ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಶರಣರು: ಸುಮತಿ ಜಯಪ್ಪ

| Published : Mar 22 2024, 01:10 AM IST

ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಶರಣರು: ಸುಮತಿ ಜಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ತಾಲೂಕು ಕುರ್ಕಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಸಾಹಿತ್ಯ ಪರಿಷತ್‌ ವತಿಯಿಂದ ಸಾಹಿತ್ಯೋತ್ಸವ ಹಾಗೂ ದತ್ತಿ ಕಾರ್ಯಕ್ರಮ ಗುರುವಾರ ಜರುಗಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

12ನೇ ಶತಮಾನದಲ್ಲಿ ವಚನ ಸಾಹಿತ್ಯ ಬೆಳೆದು ಬಂದಿದ್ದು, ವಚನ ಸಾಹಿತ್ಯದ ಮೂಲಕ ಹಲವಾರು ಶರಣರು ಜಾತಿ ವ್ಯವಸ್ಥೆ ಯನ್ನು ಕಿತ್ತೆಸೆದು ಸಮ ಸಮಾಜ ನಿರ್ಮಾಣ ಮಾಡುವುದಕ್ಕೆ ಶ್ರಮಿಸಿದರು ಎಂದು ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುಮತಿ ಜಯಪ್ಪ ತಿಳಿಸಿದರು.

ದಾವಣಗೆರೆ ತಾಲೂಕಿನ ಕುರ್ಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಹಾಗೂ ದತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಚನ ಸಾಹಿತ್ಯ ಕುರಿತಾಗಿ ಉಪನ್ಯಾಸ ನೀಡುತ್ತಾ ಮಾತನಾಡಿದ ಅವರು, ಶಾಲಾ ಮಕ್ಕಳು ಜಾತ್ಯಾತೀತ ಮನೋಭಾವ ಬೆಳೆಸಿಕೊಳ್ಳಬೇಕು. ಆ ಮೂಲಕ ತಾವು ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಬೇಕು. ಬಸವಣ್ಣನವರ ಕಳಬೇಡ ಕೊಲಬೇಡ ವಚನದ ಆಶಯದಂತೆ ಮಕ್ಕಳು ನಡೆ-ನುಡಿಯನ್ನು ಮೈಗೂಡಿಸಿಕೊಂಡಿದ್ದೇ ಆದರೆ ಶರಣರು ಕಂಡ ಕನಸನ್ನು ನನಸು ಮಾಡಬಹುದು ಎಂದರು.

ಶರಣರು ಹಂಚಿ ತಿನ್ನುವ ಗುಣವನ್ನು ಕಲಿಸಿದರು. ವಿದ್ಯೆ ಪ್ರಪಂಚದಲ್ಲಿ ಅತ್ಯಂತ ದೊಡ್ಡ ವಸ್ತು. ಮಕ್ಕಳಿಗೆ ಪರೀಕ್ಷಾ ಸಿದ್ಧತೆಯನ್ನು ಕುರಿತಾಗಿ ಮಾತನಾಡುತ್ತಾ, ಮಕ್ಕಳೇ ಇಷ್ಟಪಟ್ಟು ಓದಿ, ಕಷ್ಟಪಟ್ಟು ಓದಬೇಡಿ. ನೀವು ದೊಡ್ಡ ದೊಡ್ಡ ಕನಸುಗಳನ್ನು ಕಾಣಿ, ಆ ಕನಸುಗಳು ನಿಮ್ಮ ಗುರಿಯನ್ನು ತಲುಪುವಂತೆ ನಿಮ್ಮನ್ನ ಪ್ರೇರೇಪಿಸುವಂತೆ ಇರಬೇಕು. ಪರೀಕ್ಷೆಗೆ ಭಯಪಡಬೇಡಿ ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ ಆಗ ಯಶಸ್ಸು ಸಾಧ್ಯ ಎಂದು ತಿಳಿಸಿದರು. ಹಾಗೆ ಓದಿನಲ್ಲಿ ಏಕಾಗ್ರತೆ ಬಹಳ ಮುಖ್ಯ ಅದನ್ನ ಬೆಳೆಸಿಕೊಳ್ಳಿ ಓದಿನಲ್ಲಿ ನಿರಂತರತೆ ಇರಲಿ, ಓದಿದ್ದನ್ನು ಮನನ ಮಾಡಿಕೊಂಡು ಬರೆಯಬೇಕು. ದೈನಂದಿನ ಪಾಠವನ್ನು ಅಂದೇ ಅಭ್ಯಸಿಸಿದರೆ ಪರೀಕ್ಷೆಗೆ ಯಾವ ಭಯವೂ ಇರಲಾರದು ಎಂದು ತಿಳಿಸಿದರು.

