ಸಾರಾಂಶ
ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)
ಪಟ್ಟಣದ ಆರಾಧ್ಯ ದೈವ ಶ್ರೀಅಲ್ಲಮಪ್ರಭು ನೂತನ ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಜರುಗುತ್ತಿರುವ ಬಸವ ಪುರಾಣ ಹಾಗೂ ಅನ್ನಪ್ರಸಾದ ವ್ಯವಸ್ಥೆಗೆ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಬಗೆಬಗೆಯ ಅಡುಗೆ ಪದಾರ್ಥ, ದವಸ ಧಾನ್ಯಗಳನ್ನು ಹಾಗೂ ದೇಣಿಗೆ ರೂಪದಲ್ಲಿ ಭಕ್ತಿ ಕಾಣಿಕೆ ಸಮರ್ಪಿಸುತ್ತಿದ್ದು, ಸಸಾಲಟ್ಟಿಯ ಭಕ್ತರು ಇದಕ್ಕೊಂದು ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.ದೇಗುಲಗಳ ಗ್ರಾಮವೆನಿಸಿದ ತಾಲೂಕಿನ ಸಸಾಲಟ್ಟಿ ಭಕ್ತರು ಬುಧವಾರ ಬರೋಬ್ಬರಿ ೨.೫ ಟನ್ ಮಾದ್ಲಿಯನ್ನು ಅಲ್ಲಮಪ್ರಭು ದೇವಸ್ಥಾನದ ಅನ್ನಪ್ರಸಾದ ವಿತರಣೆಗೆ ಸಮರ್ಪಿಸುವ ಮೂಲಕ ಗ್ರಾಮದ ಐಕ್ಯತೆ ಹಾಗೂ ಭಕ್ತಿ ಪ್ರದರ್ಶಿಸಿದ್ದಾರೆ. ಈ ಮೊದಲು ಶ್ರೀ ಪ್ರಭು ಪರಂ ಜ್ಯೋತಿಯೊಂದಿಗೆ ಗ್ರಾಮಕ್ಕೆ ಆಗಮಿಸಿದ ಶ್ರೀಗಳಿಗೆ ಗ್ರಾಮದ ಹಿರಿಯರು ಗ್ರಾಮಸ್ಥರ ಪರವಾಗಿ ಮಾದ್ಲಿ ಸಮರ್ಪಿಸುವ ವಾಗ್ದಾನ ಮಾಡಿದ್ದರು. ಅದರಂತೆ ಮನೆಮನೆಯಲ್ಲ ಮಾದ್ಲಿ ತಯಾರಿಸುವ ಪ್ರಕ್ರಿಯೆ ಆರಂಭವಾಯಿತು.
ಬುಧವಾರ ಗ್ರಾಮದ ಒಂದು ಭಾಗದ ಭಕ್ತರು ತೇರದಾಳ ರಸ್ತೆಯ ಬಸವೇಶ್ವರ ದೇವಸ್ಥಾನದ ಬಳಿ ಜಮಾಯಿಸಿದರು. ಇನ್ನೊಂದು ಭಾಗದ ಭಕ್ತರು ತೇರದಾಳದ ಬ್ರಹ್ಮಾನಂದ ಆಶ್ರಮದಲ್ಲಿ ಜಮಾಯಿಸಿದರು. ಚಿಮ್ಮಡ ಪ್ರಭುಶ್ರೀ ಹಾಗೂ ಶೇಗುಣಸಿ ಮಹಾಂತ ಪ್ರಭುಶ್ರೀ ಬಸವೇಶ್ವರ ದೇವಸ್ಥಾನದ ಬಳಿ ತೆರಳಿ ಪಾದಯಾತ್ರೆ ಹಾಗೂ ಬುತ್ತಿ ಜಾತ್ರೆಗೆ ಚಾಲನೆ ನೀಡಿದ ಬಳಿಕ ಭಕ್ತರು ಅಲ್ಲಿಂದ ಹೊರಟು, ಬ್ರಹ್ಮಾನಂದ ಆಶ್ರಮದಲ್ಲಿದ್ದ ಭಕ್ತರನ್ನು ಸೇರಿಕೊಂಡು ಪಟ್ಟಣದ ಗುಮ್ಮಟಗಲ್ಲಿ, ಜೋಳದ ಬಜಾರ, ಪೋಸ್ಟ್ ಆಫೀಸ್, ಕನ್ನಡ ಶಾಲೆ, ಗಣಪತಿ ಗುಡಿ, ದ್ವಾರ ಬಾಗಿಲು, ವಿಠ್ಠಲ ಮಂದಿರದ ಮೂಲಕ ದೇವಸ್ಥಾನ ತಲುಪಿದರು. ಪಾದಯಾತ್ರೆಯಲ್ಲಿ ೬೦೦ಕ್ಕೂ ಹೆಚ್ಚಿನ ಸಂಖ್ಯೆಯ ಮಾತೆಯರು ತಮ್ಮ ತಲೆ ಮೇಲೆ ಮಾದ್ಲಿ ಬುಟ್ಟಿ, ರೊಟ್ಟಿ ಬುಟ್ಟಿ ಹೊತ್ತು ಶ್ರೀ ಗುರು ಬಸವ ಲಿಂಗಾಯ ನಮಃ ಓಂ ಎಂದು ಭಕ್ತಿಯಿಂದ ಗುಣುಗುತ್ತಾ ಸಾಗಿದರು. ಶಹನಾಯಿ ವಾದಕರು, ಕೈಪೆಟ್ಟು ಮೇಳದವರು ಸೇರಿದಂತೆ ಹಲವು ಕಲಾವಿದರು ಪಾದಯಾತ್ರೆಗೆ ಕಳೆ ನೀಡಿದರು.ಗ್ರಾಮದ ಬಹುತೇಕ ಭಕ್ತರು ತೇರದಾಳದಲ್ಲಿ ಪಾದಯಾತ್ರೆಯಲ್ಲಿ ಉಪಸ್ಥಿತರಿರುವ ಮೂಲಕ ಇಡೀ ಗ್ರಾಮವೇ ಪಾದಯಾತ್ರೆ ಕೈಗೊಂಡಂತೆ ಭಾಸವಾಯಿತು. ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ಕೆ ಗ್ರಾಮದ ಮನೆಮನೆ ಭಕ್ತರು ಧನರೂಪದ ದೇಣಿಗೆ ಸಲ್ಲಿಸಿದ್ದರು. ಅದರ ಮೊತ್ತ ಕೂಡ ೩.೫ ಲಕ್ಷ ರೂ. ಸಂಗ್ರಹವಾಗಿದ್ದು ಅದನ್ನು ಕೂಡ ಶ್ರೀಗಳ ಮೂಲಕ ಸಮಿತಿಗೆ ಸಮರ್ಪಿಸಿದರು. ಯುವಕರು ಪಾದಯಾತ್ರಿಕರಿಗೆ ನೀರು, ಪಾನಕ ವ್ಯವಸ್ಥೆ ಮಾಡುತ್ತ ಜೊತೆ ಕಾಲ್ನಡಿಗೆಯಲ್ಲಿ ಸಾಗಿದರು. ಮಕ್ಕಳು, ಹಿರಿಯರು ಕೂಡ ಇದ್ದರು.