ಹುಬ್ಬಳ್ಳಿಗೆ ಭೇಟಿ ನೀಡಿದ್ದ ಸಾರಾ ಅಲಿಖಾನ್‌

| Published : Apr 05 2025, 12:45 AM IST

ಸಾರಾಂಶ

ಸಾರಾ ಅಲಿಖಾನ್‌ ಹಾಕಿರುವ ಸ್ಟೋರಿಯ ಸ್ಕ್ರೀನ್‌ಶಾಟ್‌ನ್ನು ಶಾಸಕ ಮಹೇಶ ಟೆಂಗಿನಕಾಯಿ ಫೇಸ್‌ಬುಕ್‌ ಹಾಗೂ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಹುಬ್ಬಳ್ಳಿ: ಬಾಲಿವುಡ್‌ ನಟಿ ಸಾರಾ ಅಲಿಖಾನ್‌ ಇತ್ತೀಚಿಗೆ ಹುಬ್ಬಳ್ಳಿಯ ಪುರಾತನ ದೇವಸ್ಥಾನವಾಗಿರುವ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಆ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ನಟ ಸೈಫ್‌ ಅಲಿಖಾನ್‌ ಪುತ್ರಿ ಸಾರಾ ಅಲಿಖಾನ್‌ ಹುಬ್ಬಳ್ಳಿಯ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು, ದೇವಸ್ಥಾನದ ಎದುರಿಗೆ ವಿವಿಧ ಭಂಗಿಗಳಲ್ಲಿ ಪೋಟೋ ತೆಗೆಸಿಕೊಂಡಿದ್ದಾರೆ. ಜತೆಗೆ ಆ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಶಾಸಕ ಮೆಚ್ಚುಗೆ: ಸಾರಾ ಅಲಿಖಾನ್‌ ಹಾಕಿರುವ ಸ್ಟೋರಿಯ ಸ್ಕ್ರೀನ್‌ಶಾಟ್‌ನ್ನು ಶಾಸಕ ಮಹೇಶ ಟೆಂಗಿನಕಾಯಿ ಫೇಸ್‌ಬುಕ್‌ ಹಾಗೂ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಲ್ಯಾಣ ಚಾಲುಕ್ಯರಿಂದ ನಿರ್ಮಾಣವಾದ ಹಾಗೂ ಅಮರ ಶಿಲ್ಪಕಲೆಗೆ ಪ್ರಸಿದ್ಧಿ ಪಡೆದಿರುವ ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಐತಿಹಾಸಿಕ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಶಿವ ಭಕ್ತೆಯಾದ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಭೇಟಿ ನೀಡಿದ ವಿಷಯ ತಿಳಿದು ಸಂತೋಷವಾಗಿದೆ.

ಇಂತಹ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಿಗೆ ಸೆಲೆಬ್ರಿಟಿಗಳು ಭೇಟಿ ನೀಡಿದಾಗ ನಮ್ಮ ದೇಶದ ಸಂಸ್ಕೃತಿ ಹಾಗೂ ಪರಂಪರೆ ಎಲ್ಲೆಡೆ ಪಸರಿಸುವುದಲ್ಲದೇ, ನಮ್ಮ ನಗರವು ಪ್ರವಾಸಿ ತಾಣವಾಗಿ ಬಿಂಬಿತಗೊಳ್ಳುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ ಎಂದು ಅಭಿನಂದನೆಯ ಮಾತು ಬರೆದುಕೊಂಡಿದ್ದಾರೆ.

ದೇವಸ್ಥಾನದ ಬಗ್ಗೆ ಕೊಂಚ:ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿರುವ ಚಂದ್ರಮೌಳೇಶ್ವರ ದೇವಸ್ಥಾನ ಅತ್ಯದ್ಭುತ ಶಿಲ್ಪಕಲೆಯಿಂದ ಗಮನ ಸೆಳೆಯುತ್ತಿದ್ದು, ಈ ದೇವಸ್ಥಾನ ಪುರಾತತ್ವ ಇಲಾಖೆಯ ಆಡಳಿತಕ್ಕೊಳಪಟ್ಟಿದೆ.