆ ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು. ಇದು, ಸಂಪೂರ್ಣವಾಗಿ ಕಾನೂನು ಉಲ್ಲಂಘನೆ ಎಂಬ ಗಂಭೀರ ಆರೋಪ, ಟೀಕೆಗಳು ವ್ಯಕ್ತವಾಗಿದ್ದವು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ದತ್ತಪೀಠದ ಸಂವರ್ಧನಾ ಸಮಿತಿ ರದ್ದುಪಡಿಸಬೇಕೆಂಬ ಬೇಡಿಕೆಯನ್ನು ಮುಸ್ಲಿಂ ಸಮುದಾಯದ ಕಾಂಗ್ರೆಸ್ ಮುಖಂಡರು ಹಾಗೂ ಬಾಬಾಬುಡನ್ ಸ್ವಾಮಿ ದರ್ಗಾ ಹಿತರಕ್ಷಣಾ ಸಮಿತಿ ಕೇಳಿಕೊಂಡಿತ್ತು. ನೂತನ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾದರೂ ಅಂದುಕೊಂಡಿರುವ ಕೆಲಸ ಆಗಿಲ್ಲ.ದತ್ತಜಯಂತಿ ಉತ್ಸವದ ವೇಳೆ ಮೂರು ದಿನ ಹೋಮಕ್ಕೆ ಅವಕಾಶ ನೀಡಿದರೆ, ಮುಸ್ಲಿಂ ಸಮುದಾಯದ ವಿರೋಧ ಕಟ್ಟಿ ಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಕೋರಿಕೆಯನ್ನು ತಳ್ಳಿ ಹಾಕಿರಬಹುದೆಂದು ಹೇಳಲಾಗುತ್ತಿದೆ. ---- ಬಾಕ್ಸ್ -----
ಅಂದು ಕಠಿಣ; ಇಂದು ಮೃದುದತ್ತಪೀಠದ ಹೋರಾಟದಲ್ಲಿ ಸಂಘ ಪರಿವಾರಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಬ್ರೇಕ್ ಹಾಕುತ್ತಲೇ ಬಂದಿವೆ.
ರಾಜ್ಯದಲ್ಲಿ ಎಸ್.ಎಂ. ಕೃಷ್ಣ ಸಿಎಂ ಆಗಿದ್ದಾಗ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಡಿ.ಬಿ. ಚಂದ್ರೇಗೌಡ ಅವರು 2004 ರ ದತ್ತ ಜಯಂತಿಯಲ್ಲಿ ಪಾಲ್ಗೊಂಡು ದತ್ತ ಪೀಠದಲ್ಲಿ ನಡೆದ ಹೋಮದಲ್ಲಿ ಹಾಜರಿದ್ದರು.ಆಗ, ಮುಸ್ಲಿಂ ಸಮುದಾಯ ಮಾತ್ರವಲ್ಲ, ಎಡ ಪಂಥೀಯರು ಆಕ್ರೋಶ ಹೊರ ಹಾಕಿದ್ದರು. ನಂತರದ ವರ್ಷಗಳಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಈ ತಪ್ಪು ಮಾಡಲಿಲ್ಲ. ಕೆಲವು ಸಂದರ್ಭದಲ್ಲಿ ಕಠಿಣ ನಿಲುವು ತಾಳುವ ಮೂಲಕ ಅಲ್ಪಸಂಖ್ಯಾತರ ಪರವಾಗಿದ್ದೇವೆಂದು ಸಾಭೀತುಪಡಿಸಿತು.
ಎನ್. ಧರ್ಮಸಿಂಗ್ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಅಂದರೆ, 2005 ರಲ್ಲಿ ಚಿಕ್ಕಮಗಳೂರಿನಲ್ಲಿ ಶೋಭಾ ಯಾತ್ರೆ ನಿಷೇಧ ಮಾಡಲಾಗಿತ್ತು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ಶೋಭಾಯಾತ್ರೆ ನಿಷೇಧ ಮಾಡಲಾಗಿತ್ತು. ಆಗ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಡಿ.ವಿ.ಸದಾನಂದಗೌಡ ಅವರು ನಿಷೇಧಾಜ್ಞೆ ಉಲ್ಲಂಘಿಸಿ ಯಾತ್ರೆ ಹೊರಟಾಗ ಮಾರ್ಗ ಮಧ್ಯದಲ್ಲಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.2004ರ ನಂತರ 2023 ರಲ್ಲಿ ದತ್ತಪೀಠದ ಆವರಣದಲ್ಲಿ ಹೋಮಕ್ಕೆ ಅವಕಾಶ ನೀಡಲಾಯಿತು. ಇದಕ್ಕೆ ಈಗಿನ ಕಾಂಗ್ರೆಸ್ ಸರ್ಕಾರ ಬ್ರೇಕ್ ಹಾಕುತ್ತಾ ಎಂಬ ಕುತೂಹಲ ಸಂಪ್ರದಾಯವಾಗಿ ಮತ್ತೆ ಮುಂದುವರೆದಿದೆ. 16 ಕೆಸಿಕೆಎಂ 4
ದತ್ತಪೀಠದ ವಿಹಂಗಮ ನೋಟ.