ಶೃಂಗೇರಿ ಸುಮಾರು 300 ಕ್ಕೂ ಹೆಚ್ಚು ಕುಟುಂಬಗಳಿರುವ ಈ ಗ್ರಾಮದಲ್ಲಿ ಓಡಾಡಲು ಸರಿಯಾದ ರಸ್ತೆಯಿಲ್ಲ. ಸಂಪರ್ಕ ಕಲ್ಪಿಸುವ ಸೇತುವೆಗೆ ತಡೆಗೋಡೆಯೇಯಿಲ್ಲ ಹಾಗಾಗಿ ನಿತ್ಯ ಸಂಚಾರಿಗಳ ಪಾಲಿಗೆ ಈ ಸೇತುವೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಇದು ತಾಲೂಕಿನ ಬೇಗಾರು ಪಂಚಾಯಿತಿ ವ್ಯಾಪ್ತಿಯ ಸಸಿಗೋಳಿ ಗ್ರಾಮದ ಬೋಳು ಸೇತುವೆ ಕಥೆ ವ್ಯಥೆ.
- 30 ವರ್ಷಗಳಿಂದ ತಡೆಗೋಡೆಯಿಲ್ಲ । ಸೇತುವೆ ಕುಸಿಯುತ್ತಿದ್ದರೂ ನಿರ್ಲಕ್ಷ್ಯ
ನೆಮ್ಮಾರ್ ಅಬೂಬಕರ್ಕನ್ನಡಪ್ರಭ ವಾರ್ತೆ, ಶೃಂಗೇರಿ
ಸುಮಾರು 300 ಕ್ಕೂ ಹೆಚ್ಚು ಕುಟುಂಬಗಳಿರುವ ಈ ಗ್ರಾಮದಲ್ಲಿ ಓಡಾಡಲು ಸರಿಯಾದ ರಸ್ತೆಯಿಲ್ಲ. ಸಂಪರ್ಕ ಕಲ್ಪಿಸುವ ಸೇತುವೆಗೆ ತಡೆಗೋಡೆಯೇಯಿಲ್ಲ ಹಾಗಾಗಿ ನಿತ್ಯ ಸಂಚಾರಿಗಳ ಪಾಲಿಗೆ ಈ ಸೇತುವೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಇದು ತಾಲೂಕಿನ ಬೇಗಾರು ಪಂಚಾಯಿತಿ ವ್ಯಾಪ್ತಿಯ ಸಸಿಗೋಳಿ ಗ್ರಾಮದ ಬೋಳು ಸೇತುವೆ ಕಥೆ ವ್ಯಥೆ.ಸೇತುವೆ ನಿರ್ಮಾಣಗೊಂಡು 30 ವರ್ಷವಾದರೂ ಇದನ್ನು ಬಳಸುವ ಜನರ ಸುರಕ್ಷತೆಗೆ ತಡೆಗೋಡೆಯೇ ನಿರ್ಮಿಸಿಲ್ಲ. ಸೇತುವೆಯೂ ಕುಸಿಯುತ್ತಿದೆ. ಆದರೆ ಸಂಬಂಧ ಪಟ್ಟ ಅಧಿಕಾರಿಗಳಾಗಲೀ, ಇಲಾಖೆಯಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಮಾರ್ಗದಲ್ಲಿ ಬಸ್ ಸಂಚಾರವಂತೂ ಇಲ್ಲವೇ ಇಲ್ಲ. ಗ್ರಾಮಸ್ಥರಿಗೆ ಕಾಲ್ನಡಿಗೆಯಲ್ಲೇ ಸಾಗಬೇಕಾದ ಅನಿವಾರ್ಯತೆ ಇಲ್ಲಿನ ಜನರದು.
ಸುತ್ತಮುತ್ತಲ ಬೇಗಾರು , ಹರಾವರಿ, ಮಕ್ಕಿಮನೆ, ಸಿಡಿ ಮನೆ, ದೇವಾಲಕೊಪ್ಪ, ಅಸನಬಾಳು ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಬಿಂದು ಈ ಸೇತುವೆ. ಈ ಎಲ್ಲಾ ಗ್ರಾಮದವರು ಅಗತ್ಯ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಈ ಸೇತುವೇ ಮಾರ್ಗದಲ್ಲಿಯೇ ಬರಬೇಕು. ಹಾಗಿದ್ದೂ ಸೇತುವೆಗೆ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದಿರುವುದು ದುರಂತವೇ ಸರಿ.ಮಳೆಗಾಲದಲ್ಲಿ ಈ ಭಾಗದಲ್ಲಿ ಅತ್ಯಧಿಕ ಮಳೆಬೀಳುವುದರಿಂದ ಹಳ್ಳದ ನೀರು ಉಕ್ಕಿ ಹರಿಯುತ್ತದೆ. ಸೇತುವೆ ಎರಡೂ ಕಡೆಗಳಿಗೆ ಸಂಚರಿಸುವ ಗ್ರಾಮಸ್ಥರು, ವಾಹನ ಸವಾರರು ಜೀವ ಕೈಯಲ್ಲಿಟ್ಟುಕೊಂಡು ಭಯದಲ್ಲಿ ಓಡಾಡಬೇಕಾದ ಅನಿವಾರ್ಯತೆ ಇದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಆಸ್ಪತ್ರೆ , ಬ್ಯಾಂಕ್, ಕಚೇರಿಗಳಿಗೆ ಹೋಗುವವರು ಬಸ್ ಸೌಕರ್ಯ ಇಲ್ಲದ ಕಾರಣ ಸುಮಾರು 3-4 ಕಿ.ಮೀ ನಡೆದರೂ ಈ ಸೇತುವೆಯನ್ನೇ ಅವಲಂಭಿಸಬೇಕಿದೆ.
