ಸಾರಾಂಶ
ರಂಗ ಶಿಕ್ಷಣ ಪಡೆದ ಮಕ್ಕಳು ಆತ್ಮವಿಶ್ವಾಸದಿಂದ ಇರುತ್ತಾರೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ರಂಗಶಿಕ್ಷಣ ಅತ್ಯವಶ್ಯಕ.
ಕನ್ನಡಪ್ರಭ ವಾರ್ತೆ ಮೈಸೂರು
ರಂಗ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮೂಡಿಸುತ್ತದೆ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಹೇಳಿದರು.ನಗರದ ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಜೆಎಸ್ಎಸ್ ಕಲಾಮಂಟಪದಿಂದ ಆಯೋಜಿಸಿದ್ದ ಜೆಎಸ್ಎಸ್ ರಂಗೋತ್ಸವ-2024 ಕಾರ್ಯಕ್ರಮವನ್ನು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರಂಗ ಶಿಕ್ಷಣ ಪಡೆದ ಮಕ್ಕಳು ಆತ್ಮವಿಶ್ವಾಸದಿಂದ ಇರುತ್ತಾರೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ರಂಗಶಿಕ್ಷಣ ಅತ್ಯವಶ್ಯಕ. ಜೆಎಸ್ಎಸ್ ಸಂಸ್ಥೆಯು 1948ರಲ್ಲಿ ಕಲಾ ಸಂಸ್ಥೆಯನ್ನು ಸ್ಥಾಪಿಸಿ, ಅಧ್ಯಾಪಕರನ್ನು ನೇಮಿಸಿಕೊಂಡು ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡಿಸುತ್ತಿರುವುದು ಪ್ರಶಂಸನೀಯ. ಈ ರಂಗಮಂದಿರ, ಇಲ್ಲಿನ ಅಚ್ಚುಕಟ್ಟುತನ, ಕಾಳಜಿ ನೋಡಿದಾಗ ತುಂಬಾ ಸಂತೋಷವಾಗುತ್ತದೆ ಎಂದು ಹೇಳಿದರು.ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಆರ್. ಮೂಗೇಶಪ್ಪ ಅವರು ಹಿಂದೆ ದಣಿದ ರೈತಾಪಿ ವರ್ಗದವರಿಗೆ ನಾಟಕಗಳು ಮನರಂಜನೆ ನೀಡುತ್ತಿದ್ದವು. ಬಾಲ್ಯವಿವಾಹ, ಭ್ರಷ್ಟಾಚಾರ ಹೋಗಲಾಡಿಸುವ ಸಲುವಾಗಿ ಮಕ್ಕಳ ನಾಟಕಗಳು ಆರಂಭವಾದವು. ನಮ್ಮ ಸಂಸ್ಥೆ 14 ವರ್ಷಗಳಿಂದ ಈ ರಂಗೋತ್ಸವನ್ನು ಆಯೋಜಿಸಿಕೊಂಡು ಬರುತ್ತಿದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಇಂತಹ ನಾಟಕೋತ್ಸವಗಳು ಪೂರಕವಾಗಿವೆ ಎಂದರು.
ರಂಗನಟರಾದ ನೂರ್ ಅಹಮದ್ ಶೇಖ್ ಅವರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ದೇಹ ಮತ್ತು ಮನಸ್ಸುಗಳನ್ನು ಸದೃಢವಾಗಿಸಿಕೊಳ್ಳಿ ಎಂದು ತಿಳಿಸಿದರು. ಪ್ರಾಂಶುಪಾಲ ಡಾ. ರೇಚಣ್ಣ, ರಂಗೋತ್ಸವದ ಸಂಚಾಲಕ ಚಂದ್ರಶೇಖರ ಆಚಾರ್ ಇದ್ದರು.ಹೊನ್ನಶೆಟ್ಟಿ ಸ್ವಾಗತಿಸಿದರು. ಎನ್.ಎಂ. ಕೃಷ್ಣಪ್ಪ ವಂದಿಸಿದರು. ಧಾತ್ರಿ ಮತ್ತು ತಂಡದವರು ಪ್ರಾರ್ಥಿಸಿದರು. ಡಾ.ಸಿ. ಮಹೇಂದ್ರ ನಿರೂಪಿಸಿದರು.