ನಿಜವಾದ ಬಡವರಿಗೆ ಸರ್ಕಾದ ಕಾರ್ಯಕ್ರಮಗಳು ತಲುಪುತ್ತಿಲ್ಲ: ಚಿ.ನಾ.ರಾಮು

| Published : Mar 15 2024, 01:22 AM IST

ಸಾರಾಂಶ

ಅಂಬೇಡ್ಕರ್ ಅವರು ಸಂವಿಧಾನಾತ್ಮಕವಾಗಿ ಬಡವರಿಗಾಗಿ ನೀಡಿರುವ ಕಾರ್ಯಕ್ರಮಗಳು ನಿಜವಾಗಿಯೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿದ್ದರೆ, ಇಂದು ದೇಶದಲ್ಲಿ ಬಡವರೇ ಇರುತ್ತಿರಲಿಲ್ಲ ಎಂದು ಅಖಿಲ ಭಾರತ ಡಾ.ಬಿ.ಆರ್.ಅಂಬೇಡ್ಕರ್ ಪ್ರಚಾರ ಸಮಿತಿಯ ರಾಷ್ಟ್ರಾಧ್ಯಕ್ಷ ಚಿ.ನಾ. ರಾಮು ಅಭಿಪ್ರಾಯಪಟ್ಟಿದ್ದಾರೆ.

ಶ್ರೀಹೆತ್ತೇನಹಳ್ಳಿ ಮಾರಮ್ಮನವರ ಜಾತ್ರಾ ಮಹೋತ್ಸವ

ಕನ್ನಡಪ್ರಭ ವಾರ್ತೆ ತುಮಕೂರು

ಅಂಬೇಡ್ಕರ್ ಅವರು ಸಂವಿಧಾನಾತ್ಮಕವಾಗಿ ಬಡವರಿಗಾಗಿ ನೀಡಿರುವ ಕಾರ್ಯಕ್ರಮಗಳು ನಿಜವಾಗಿಯೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿದ್ದರೆ, ಇಂದು ದೇಶದಲ್ಲಿ ಬಡವರೇ ಇರುತ್ತಿರಲಿಲ್ಲ ಎಂದು ಅಖಿಲ ಭಾರತ ಡಾ.ಬಿ.ಆರ್.ಅಂಬೇಡ್ಕರ್ ಪ್ರಚಾರ ಸಮಿತಿಯ ರಾಷ್ಟ್ರಾಧ್ಯಕ್ಷ ಚಿ.ನಾ. ರಾಮು ಅಭಿಪ್ರಾಯಪಟ್ಟಿದ್ದಾರೆ.

ನಗರದ ದಿಬ್ಬೂರಿನಲ್ಲಿ ಶ್ರೀಹೆತ್ತೇನಹಳ್ಳಿ ಮಾರಮ್ಮನವರ 25 ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರದ ಸವಲತ್ತುಗಳನ್ನು ಆರ್ಹರಿಗೆ, ಅಗತ್ಯವಿರುವರಿಗೆ ನೀಡುವ ಬದಲು ಈಗಾಗಲೇ ಶ್ರೀಮಂತರಾಗಿ, ಆರ್ಥಿಕವಾಗಿ ಬಲಾಢ್ಯವಾದವರೇ ಬಳಸಿಕೊಳ್ಳುತ್ತಿದ್ದಾರೆ. ಐಎಎಸ್, ಐಪಿಎಸ್ ಅಧಿಕಾರಿಗಳು, ಶಾಸಕರು, ಸಂಸದರು, ಸಚಿವರ ಇಂದಿಗೂ ಸರ್ಕಾರಿ ಸವಲತ್ತುಗಳನ್ನು ಬಳಸಿ ಕೊಂಡು ಬಲಾಢ್ಯರಾಗುತ್ತಲೇ ಇದ್ದಾರೆ. ಗ್ರಾಮೀಣ ಭಾಗದ ಸೌಲಭ್ಯ ವಂಚಿತರಿಗೆ ಇದು ಲಭ್ಯವಾಗುತ್ತಿಲ್ಲ. ಹಾಗಾಗಿ ದಲಿತರ ನಡುವೆ ಬಲಿತವರ ಸಂಖ್ಯೆ ಹೆಚ್ಚುತ್ತಿದೆ ಎಂದರು.

