ವಚನಗಳು ವಿದ್ಯಾರ್ಥಿ ವ್ಯಕ್ತಿತ್ವ ವಿಕಸನಕ್ಕೆ ಮಾರ್ಗದರ್ಶಿ

| Published : Mar 22 2024, 01:09 AM IST / Updated: Mar 22 2024, 01:10 AM IST

ವಚನಗಳು ವಿದ್ಯಾರ್ಥಿ ವ್ಯಕ್ತಿತ್ವ ವಿಕಸನಕ್ಕೆ ಮಾರ್ಗದರ್ಶಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಗುರು ಬಸವೇಶ್ವರರು ಜಾತಿ ವ್ಯವಸ್ಥೆ ತೊಡೆದು ಹಾಕಿ ಸಮ ಸಮಾಜ ನಿರ್ಮಿಸಲು ಶ್ರಮಿಸಿದ ಮಹಾತ್ಮರಾಗಿದ್ದು, ಇತ್ತೀಚೆಗೆ ಕರ್ನಾಟಕ ಸರ್ಕಾರ ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಶ್ಲಾಘನೀಯ

ಗದಗ: ವಚನ ಸಾಹಿತ್ಯ ಸುಲಭವಾಗಿ ಅರ್ಥವಾಗುವ ಮತ್ತು ಅಪಾರ ಜ್ಞಾನ ನೀಡುವ ಸಾಹಿತ್ಯವಾಗಿದ್ದು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ಮಾರ್ಗದರ್ಶಿಯಾಗಿವೆ, ವಿದ್ಯಾರ್ಥಿಗಳು ಪಠ್ಯ ವಿಷಯದ ಜತೆಗೆ ವಚನಗಳನ್ನು ಅಧ್ಯಯನ ಮಾಡಬೇಕು ಎಂದು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಉಪಾಧ್ಯಕ್ಷೆ ಶ್ರೀದೇವಿ ಶೆಟ್ಟರ ಹೇಳಿದರು.

ಅವರು ಗದಗ ನಗರದ ತೋಂಟದಾರ್ಯ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಮಹಿಳಾ ದಿನದ ಅಂಗವಾಗಿ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರವು ಆಯೋಜಿಸಿದ್ದ ವಚನ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಶ್ವಗುರು ಬಸವೇಶ್ವರರು ಜಾತಿ ವ್ಯವಸ್ಥೆ ತೊಡೆದು ಹಾಕಿ ಸಮ ಸಮಾಜ ನಿರ್ಮಿಸಲು ಶ್ರಮಿಸಿದ ಮಹಾತ್ಮರಾಗಿದ್ದು, ಇತ್ತೀಚೆಗೆ ಕರ್ನಾಟಕ ಸರ್ಕಾರ ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಶ್ಲಾಘನೀಯವಾಗಿದೆ. ಮಕ್ಕಳನ್ನು ಪ್ರಜ್ಞಾವಂತ ನಾಗರಿಕರನ್ನಾಗಿಸುವ ನಿಟ್ಟಿನಲ್ಲಿ ಅವರು ಮೌಲ್ಯಯುತ ಜೀವನ ನಡೆಸುವ ನಿಟ್ಟಿನಲ್ಲಿ ವಚನ ಸಾಹಿತ್ಯದ ಅಧ್ಯಯನ ಮಹತ್ವ ಪೂರ್ಣವಾಗಿದೆ ಎಂದರು.

ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ನಗರಸಭೆ ಅಧ್ಯಕ್ಷೆ ಶಿವಲೀಲಾ ಅಕ್ಕಿ ಮಾತನಾಡಿ, ವಚನ ಪ್ರಬಂಧ ಸ್ಪರ್ಧೆ ಆಯೋಜಿಸಿರುವ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಕಾರ್ಯ ಅಭಿನಂದನೀಯವಾಗಿದ್ದು, ಇಂಥ ಮೌಲಿಕ ಸ್ಪರ್ಧೆಗಳಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವುದು ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಶಿಕ್ಷಕರಿಗೆ ಗೌರವ ನೀಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ತಂದೆ-ತಾಯಿಗಳೊಂದಿಗೆ, ಗುರು-ಹಿರಿಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸುವ ವಚನಸಾಹಿತ್ಯ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುತ್ತವೆ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಕೆಲಸ ವಚನಗಳು ಮಾಡುತ್ತವೆ ಎಂದರು.

ವಿದ್ಯಾರ್ಥಿಗಳು ವಚನ ಪ್ರಾರ್ಥನೆ ನೆರವೇರಿಸಿದರು. ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ, ಅಕ್ಕಮಹಾದೇವಿ ಚಟ್ಟಿ, ಸುವರ್ಣ ವಸ್ತ್ರದ, ವಿಶಾಲಾಕ್ಷಿ ಕುರಗೋಡ, ಕವಿತಾ ನಾರಗುಣ್ಣವರ ಉಪಸ್ಥಿತರಿದ್ದರು. ಸುರೇಖಾ ಕುಂಬಾರಗೇರಿಮಠ ನಿರೂಪಿಸಿದರು. ಸುಮಾ ಹಿರೇಮಠ ವಂದಿಸಿದರು. ಶಿಕ್ಷಕ ಕೆ.ಎಂ. ಗೌಡರ, ಬಶೀರಾ ಕಲೇಬಾಯಿ, ಮಂಜುಳಾ ಭೂಮಣ್ಣವರ, ಶಶಿಧರಗೌಡ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.