ದತ್ತಿ ದಾನಿ ಕೆ.ಜಿ.ವೇದಮೂರ್ತಿ ಗೌಡ್ರು ಮಾತನಾಡುತ್ತಾ, ಮಕ್ಕಳು ಕೀಳರಿಮೆ ಬೆಳೆಸಿಕೊಳ್ಳಬಾರದು. ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು. ಯಾರು ಹುಟ್ಟುತ್ತಲೇ ದೊಡ್ಡವರಾಗುವುದಿಲ್ಲ. ಆದ್ದರಿಂದ ನೀವು ವಿದ್ಯೆ ಮತ್ತು ಶ್ರಮದಿಂದ ಬೆಳೆಯ ಬೇಕು. ಕನ್ನಡ ಅತ್ಯಂತ ಸುಂದರ ಸುಲಲಿತ ಭಾಷೆ. ಇಂದು ಕನ್ನಡ ಕಲಿತು ಕನ್ನಡದಲ್ಲಿ ಐಎಎಸ್ ಪರೀಕ್ಷೆಯನ್ನು ಪಾಸು ಮಾಡಿದವರನೇಕರಿದ್ದಾರೆ. ಕನ್ನಡದ ಬಗ್ಗೆ ಕೀಳರಿಮೆ ಬೇಡ. ಅಭಿಮಾನ ಬೆಳೆಸಿಕೊಳ್ಳಿ. ಅನ್ಯ ಭಾಷೆಯ ಬಗ್ಗೆ ವ್ಯಾಮೋಹ ಬೇಡ ಎಂದು ಮಕ್ಕಳಿಗೆ ಕರೆ ನೀಡಿದರು.ಮುಖ್ಯೋಪಾಧ್ಯಾಯಿನಿ ಕೆ.ಬಿ.ಮೀರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಭಾಷೆಯ ಅಭಿಮಾನವನ್ನು ನಾವು ಯಾವತ್ತೂ ಬಿಡಬಾರದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಸಾಪದಿಂದ ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿ ಗ್ರಾಮೀಣ ಸಿರಿ ಪ್ರಶಸ್ತಿ ಯನ್ನು ಪಡೆದ ಗ್ರಾಮೀಣ ಸಾಧಕಿ ಬಿ.ಎಂ.ಪರಿಮಳ ಅಜ್ಜಯ್ಯ ಕುರ್ಕಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿದ ನಿವೃತ್ತ ಶಿಕ್ಷಣ ಸಂಯೋಜಕ ಕೆ.ಜಿ.ಸಿದ್ದಪ್ಪ ಕುರ್ಕಿರವರನ್ನು ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ನಿರ್ದೇಶಕರಾದ ಬಿ.ವಿ.ಪರಿಮಳ ಜಗದೀಶ, ಎಂ.ಷಡಾಕ್ಷರಪ್ಪ ಬೇತೂರು, ಎ.ಎಂ. ಸಿದ್ದೇಶ್, ಆಜೀವ ಸದಸ್ಯರಾದ ಕಳಸಪ್ಪ, ವರ್ಷ ಬೇಕರಿ ಸಿದ್ದೇಶ್, ಶಿಕ್ಷಕರಾದ ಸಿ.ಜಿ.ಜಗದೀಶ್ ಕೂಲಂಬಿ, ಎಸ್.ಪಾರ್ವತಮ್ಮ, ಎ.ಆರ್.ರಾಘವೇಂದ್ರ, ಆರ್.ಪ್ರಕಾಶ್, ಎಂ.ನಾಗರಾಜ್ ಉಪಸ್ಥಿತರಿದ್ದರು.