ಕಾಲೇಜಲ್ಲಿ ಲಿಫ್ಟ್‌ ನಿರ್ಮಿಸಿ ವಿಕಲ ಚೇತನರಿಗೆ ಸರ್ವಜ್ಞ ಊರುಗೋಲು

| Published : Apr 11 2024, 12:46 AM IST

ಕಾಲೇಜಲ್ಲಿ ಲಿಫ್ಟ್‌ ನಿರ್ಮಿಸಿ ವಿಕಲ ಚೇತನರಿಗೆ ಸರ್ವಜ್ಞ ಊರುಗೋಲು
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ನಗರದ ರಾಮ ಮಂದಿರದಿಂದ ಹೈಕೋರ್ಟ್‌ಗೆ ಸಂಪರ್ಕ ಕಲ್ಪಿಸುವ ರಿಂಗ್‌ ರಸ್ತೆಯಲ್ಲಿರುವ ಸರ್ವಜ್ಞ ಕಾಲೇಜು ತನ್ನಲ್ಲಿ ಓದಲು ಬಂದ ವಿಕೇಲ ಚೇತನ ಮಕ್ಕಳಿಗಾಗಿ ಲಿಫ್ಟ್‌ ನಿರ್ಮಿಸಿ ಮಾನವೀಯತೆ ಮಿಡಿದಿದೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಇದು ಇಲ್ಲಿನ ರಾಮ ಮಂದಿರದಿಂದ ಹೈಕೋರ್ಟ್‌ಗೆ ಸಂಪರ್ಕ ಕಲ್ಪಿಸುವ ರಿಂಗ್‌ ರಸ್ತೆಯಲ್ಲಿರುವ ಸರ್ವಜ್ಞ ಕಾಲೇಜು ತನ್ನಲ್ಲಿ ಓದಲು ಬಂದ ವಿಕೇಲ ಚೇತನ ಮಕ್ಕಳಿಗಾಗಿ ಲಿಫ್ಟ್‌ ನಿರ್ಮಿಸಿ ಮಾನವೀಯತೆ ಮಿಡಿದಿದೆ.

ಅತ್ಯಂತ ಶ್ರಮಪಟ್ಟು ಸರ್ವಜ್ಞ ಕಾಲೇಜನ್ನು ಕಟ್ಟಿ ಬೆಳೆಸಿದವರು ಪ್ರೊ. ಚೆನ್ನಾರೆಡ್ಡಿ ಎಂಬುದರಲ್ಲಿ ದೂಸ್ರಾ ಮಾತಿಲ್ಲ. ಸ್ವಂತ ಕಟ್ಟಡದಲ್ಲಿ ಕಾಲೇಜು ತಲೆ ಎತ್ತಿದರೂ ಕೂಡಾ ಅಲ್ಲಿ ಲಿಫ್ಟ್‌ ಸವಲತ್ತು ಇರಲಿಲ್ಲ. ಹಾಗಂತ ಅದು ಅಲ್ಲಿಗೆ ಬರುವ ಮಕ್ಕಳ ಓದಿಗೆ ಕೊರತೆಯಾಗಿಯೂ ಕಾಡಿರಲಿಲ್ಲ. ಆದರೆ ಈ ಕಾಲೇಜಿಗೆ ನಿಧಾನವಾಗಿ ವಿಕಲ ಚೇತನರು ಪ್ರವೇಶ ಕೇಳಿಕೊಂಡು ಬಂದಾಗಲೇ ಲಿಫ್ಟ್‌ ಬೇಕೆಂಬ ವಿಚಾರ ಕಾಡಿತ್ತು.

ವಿಕಲ ಚೇತನರ ಓದಿಗೆ ಲಿಫ್ಟ್‌ ಕೊರತೆಯಾಗಬಾರದು ಎಂದು ಅದೇನೇ ಕಷ್ಟಗಳಿದ್ದರೂ ಬದಿಗೊತ್ತಿ ಕಾಲೇಜಿನ ಮುಖ್ಯಸ್ಥ ಪ್ರೊ. ಚೆನ್ನಾರೆಡ್ಡಿಯವರು ಲಿಫ್ಟ್‌ ಒದಗಿಸಿಬಿಟ್ಟರು. ಲಿಫ್ಟ್‌ ಬಳಸಿ ತರಗತಿ, ಪ್ರಯೋಗಾಲಯಗಳಿಗೆ ನಿಯಮಿತವಾಗಿ ತೊಂದರೆ ಇಲ್ಲದೆ ಹಾಜರಾಗಿರುವ ವಿಕಲ ಚೇತನ ಮಕ್ಕಳು ಇಲ್ಲೀಗ ಟಾಪ್ಪರ್‌ ಆಗಿ ಹೊರಹೊಮ್ಮಿ ಗಮನ ಸೆಳೆದಿದ್ದಾರೆ.

