ಇಂದಿನ ಯುವ ಸಮುದಾಯಕ್ಕೆ ನಮ್ಮ ಭಾಗದ ಕಲೆ,ಸಂಸ್ಕೃತಿ ಪರಿಚಯಿಸುವುದರ ಜತೆಗೆ ಗ್ರಾಮೀಣ ಕಲೆ, ಪಾರಂಪರಿಕ ಆಹಾರ ಪದ್ಧತಿ, ಸಾವಯವ ಆಹಾರ ಪದ್ಧತಿ ಮತ್ತು ಉಡುಗೆ ತೊಡುಗೆ ಬಗ್ಗೆ ತಿಳಿಸಿಕೊಡಲಾಗುತ್ತಿದೆ
ಕೊಪ್ಪಳ: ಸರಸ್ ಮೇಳವು ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವ ಮೂಲಕ ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಲು ಉತ್ತಮ ಮಾರುಕಟ್ಟೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಅವರು ಬುಧವಾರ ಕೊಪ್ಪಳ ನಗರದ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್ ಬೆಂಗಳೂರು, ಜಿಲ್ಲಾಡಳಿತ, ಜಿಪಂ ಮತ್ತು ಜಿಲ್ಲಾ ಕೌಶಲ್ಯ ಮಿಷನ್ ಕೊಪ್ಪಳ ಹಾಗೂ ಸಂಜೀವಿನಿ ಎನ್.ಆರ್.ಎಲ್.ಎಂ ಮತ್ತು ನಲ್ಮ್ ಯೋಜನೆಯಡಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ.11ರಿಂದ 13ರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ 2026ರ ಸರಸ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸರಸ್ ಮೇಳ ಆಯೋಜಿಸಲಾಗಿದ್ದು, ಒಳ್ಳೆಯ ವಿಚಾರವಾಗಿದೆ. ಈ ಕಾರ್ಯಕ್ರಮದ ಮೂಲಕ ಜನರಿಗೆ ಮತ್ತು ವಿಶೇಷವಾಗಿ ಇಂದಿನ ಯುವ ಸಮುದಾಯಕ್ಕೆ ನಮ್ಮ ಭಾಗದ ಕಲೆ,ಸಂಸ್ಕೃತಿ ಪರಿಚಯಿಸುವುದರ ಜತೆಗೆ ಗ್ರಾಮೀಣ ಕಲೆ, ಪಾರಂಪರಿಕ ಆಹಾರ ಪದ್ಧತಿ, ಸಾವಯವ ಆಹಾರ ಪದ್ಧತಿ ಮತ್ತು ಉಡುಗೆ ತೊಡುಗೆ ಬಗ್ಗೆ ತಿಳಿಸಿಕೊಡಲಾಗುತ್ತಿದೆ. ಈ ಮೇಳದಲ್ಲಿನ ಬಹುತೇಕ ಎಲ್ಲ ಉತ್ಪನ್ನಗಳು ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸೇರಿದ್ದರಿಂದ ಮಹಿಳಾ ಉದ್ಯಮಿಗಳಿಗೆ ಉತ್ತಮ ಆದಾಯ ಒದಗಿಸಲು ಈ ಮೇಳವು ಪೂರಕವಾಗಲಿದೆ. ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದರ ಜತೆಗೆ ಮಹಿಳಾ ಉದ್ಯಮಶೀಲತೆಗೆ ಉತ್ತೇಜನ ನೀಡುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸಲಿವೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಜಿಲ್ಲಾ ಕೌಶಲ್ಯ ಮಿಷನ್ ವ್ಯವಸ್ಥಾಪಕರು, ಎನ್.ಆರ್.ಎಲ್.ಎಂ ಮತ್ತು ನಲ್ಮ್ ಯೋಜನೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.ಸ್ವ-ಸಹಾಯ ಗುಂಪಿನ ಸದಸ್ಯರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ:
ನಗರ ಮತ್ತು ಗ್ರಾಮೀಣ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರು ತಯಾರಿಸುತ್ತಿರುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಒಟ್ಟು 30 ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಪಂಗಳಿಂದ ಬಂದ ಸ್ವ-ಸಹಾಯ ಗುಂಪಿನ ಮಹಿಳೆಯರು ತಾವು ತಯಾರಿಸಿದ ವಿವಿಧ ಉತ್ಪನ್ನ ಪ್ರದರ್ಶಿಸಿ ಮಾರಾಟ ಮಾಡಿದರು.ಮೇಳದಲ್ಲಿ ಕಿನ್ನಾಳ ಗೊಂಬೆಗಳು, ಗಾಣದಿಂದ ತಯಾರಿಸಿದ ಕೊಬ್ಬರಿ ಎಣ್ಣೆ, ಕೈಮಗ್ಗದಿಂದ ತಯಾರಿಸಿದ ಕಾಟನ್ ಸೀರೆಗಳು, ಹ್ಯಾಂಡ್ ಮೇಡ್ ಬ್ಯಾಗ್, ಕೌದಿ, ಲಮಾಣಿ ಕೈಗಾರಿಕಾ ಉತ್ಪನ್ನಗಳು, ಬಾಳೆ ನಾರು ಉತ್ಪನ್ನ, ಬಿದಿರಿನ ಬುಟ್ಟಿಗಳು, ರಾಗಿ ಪೌಡರ್, ಸಿರಿಧಾನ್ಯ ಪೌಡರ್, ಅಗರಬತ್ತಿ, ಮಸಾಲೆ ಹಾಗೂ ವಿವಿಧ ರೀತಿಯ ಉಪ್ಪಿನಕಾಯಿ, ಸಜ್ಜೆ, ಜೋಳ ಮತ್ತು ರಾಗಿಯ ಮಂಡಾಳು, ಚಾಕಲೇಟ್, ಸಾವಯವ ಉತ್ಪನ್ನ, ಹಪ್ಪಳ, ಚಕ್ಕುಲಿ, ನಿಪ್ಪಟ್ಟು, ಕಜ್ಜಾಯ ಸೇರಿದಂತೆ ವಿವಿಧ ಆಹಾರ ಪದಾರ್ಥಗಳು ಹಾಗೂ ಕರಕುಶಲ ವಸ್ತು ಮಾರಾಟಕ್ಕೆ ಇಡಲಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಈ ಮೇಳಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ.