ಸಪ್ತಾಹದಲ್ಲಿ ಬಯಲಾಟ, ಮಹಿಳಾ ತಾಳಮದ್ದಳೆ, ಸಾಧಕರಿಗೆ ಸನ್ಮಾನ ನಡೆಯಲಿದೆ. ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಕಾರ್ಯಕ್ರಮ ಉದ್ಘಾಟಿಸುವರು

ಕನ್ನಡಪ್ರಭ ವಾರ್ತೆ ಮಂಗಳೂರು

ಸರಯೂ ಬಾಲ ಯಕ್ಷ ವೃಂದ ಕೋಡಿಕಲ್‌ ವತಿಯಿಂದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಸಹಕಾರದೊಂದಿಗೆ 24ನೇ ವರ್ಷದ ಸರಯೂ ಸಪ್ತಾಹ-2024 ಕಾರ್ಯಕ್ರಮ ಮೇ 25ರಿಂದ 31ರವರೆಗೆ ಕದ್ರಿ ದೇವಳದ ರಾಜಾಂಗಣದಲ್ಲಿ ನಡೆಯಲಿದೆ.

ಸಪ್ತಾಹದಲ್ಲಿ ಬಯಲಾಟ, ಮಹಿಳಾ ತಾಳಮದ್ದಳೆ, ಸಾಧಕರಿಗೆ ಸನ್ಮಾನ ನಡೆಯಲಿದೆ. ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಕಾರ್ಯಕ್ರಮ ಉದ್ಘಾಟಿಸುವರು. ಮೇ 25ರಂದು ಮಧ್ಯಾಹ್ನ 2.30ರಿಂದ ಶ್ರೀದೇವಿ ಮಹಿಷ ಮರ್ದಿನಿ, 26ರಂದು ಬೆಳಗ್ಗೆ 9ರಿಂದ ಮಹಿಳಾ ಯಕ್ಷ ಸಂಭ್ರಮ, ಸಂಜೆ 5.30ರಿಂದ ಗುರುದಕ್ಷಿಣೆ, 27ರಂದು ವೀರ ಶತಕಂಠ, 28ರಂದು ರತಿ ಕಲ್ಯಾಣ, 29ರಂದು ರಾಜಾ ಸೌದಾಸ, 30ರಂದು ತುಳುನಾಡ ಬಲಿಯೇಂದ್ರೆ (ತುಳು), 31ರಂದು ಜಾಂಬವತಿ ಕಲ್ಯಾಣ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಸರಯೂ ಕಲಾವಿದರ ಜತೆಗೆ ಪ್ರಸಿದ್ಧ ಕಲಾವಿದರು ಹಿಮ್ಮೇಳ, ಮುಮ್ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಪ್ತಾಹದಲ್ಲಿ ಪಟ್ಲಗುತ್ತು ಮಹಾಬಲ ಶೆಟ್ಟಿ, ಪೂವಪ್ಪ ಶೆಟ್ಟಿ ಅಳಿಕೆ, ಅರುಣ್‌ ಕುಮಾರ್‌, ದೇವಿಪ್ರಕಾಶ್‌ ರಾವ್‌ ಕಟೀಲು, ಮಹಾಬಲೇಶ್ವರ ಭಟ್‌ ಭಾಗಮಂಡಲ, ಪ್ರಶಾಂತ್‌ ಕೋಳ್ಯೂರು, ಕೆರೆಮನೆ ನರಸಿಂಹ ಹೆಗಡೆ, ಕಥಾ ಸಂಗ್ರಹಕಾರ ಮಧುಕರ ಭಾಗವತ್‌ ಹಾಗೂ ವಿ.ಟಿ. ರೋಡ್‌ನ ಚೇತನಾ ಬಾಲವಿಕಾಸ ಕೇಂದ್ರವನ್ನು ಸನ್ಮಾನಕ್ಕೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

2025ರಲ್ಲಿ ಸಂಸ್ಥೆಯ ರಜತ ಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲು ಸಿದ್ಧತೆ ಆರಂಭಿಸಿದ್ದೇವೆ. ನಗರದ ಹೃದಯ ಭಾಗದಲ್ಲಿ ಸರಯೂ ಯಕ್ಷಗಾನ ಅಕಾಡೆಮಿಗಾಗಿ ಸ್ಥಳ ಖರೀದಿಸಿ, ಸ್ವಂತ ನಿವೇಶನದಲ್ಲಿ ನಿರಂತರ ಯಕ್ಷ ಕಲಿಕಾ ಕೇಂದ್ರ ನಡೆಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಸಂಸ್ಥೆಯ ಗೌರವ ಸಂಚಾಲಕ ಡಾ. ಹರಿಕೃಷ್ಣ ಪುನರೂರು, ಸುಧಾಕರ ರಾವ್‌ ಪೇಜಾವರ, ವರ್ಕಾಡಿ ಮಾಧವ ನಾವಡ, ಸರಯೂ ಮಹಿಳಾ ತಂಡದ ಅಧ್ಯಕ್ಷೆ ವಿಜಯಲಕ್ಷ್ಮಿ ಎಲ್‌.ಎನ್‌., ಪ್ರಮೋದ್‌, ಸೌಮ್ಯ ಪುರುಷೋತ್ತಮ್‌ ಇದ್ದರು.