ಮಾನವೀಯತೆ ಹಿನ್ನೆಲೆಯಲ್ಲಿ ವಿಶೇಷ ಚೇತನ ಮಕ್ಕಳ ಕಷ್ಟಗಳಿಗೆ ಮಿಡಿದಿರುವ ಪ್ರೊ. ಚನ್ನಾರೆಡ್ಡಿಯವರ ಸತ್ಸಂಕಲ್ಪ ಇಲ್ಲಿ ಸಿಹಿಫಲ ಕೊಟ್ಟಿದೆ. ಈ ಲಿಫ್ಟ್‌ ಹತ್ತಿ ಇಳಿದೇ ಸೇಡಂನ ವಿಶೇಷ ಚೇತನ ವಿದ್ಯಾರ್ಥಿ ಕಾರ್ತಿಕ್‌ ಈ ಬಾರಿ ಶೇ.94 ಅಂಕ ಪಡೆದು ಸರ್ವಜ್ಞ ಟಾಪ್ಪರ್‌ ಆಗಿ ಹೊರಹೊಮ್ಮಿದ್ದಾನೆ.

ಐಶ್ವರ್ಯಳ ಕಷ್ಟ ಕಂಡು ಮರುಗಿದ್ದರು ಚೆನ್ನಾರೆಡ್ಡಿ:

ಸರ್ವಜ್ಞ ಕಾಲೇಜಿನ ಪ್ರವೇಶ ಬಯಸಿ 2 ವರ್ಷಗಳ ಹಿಂದೆ ಐಶ್ವರ್ಯ ಎಂಬ ವಿಕಲ ಚೇತನ ವಿದ್ಯಾರ್ಥಿನಿ ಇಲ್ಲಿಗೆ ಬಂದಾಗ ಆಕೆಗೆ ಪ್ರವೇಶವೇನೋ ನೀಡಲಾಗಿತ್ತು. ಆದರೆ 3 ಅಂತಸ್ತಿನ ಕ್ಟಡದಲ್ಲಿ ತರಗತಿಗಳು, ಪ್ರಯೋಗಾಲಯಗಳು ಇಲ್ಲಿರೋದರಿಂದ ಈ ವಿಕಲ ಚೇತನೆ ಐಶ್ವರ್ಯ ಹತ್ತಿ ಇಳಿದು ಹೋಗೋದಾಗಲಿ, ತರಗತಿಗೆ ಹೋಗಿ ಪಾಠ ಕೇಳುವುದೇ ದುಸ್ತರವಾಯ್ತು.

ಆಕೆಯ ಕಷ್ಟ ಹತ್ತಿರದಿಂದ ಕಂಡಿದ್ದ ಪ್ರೊ. ಚೆನ್ನಾರೆಡ್ಡಿಯವರು ಆಗಲೇ ಕಾಲೇಜಿಗೆ ಬರುವ ಇಂತಹ ಮಕ್ಕಳಿಗಾಗಿಯೇ ಲಿಫ್ಟ್‌ ಸವಲತ್ತು ಬೇಕೇಬೇಕು ಎಂದು ಅನಿಸಿಕೆ ಒದಗಿಸಿದ್ದರು. ಐಶ್ವರ್ಯಳ ನಂತರ ಇಲ್ಲಿ ಪ್ರವೇಶ ಪಡೆದ ಸೇಡಂನ ವಿಕಲ ಚೇತನ ಕಾರ್ತಿಕ್‌ ಲಿಫ್ಟ್‌ ಸವಲತ್ತು ಸಮರ್ಥವಾಗಿ ಬಳಸಿಕೊಂಡು ಈ ಬಾರಿ ಪಿಯುಸಿ 2ನೇ ವರ್ಷದಲ್ಲಿ ಶೇ.94 ಅಂಕ ಪಡೆದು ಸಾಧನೆ ಮೆರೆದಿದ್ದಾನೆ.

ವಿಕಲ ಚೇತನ ಮಕ್ಕಳು ಇಲ್ಲಿಂದ ಯಾವುದೇ ಅಂತಸ್ತಿಗೂ ಹೋಗಿ ಬರಲು ಅನುಕೂಲವಾಗುವಂತೆ ವ್ಯವಸ್ಥೆಯಾಗಿದೆ. ಹೀಗಾಗಿ ಇನ್ನು ಮುಂದೆ ವಿಕಲ ಚೇತನ ಪ್ರತಿಭೆಗಳಿಗೂ ಸವಲತ್ತು ಕೊಟ್ಟು ಅವರು ಸಾದನೆ ದಾರಿಲ್ಲಿ ಸಾಗುವಂತೆ, ಕಂಡ ಕನಸು ನನಸಾಗುವಂತೆ ತಾವು ಕ್ರಮ ಕೈಗೊಳ್ಳೋದಾಗಿ ಪ್ರೊ. ಚೆನ್ನಾರೆಡ್ಡಿ ತುಂಬ ಸಾರ್ಥಕ ಭಾವದಿಂದಲೇ ಈ ಸಂಗತಿ ಕನ್ನಡಪ್ರಭ ಜೊತೆ ಹಂಚಿಕೊಂಡರು.

