ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಅದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶರನ್ನವರಾತ್ರಿ ಪ್ರಯುಕ್ತ ಸೋಮವಾರ ಬೆಳಗ್ಗೆ ಸರಸ್ವತಿ ಪೂಜೆ ಮತ್ತು ಚಿಕ್ಕಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಿತು.ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ಮಕ್ಕಳು ಭಾಗವಹಿಸಿದ್ದರು. ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ವಿದ್ಯಾರಂಭ ನಡೆಸುವ ಪದ್ಧತಿ ಇರುವುದರಿಂದ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಶ್ರೀಮಠಕ್ಕೆ ಕರೆತಂದು ಶ್ರೀಗಳಿಂದ ಅಕ್ಷರಾಭ್ಯಾಸ ಮಾಡಿಸಿದರು.
ಅಭ್ಯಾಸಕ್ಕೂ ಮುನ್ನ ಶ್ರೀಕಾಲಭೈರವೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷವಾಗಿ ಅಲಂಕರಿಸಿದ ಸರಸ್ವತಿ ದೇವಿಯ ಸನ್ನಿಧಿಯಲ್ಲಿ ಗಣಪತಿ ಪೂಜೆ ನೆರವೇರಿಸಲಾಯಿತು. ನಂತರ ಸರಸ್ವತಿ ವಿಗ್ರಹಕ್ಕೆ ಹಾಲಭಿಷೇಕ ನೆರವೇರಿಸಿ ಪೂಜಿಸುವ ಮೂಲಕ ಮಕ್ಕಳಿಗೆ ಅಕ್ಷರಾಭ್ಯಾಸ ಕ್ರಿಯೆಯನ್ನು ಶ್ರೀಗಳು ಆರಂಭಿಸಿದರು.ದೊಡ್ಡ ತಟ್ಟೆಯಲ್ಲಿ ಅಕ್ಕಿಯನ್ನು ಇರಿಸಿ ಅದರಲ್ಲಿ ಮಕ್ಕಳ ಕೈಹಿಡಿದುಕೊಂಡು ನವಿಲುಗರಿಯ ಮೂಲಕ ಓಂ ಬೀಜಾಕ್ಷರವನ್ನು ಬರೆಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಿದರು. ಜಾತಿ, ಧರ್ಮ, ಭೇದವಿಲ್ಲದೆ ಮಕ್ಕಳು ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಜೆ ಶಿವಮೊಗ್ಗ ಶಾಖಾ ಮಠದ ವತಿಯಿಂದ ನಡೆದ ಪೂಜಾ ಕಾರ್ಯಕ್ರಮದಲ್ಲಿ ತಾಲೂಕಿನ ಗೋವಿಂದಘಟ್ಟ, ಮೂಡಲಮೆಳ್ಳಹಳ್ಳಿ, ಕನ್ನೇನಹಳ್ಳಿ, ದೊಡ್ಡೇಗೌಡನಕೊಪ್ಪಲು, ಕೆಲಗೆರೆ, ದೇವೇಗೌಡನಕೊಪ್ಪಲು, ಗೌಡರಹಳ್ಳಿ, ಅರೇಹಳ್ಳಿ, ನರಗನಹಳ್ಳಿ ಮತ್ತು ಚೋಳೇನಹಳ್ಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು.ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಚೈತನ್ಯನಾಥಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳು ಶ್ರೀಗಳು, ಮಕ್ಕಳ ಪೋಷಕರು ಮತ್ತು ಭಕ್ತರು ಉಪಸ್ಥಿತರಿದ್ದರು.
ಶರನ್ನವರಾತ್ರಿ ಶಾರದಾ ಪೂಜೆ, ಮಕ್ಕಳಿಗೆ ದಸರಾ ಬೊಂಬೆ ಇತಿಹಾಸ ತಿಳಿವಳಿಕೆಕಿಕ್ಕೇರಿ: ಪಟ್ಟಣದ ಪುರೋಹಿತ್ ರಾಮಪ್ರಸಾದ್ ಅಂಬಿಕಾ ಕುಟುಂಬದಿಂದ ಶರನ್ನವರಾತ್ರಿ ಶಾರದಾ ಪೂಜೆ ಸಡಗರದಿಂದ ನೆರವೇರಿಸಿದರು.
ಪೂಜೆಯಲ್ಲಿ ದಸರಾ ಬೊಂಬೆಯನ್ನು ಪ್ರತಿಷ್ಠಾಪಿಸಿ ಮಕ್ಕಳಿಗೆ ಶಾರದಾ ಪೂಜೆ, ದಸರಾ ಬೊಂಬೆ ಇತಿಹಾಸ ತಿಳಿಸಿಕೊಡಲಾಯಿತು. ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಸಂಕೇತವಾಗಿ ಮಾಡಲಾಯಿತು.ಪುಸ್ತಕ, ಲೇಖನಿ ಸಾಮಗ್ರಿ ವಿತರಿಸಿ ಶರನ್ನವರಾತ್ರಿಯಲ್ಲಿ 9 ದುರ್ಗಾದೇವಿಯ ಇತಿಹಾಸ, ನೈವೇದ್ಯ, ಉಡುಗೆ, ಸರ್ವಸಿದ್ಧಿ ಪೂಜೆ ತಿಳಿಸಲಾಯಿತು. ಅರ್ಚಕ ಸೀತಾರಾಮು ಮಕ್ಕಳಿಗೆ ಸಿಹಿ ತಿನಿಸಿ ವಿತರಿಸಿ ಮಾತನಾಡಿದರು.
ಬೊಂಬೆಗಳು ಪಾರಂಪಾರಿಕ ಜಗತ್ತಿನ ಒಳನೋಟವನ್ನು ಬಿಂಬಿಸುತ್ತಿವೆ. ಸಾಲು ಸಾಲು ಪೀಠಗಳಲ್ಲಿ ಕೂರಿಸುವ ಬೊಂಬೆಗಳು ತಮ್ಮ ವೈಶಿಷ್ಟವನ್ನು ಹೇಳುವಂತಿವೆ. ಹಂಪೆ ಕಲ್ಲಿನರಥ, ಪಟ್ಟಾಭಿರಾಮ, ಪುರಾತನಕಾಲದ ಬಾವಿ, ಯಕ್ಷಗಾನ, ಕಾಮಧೇನು, ಜೋಡಿ ಪಟ್ಟದಬೊಂಬೆ, ಬುದ್ಧ, ಮಂಗಳವಾದ್ಯ ನುಡಿಸುವ ಕಾಳಿಂಗಮರ್ಧನ, ಸಿರಿಧಾನ್ಯಗಳ ಪರಿಚಯ, ರಾಮಾಯಣ, ಮಹಾಭಾರತದ ಬೊಂಬೆ, ದಸರಾಜಂಭೂ ಸವಾರಿ, ರಾಜರಾಣಿ ಬೊಂಬೆ, ಶಕ್ತಿಮಾನ್‌ಆಂಜನೇಯ ಮತ್ತಿತರ ಬೊಂಬೆಗಳನ್ನು ನೋಡಿ ಕಣ್ತುಂಬಿಕೊಂಡರು.ಈ ವೇಳೆ ಅಂಬಿಕಾ, ಅರ್ಚಕ ಸೀತಾರಾಮು, ಮಕ್ಕಳು ಭಾಗವಹಿಸಿದ್ದರು.