ಸಾರಾಂಶ
ಹುಬ್ಬಳ್ಳಿ: ಮುಂದಿನ ಮೂರೂವರೆ ವರ್ಷ ನಮ್ಮ ಸರ್ಕಾರಕ್ಕೆ ಏನೂ ಆಗಲ್ಲ, ಸುಭದ್ರವಾಗಿರಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ಇಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಎರಡ್ಮೂರು ದಿನಕ್ಕೊಮ್ಮೆ ನಾನು ಗೃಹ ಸಚಿವರ ಮನೆಗೆ ಹೋಗುತ್ತಿರುತ್ತೇನೆ. ನಮ್ಮ ಮನೆಗೆ, ನಾವು ಅವರ ಮನೆಗೆ ಹೋಗಲೇಬಾರದಾ? ನಮ್ಮ ಪಕ್ಷದವರು ಕೂಡ ಹೋಗಬಾರದು ಎಂದರೆ ಹೇಗೆ? ಸಿದ್ದರಾಮಯ್ಯ, ಸುರ್ಜೇವಾಲಾ, ಪರಮೇಶ್ವರ್ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಮೂರುವರೆ ವರ್ಷ ಒಳ್ಳೆಯ ಆಡಳಿತ ಕೊಡುತ್ತೇವೆ ಎಂದು ಪುನರುಚ್ಛಿಸಿದರು.
ಗಂಗಾಸ್ನಾನ ಮಾಡಿದರೆ ಪಾಪ ಹೋಗಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ಸಮರ್ಥಿಸಿಕೊಂಡ ಪುತ್ರ ಪ್ರಿಯಾಂಕ, ಗಂಗಾ ಸ್ನಾನ ಮಾಡಿದರೆ ಪಾಪ ಪರಿಹಾರ ಆಗುತ್ತಾ? ಎಂದು ಪ್ರಶ್ನಿಸಿದರು.
ಬಿಜೆಪಿ ಅವರು ಹಿಂದೂ ವಿರೋಧಿ ಅಂತಾರೆ. ದೇಶದಲ್ಲಿ ಬುದ್ಧಿಸಂ, ಜೈನಿಸಂ, ಸಿಖ್ ಹಾಗೂ ಲಿಂಗಾಯತ ಧರ್ಮಗಳು ಹುಟ್ಟಿವೆ. ಈ ನಾಲ್ಕು ಧರ್ಮಗಳು ಹುಟ್ಟಿದ್ದು ಹಿಂದೂ ಧರ್ಮದ ವಿರುದ್ಧವಾಗಿ. ಯಾವುದರಲ್ಲಿ ಸಮಾನತೆ, ಸ್ವಾಭಿಮಾನ ಇರಲಿಲ್ಲವೊ ಅದರ ವಿರುದ್ಧ ಹುಟ್ಟಿವೆ. ಬಸವಣ್ಣನವರು ದೇಶದ್ರೋಹಿನಾ..? ಹಿಂದೂ ವಿರೋಧಿನಾ..? ಬಿಜೆಪಿ ಅವರಿಗೆ ಕಾಮನ್ ಸೆನ್ಸ್ ಇದೆಯಾ..? ಕೇವಲ ಗಂಗಾ ಅಷ್ಟೇ ಅಲ್ಲ ದೇಶದ ಯಾವುದೇ ನದಿಯಲ್ಲಿ ಹೋಗಿ ಡುಮಕಿ ಹಾಕಿದರೂ ಅವರ ಪಾಪ ಪರಿಹಾರ ಆಗುವುದಿಲ್ಲ ಎಂದರು.
ನಾವು ದುಡಿಯುತ್ತಿದ್ದೇವೆ. ಅನುದಾನ ಕೊಡಿ ಸಾಕು. ನಮಗೆ ದೇಶದ್ರೋಹಿ ಸರ್ಟಿಫಿಕೇಟ್ ಕೊಡಲು ಬರಬೇಡಿ. ಎಕನಾಮಿಕ್ ಸರ್ವೇ ರಿಪೋರ್ಟ್ ಮುಚ್ಚಿ ಹಾಕುವುದಕ್ಕೆ ಕಾಂಗ್ರೆಸ್ ಹಿಂದೂ ವಿರೋಧಿ ಎಂಬಂತೆ ಹಾಗೂ ಖರ್ಗೆ ಅವರ ಹೇಳಿಕೆಯನ್ನು ಮುನ್ನೆಲೆಗೆ ತರಲಾಗಿದೆ ಎಂದು ಕಿಡಿಕಾರಿದರು.
ಮಲ್ಲಿಕಾರ್ಜುನ ಖರ್ಗೆ ಪೂಜೆ ಮಾಡಿದ ಫೋಟೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಖರ್ಗೆ ಸಾಹೇಬ್ರು ಬುದ್ಧ, ಬಸವ, ಅಂಬೇಡ್ಕರ್ ಮೇಲೆ ನಂಬಿಕೆ ಇಟ್ಟವರು. ಅವರ ಆಚರಣೆ ನನ್ನ ಮೇಲೆ, ನನ್ನ ಆಚರಣೆ ನನ್ನ ಮಕ್ಕಳ ಮೇಲೆ ಆಗುವುದಿಲ್ಲ. ನಿಮ್ಮ ಭಕ್ತಿ ನಿಮಗೆ, ನಮ್ಮ ಭಕ್ತಿ ನಮಗೆ. ಭಕ್ತಿ ಆಧ್ಯಾತ್ಮಿಕವಾಗಿ ಇರಬೇಕು, ಮನಶಾಂತಿಗಾಗಿ ಇರಬೇಕು. ಭಕ್ತಿ ವ್ಯಕ್ತಿಗೆ ಬಂದರೆ ಸರ್ವಾಧಿಕಾರಿ ಆಗುತ್ತೇನೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದರು ಎಂದರು.
ಇಡಿ ಯಾಕೆ ಮುಡಾ ತನಿಖೆ ಮಾಡುತ್ತಿದೆ? ಮನಿ ಲ್ಯಾಂಡರಿಂಗ್‌ನಲ್ಲಿ ಸಿದ್ದರಾಮಯ್ಯ ಪಾತ್ರ ಇದೆ ಎಂದು ಬಿಂಬಿಸಿದ್ದಾರೆ. ವಿಜಯೇಂದ್ರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಮನಿ ಲ್ಯಾಂಡರಿಂಗ್ ಅಂಶವಿದೆ. ಆದರೆ, ವಿಜಯೇಂದ್ರ ಅವರ ವಿಚಾರ ಈ ವರೆಗೂ ಬಹಿರಂಗಗೊಂಡಿಲ್ಲ. ಸಿದ್ದರಾಮಯ್ಯ ಅವರದ್ದು ಹೇಗೆ ಆಚೆ ಬರುತ್ತದೆ? ಇದೆಲ್ಲ ಪೂರ್ವ ನಿಯೋಜಿತ ಅಷ್ಟೇ ಎಂದು ಕಿಡಿಕಾರಿದರು.