ಇಂತಹ ಸೇತುವೆಗೆ ತಡೆಗೋಡೆ ಇಲ್ಲದೆ ಸಮಸ್ಯೆ ಒಂದೆಡೆಯಾದರೆ ಇದು ಸಂಪೂರ್ಣ ಶಿಥಿಲಗೊಂಡು ಹಂತ ಹಂತವಾಗಿ ಕುಸಿಯುತ್ತಿರುವುದರಿಂದ ಅಪಾಯವನ್ನು ಆಹ್ವಾನಿಸುತ್ತಿದೆಯೋ ಎನ್ನುವ ಪರಿಸ್ಥಿತಿಯಲ್ಲಿದೆ. ಮೃತ್ಯು ಕೂಪವಾಗಿರುವ ಸೇತುವೆಗೆ ಯಾವುದೇ ಅಧಿಕಾರಿಗಳಾಗಲೀ, ಸಂಬಂಧ ಪಟ್ಟ ಇಲಾಖೆಯಾಗಲೀ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಸೇತುವೆ ಮೇಲೆ ಸಂಚರಿಸುವ ಪಾದಾಚಾರಿಗಳು ಅಥವಾ ವಾಹನಗಳು ಸ್ವಲ್ಪ ನಿಯಂತ್ರಣ ತಪ್ಪಿದರೆ ಹಳ್ಳಕ್ಕುರುಳುವುದು ಖಚಿತ.ಕಳೆದ ಹಲವು ವರ್ಷಗಳಿಂದ ಗ್ರಾಮಸ್ಥರು ಗ್ರಾಮಸಭೆ, ಜನಸಂಪರ್ಕ ಸಭೆ ಸೇರಿದಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ನೀಡಿದ್ದರೂ ಯಾವುದೇ ಸ್ಪಂದನೆಯಿಲ್ಲದೇ ಸೇತುವೆ ಮಾತ್ರ ಅದೇ ಸ್ಥಿತಿಯಲ್ಲಿದ್ದು ಇತ್ತ ಬಳಸದೇ ಇರಲು ಆಗದೆ ಆತಂಕದಿಂದಲೇ ಸೇತುವೆ ಮೇಲೆ ಓಡಾಡುವ ದೌರ್ಭಾಗ್ಯ ಈ ಜನರದು.
ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ, ಕಂದಾಯ, ಪಂಚಾಯಿತಿ ಅಧಿಕಾರಿಗಳು ಅನುದಾನದ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸೇತುವೆಗೆ ತಡೆಗೋಡೆ ನಿರ್ಮಿಸಿ ಆಗುವ ಅನಾಹುತ ತಪ್ಪಿಸಲು ಸಂಬಂಧ ಪಟ್ವರು ಮುಂದಾಗಬೇಕಿದೆ.ಸೇತುವೆ ಕುಸಿಯತೊಡಗಿ ಅನೇಕ ವರ್ಷಗಳೇ ಕಳೆದಿವೆ. ಎರಡು ಕಡೆಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಿಲ್ಲ. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳತ್ತಿಲ್ಲ. ದುರಸ್ಥಿಗೆ ಎಷ್ಟು ಕಾಲಬೇಕೋ ಗೊತ್ತಿಲ್ಲ. ಈ ಭಾಗದ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಬೇಕಾದವರು ಮನವಿ ಸಲ್ಲಿಸಿದರೂ ನಿರ್ಲಕ್ಷ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಲಕ್ಷ್ಮಿನಾರಾಯಣ ಅಭಿಪ್ರಾಯ ಪಟ್ಟಿದ್ದಾರೆ.
8 ಶ್ರೀ ಚಿತ್ರ 1-ಶೃಂಗೇರಿ ತಾಲೂಕಿನ ಬೇಗಾರು ಪಂಚಾಯಿತಿಯಲ್ಲಿ ತಡೆಗೋಡೆಯಿಲ್ಲದೇ ,ಸುಸಿದು ಶಿಥಿಲಾವಸ್ಥೆಯಲ್ಲಿರುವ ಸಸಿಗೋಳಿಯಲ್ಲಿರುವ ಬೋಳು ಸೇತುವೆ .