ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ರಾಜ್ಯ ಮಕ್ಕಳ ಆಯೋಗದ ಸದಸ್ಯ ಶಶಿಧರ ಕೊಸಂಬೆ ಅವರು ಇಂಡಿಗೆ ಭೇಟಿ ನೀಡಿ ಡಾ.ಪ್ರೀತಿ ಕೋಳೆಕರ, ಡಾ. ಭಾರತಿ ಗಜಾಕೋಶ, ಡಾ.ಮಯೂರಿ ಧನಶೆಟ್ಟಿ ಆಸ್ಪತ್ರೆಗಳಿಗೆ ಭೇಟಿ ಸ್ಕ್ಯಾನಿಂಗ್ ಸೆಂಟರ್ ಕುರಿತು ತಪಾಸಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಕೊಸಂಬೆ, ಪಿಸಿಪಿಎನ್‌ಡಿಟಿ ಸ್ಕ್ಯಾನಿಂಗ್ ಕಾಯ್ದೆ ಅನ್ವಯ ಸಂಬಂಧಿತ ಪ್ರತಿಯೊಂದು ಆಸ್ಪತ್ರೆಯವರು ಪಾಲಿಸಬೇಕು. ಕಾಯ್ದೆ ಉಲ್ಲಂಘಿಸಿದವರಿಗೆ ಸಂಬಂಧಿತ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಆಸ್ಪತ್ರೆಗಳ ನವೀಕರಣ ಮಾಡಿಸಬೇಕು. ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು ಎಂದು ಸಲಹೆ ನೀಡಿದರು. ಸ್ಕ್ಯಾನಿಂಗ್ ಮಾಡುವ ಯಂತ್ರ ಪರಿಶೀಲಿಸಿ, ಗರ್ಭಪಾತ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ. ಸ್ಕ್ಯಾನ್ ಮಾಡುವ ಮಷಿನ್ ಮತ್ತು ಪ್ರತಿದಿನ ಎಷ್ಟು ರೋಗಿಗಳು ಬರುತ್ತಾರೆ ಎಂಬುದನ್ನು ದಿನ ನಿತ್ಯದ ಡೈರಿ ಇಡುವಂತೆ ಸೂಚಿಸಿದರು.
ಪಟ್ಟಣದ ಡಿ.ದೇವರಾಜ ಅರಸು ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರ ತೊಂದರೆಗಳನ್ನು ಆಲಿಸಲಾಗಿದೆ. ವಸತಿ ನಿಲಯದಲ್ಲಿ ನೀಡುವ ಊಟ, ಸ್ನಾನಗೃಹ, ಕುಡಿಯುವ ನೀರಿನ ವ್ಯವಸ್ಥೆ, ಅಡುಗೆ ಕೋಣೆ ಸೇರಿದಂತೆ ಎಲ್ಲವನ್ನು ಪರಿಶೀಲಿಸಿದರು.ವಿದ್ಯಾರ್ಥಿನಿಯರು ವಸತಿ ನಿಲಯದ ಮುಂದೆ ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆ ಆಗುವಂತೆ ಕೇಳಿಕೊಂಡಿದ್ದಾರೆ. ವಸತಿ ನಿಲಯದಲ್ಲಿ ಕಂಪ್ಯೂಟರ್ ವ್ಯವಸ್ಥೆ ಮತ್ತು ಪ್ರತಿದಿನ ನೀರು ಬರುವುದಿಲ್ಲ. ನೀರಿನ ವ್ಯವಸ್ಥೆಯಾಗಬೇಕು ಎಂಬ ಹಲವು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಜೊತೆ ಮಾತನಾಡಿ ವ್ಯವಸ್ಥೆ ಸರಿಪಡಿಸಲು ಮನವಿ ಮಾಡಿದ್ದಾರೆ. ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಈ ವೇಳೆ ಎಸಿ ಅಬೀದ್ ಗದ್ಯಾಳ, ತಹಸೀಲ್ದಾರ ಮಂಜುಳಾ ನಾಯಕ, ವಿಜಯಪುರ ಸಿಡಿಪಿಒ ಬಸವರಾಜ ಜಿಗಳೂರ ಹಾಜರಿದ್ದರು.