ಸೇಡಂ ಶಾಹಿ ಸ್ಕೂಲ್‌ನ ವಿದ್ಯಾರ್ಥಿ ಕಾರ್ತಿಕ್‌ ನಡೆಯಲು ಆಗದ ವಿಕಲ ಚೇತನ, ಈತನ ಅಜ್ಜ ಮೊಮ್ಮಗನನ್ನು ಕರೆದುಕೊಂಡು ಸರ್ವಜ್ಞಕ್ಕೆ ಬಂದಾಗ ತಕ್ಷಣ ಕಾರ್ತಿಕ್‌ಗೆ ಪ್ರವೇಶ ನೀಡಿದವರು ಚೆನ್ನಾರೆಡ್ಡಿ. ಇದೀಗ ಕಾರ್ತಿಕ್‌ ಕುಟುಂಬ ಸರ್ವಜ್ಞ ಕಾಲೇಜಿನ ಸಹಾಯ ಹಸ್ತ ಎಂದೂ ಮರೆಯೋದಿಲ್ಲವೆಂದು ಹೇಳುತ್ತಿದ್ದಾರೆ.ನನ್ನ ಮೊಮ್ಮಗ ಕಾರ್ತಿಕ್‌ ವಿಕಲ ಚೇತನ. ಪ್ರವೇಶ ಕೊಡ್ರಿ ಅಂತ ಬಂದಾಗ ತಕ್ಷಣ ನಮ್ಮ ಮಾತಿಗೆ ಸ್ಪಂದಿಸಿ ಇಂತಹವರಿಗೆ ಪ್ರವೇಶ ಕೊಡದೆ ಇದ್ರೆ ಹೇಗಂದು ಬಹಳ ನೆರವು ನೀಡಿದವರು ಪ್ರೊ. ಚೆನ್ನಾರೆಡ್ಡಿ. ಅವರ ನೆರವಿಗೆ ತಕ್ಕಂತೆ ಕಾರ್ತಿಕ್‌ ಹೆಚ್ಚಿನ ಅಂಕ ಪಡೆದಿದ್ದಾನೆ. ಇದು ಕಾಲೇಜಿಗೆ, ನಮಗೆ ಹೆಮ್ಮೆಯ ಸಂಗತಿಯಾಗಿದೆ.

- ಕಾರ್ತಿಕ್‌ ಇವರ ಅಜ್ಜ, ಸೇಡಂಕಾಲೇಜು ಕಟ್ಟಿದ್ದೇವು. ಲಿಫ್ಟ್‌ ಅಗತ್ಯ ಅಷ್ಟಾಗಿ ಕಂಡು ಬಂದಿರಲಿಲ್ಲ. ಆದರೆ ವಿಕಲ ಚೇತನ ಮಕ್ಕಳು ಬರಲಾರಂಭಿಸಿದಾಗ ಅವರ ಸಂಕಷ್ಟ ನೋಡಲಾಗಲಿಲ್ಲ. ಹೀಗಾಗಿ ಲಿಫ್ಟ್‌ ನಿರ್ಮಿಸಿ ಕೊಟ್ಟೇವು. ಅವರು ಎಲ್ಲರಂತೆ ಲಿಫ್ಟ್‌ ಬಳಸಿ ಅಧ್ಯಯನ ಮಾಡುತ್ತ ಸಾಧನೆ ಶಿಖರ ಹತ್ತುತ್ತಿದ್ದಾರೆ. ಅವರ ಸಾಧನೆ ನಮಗೆ ತುಂಬ ಖುಷಿ ಕೊಟ್ಟಿದೆ. ನಮ್ಮ ಸಹಾಯ ಅಲ್ಪವಾದರೂ ವಿಕಲ ಚೇತನರು ನಿಜವಾಗಿಯೂ ತಮ್ಮಲ್ಲಿರುವ ಚೇತನ ಫಲಿತಾಂಶದ ಮೂಲಕ ಹೊರಹಾಕಿದ್ದಾರೆ.

- ಪ್ರೊ. ಚೆನ್ನಾರೆಡ್ಡಿ, ಸಂಸ್ಥಾಪಕರು, ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಮೂಹ, ಕಲಬುರಗಿ