ದಲಿತರಿಗೆ ಬದುಕಿರುವಾಗ ಒಂದು ಪಕ್ಕಾ ಮನೆ ಎಷ್ಟು ಮುಖ್ಯವೋ, ಆತ ಸತ್ತಮೇಲೆ ಮಣ್ಣು ಮಾಡಲು ಸ್ಮಶಾನವೂ ಅಷ್ಟೇ ಮುಖ್ಯ. ಹಾಗಾಗಿ ಮನೆ ಮತ್ತು ಸ್ಮಶಾನ ಎರಡನ್ನು ದಿಬ್ಬೂರು ಜನರಿಗೆ ಒದಗಿಸಿಕೊಡಲು ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ಚುನಾಯಿತ ಪ್ರತಿನಿಧಿಗಳು ತಾವು ಹುಟ್ಟಿ ಬಂದ ಸಮಾಜ, ಅವರು ಅನುಭವಿಸುತ್ತಿರುವ ನೋವು, ಸಂಕಟಗಳನ್ನು ಅರ್ಥ ಮಾಡಿಕೊಂಡು ಅವರ ಪರವಾಗಿ ನಿಂತಾಗ ಮಾತ್ರ ಇಡೀ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದರು.

ಸ್ವಾತಂತ್ರ ಹೋರಾಟ, ಸಂವಿಧಾನ ರಚನೆ ಸಂದರ್ಭದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಶೋಷಿತರ ಪರವಾಗಿ ಹಕ್ಕುಗಳನ್ನು ಮಂಡಿಸದಿದ್ದರೆ ಇಂದು ನಾವ್ಯಾರು ಕೂಡ ವೇದಿಕೆ ಹತ್ತಿ ಮಾತನಾಡುವ ಸ್ಥಿತಿಯಲ್ಲಿ ಇರಲು ಸಾಧ್ಯವೇ ಇರಲಿಲ್ಲ. ಹಾಗಾಗಿ ನಮಗೆ ಅಂಬೇಡ್ಕರ್ ಅವರು ಮಾತ್ರ ಆದರ್ಶ ವ್ಯಕ್ತಿಯಾಗಬೇಕು. ಬಾಬಾ ಸಾಹೇಬರು ದಲಿತರಿಗೆ ಮಾತ್ರ ಹಕ್ಕುಗಳನ್ನು ನೀಡಲಿಲ್ಲ. ಇಡೀ ದೇಶದ ಎಲ್ಲಾ ಸಮುದಾಯಗಳು ಅವಕಾಶದಿಂದ ವಂಚಿತತರಾಗದಂತೆ ಕಾಯ್ದೆಗಳನ್ನು ತಂದರು. ಮೀಸಲಾತಿಯನ್ನು ಬ್ರಾಹ್ಮಣರ ಆದಿಯಾಗಿ ಎಲ್ಲಾ ವರ್ಗಗಳು ಅನುಭವಿಸು ತ್ತಿದ್ದಾರೆ. ಮೀಸಲಾತಿಯ ದುರ್ಬಳಕೆ ಆಗುತ್ತಿದೆ. ಇದರ ವಿರುದ್ಧ ನಾವೆಲ್ಲರೂ ಮುಂದಿನ ದಿನಗಳಲ್ಲಿ ದ್ವನಿ ಎತ್ತಬೇಕಿದೆ ಎಂದರು.

ಸಮಾರಂಭದಲ್ಲಿ ಶಾಸಕರಾದ ಜೋತಿಗಣೇಶ್, ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಡಾ.ಬಿ.ಆರ್. ಅಂಬೇಡ್ಕರ್ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿಶ್ವನಾಥ್, ಜಿಲ್ಲಾಧ್ಯಕ್ಷ ಎನ್.ಕೆ. ನಿಧಿಕುಮಾರ್, ಜಿಲ್ಲಾ ಉಪಾಧ್ಯಕ್ಷ ಇಂದ್ರಕುಮಾರ್. ಡಿ.ಕೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗರಾಜು ದಿಬ್ಬೂರು, ಗಿರೀಶ್, ಶ್ರೀನಿವಾಸ್, ಶೆಟ್ಟಾಳಯ್ಯ, ಪರಮೇಶ್, ರಮೇಶ್, ನಾರಾಯಣ. ಎಸ್,ಟೈಲರ್ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.