ಸಾರಾಂಶ
- ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ 89, ಶಿವಮೊಗ್ಗ ಜಿಲ್ಲೆ 3, ಚಿತ್ರದುರ್ಗ ಜಿಲ್ಲೆ 14 ಕೆರೆಗಳಿಗೆ ಹರಿಯಲಿದೆ ನೀರು
- ಕೆರೆಯಿಂದ ಕೆರೆಗೆ ಪ್ರಾಯೋಗಿಕ ನೀರು ಹರಿಸುವ ಕಾರ್ಯಕ್ಕೆ ಚಾಲನೆ । ಪೈಪ್ ಲೈನ್ ದೋಷ ಸರಿಪಡಿಸಲು ಸಿದ್ಧತೆ - - - * ಬಾ.ರಾ.ಮಹೇಶ್ ಚನ್ನಗಿರಿಕನ್ನಡಪ್ರಭ ವಾರ್ತೆ ಚನ್ನಗಿರಿ
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ 89 ಕೆರೆಗಳಿಗೆ ನೀರು ತುಂಬಿಸುವಂತಹ ಸಾಸಿವೆಹಳ್ಳಿ ಏತ ನೀರಾವರಿ ಯೋಜನೆಯ ಕಾಮಗಾರಿ ಕೆಲಸ ಪೂರ್ಣಗೊಂಡಿದ್ದು, ಉದ್ಘಾಟನೆಗೆ ದಿನಗಣನೆ ಪ್ರಾರಂಭವಾಗಿದೆ.ಈ ಯೋಜನೆಯಿಂದ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಈ ಜಿಲ್ಲೆಗಳ ಕೆಲ ಕೆರೆಗಳಿಗೆ ನೀರು ಹರಿಯಲಿದೆ. ಆ ಪ್ರದೇಶದ ರೈತರಿಗೆ ಈ ಯೋಜನೆಯಿಂದ ತುಂಬಾ ಅನುಕೂಲವಾಗಲಿದೆ. ಪ್ರಾಯೋಗಿಕವಾಗಿ ಯೋಜನೆಗೆ ಸಂಬಂಧಪಟ್ಟ ಕೆರೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಕೆರೆಯಿಂದ ಕೆರೆಗೆ ನೀರು ಹರಿಸುವ ಪೈಪ್ ಲೈನ್‌ಗಳಲ್ಲಿ ಲೋಪ- ದೋಷಗಳು ಕಂಡುಬಂದಲ್ಲಿ ತಕ್ಷಣ ಸರಿಪಡಿಸುವ ಕಾರ್ಯಗಳೂ ಭರದಿಂದ ನಡೆದಿವೆ.
2017ರಲ್ಲಿ ₹431 ಕೋಟಿ ವೆಚ್ಚ:ಸಾಸಿವೆಹಳ್ಳಿ ಯೋಜನೆಯಿಂದ ಶಿವಮೊಗ್ಗ ಜಿಲ್ಲೆಯ ಮೂರು ಕೆರೆಗಳಿಗೆ ನೀರು ಹರಿದರೆ, ಚಿತ್ರದುರ್ಗ ಜಿಲ್ಲೆಯ 14 ಕೆರೆಗಳಿಗೆ ನೀರು ಹರಿಯುವುದು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿಯೇ 89 ಕೆರೆಗಳಿಗೆ ಈ ಏತ ನೀರಾವರಿ ಯೋಜನೆಯ ನೀರು ಹರಿಯಲಿದೆ. ಯೋಜನೆಯು ತಾಲೂಕಿನ ರೈತರಿಗೆ ವರದಾನವಾಗಿದೆ. 2013ರ ವಿಧಾನಸಭಾ ಚುನಾವಣೆಗೂ ಮುನ್ನ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಈ ಯೋಜನೆ ಅನುಷ್ಠಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅನಂತರ ಶಾಸಕರಾದ ವಡ್ನಾಳ್ ರಾಜಣ್ಣ 2017ರಲ್ಲಿ ₹431 ಕೋಟಿ ವೆಚ್ಚದಲ್ಲಿ ಈ ಯೋಜನೆ ಕಾಮಗಾರಿ ಕಾರ್ಯಗತಗೊಳ್ಳಲು ಚಾಲನೆ ನೀಡಿದ್ದರು.
2021ರಲ್ಲಿ ₹170 ಕೋಟಿ:ಆಗ ಚಾಲನೆ ನೀಡಿ ಕೆಲಸ ಆರಂಭಿಸುವ ಸಂದರ್ಭದಲ್ಲಿ ಪೈಪ್ ಲೈನ್ ಅಳವಡಿಕೆ ಮತ್ತು ಎಕ್ಸ್‌ಪ್ರೆಸ್ ವಿದ್ಯುತ್ ಲೈನ್ ಅಳವಡಿಕೆ ಸಂದರ್ಭ ವಿದ್ಯುತ್ ಲೈನ್ ಹಾದುಹೋಗುವ ಜಮೀನುಗಳ ರೈತರು ತಂಟೆ-ತಕರಾರು ಮಾಡುತ್ತಾ ಕೆಲವು ತಿಂಗಳುಗಳ ಕಾಲ ಕಾಮಗಾರಿ ಕೆಲಸ ಸ್ಥಗಿತಗೊಂಡಿತ್ತು. ನಂತರದಲ್ಲಿ 2018ರಲ್ಲಿ ಮತ್ತೆ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ರೈತರು ಮತ್ತು ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳ ಪ್ರತೇಕ ಸಭೆಗಳನ್ನು ನಡೆಸಿ, ಯೋಜನೆ ಜಾರಿಗೆ ಅಡ್ಡಿಯಾಗಿದ್ದ ಸಮಸ್ಯೆಗಳನ್ನು ಬಗೆಹರಿಸಿದರು. 2021ರಲ್ಲಿ ಯೋಜನೆ ವೃದ್ಧೀಕರಣಕ್ಕಾಗಿ ಹೆಚ್ಚುವರಿಯಾಗಿ ₹170 ಕೋಟಿ ಅನುದಾನ ಮಂಜೂರು ಮಾಡಿಸಿ, ಕಾಮಗಾರಿಗೆ ಚಾಲನೆ ನೀಡಿದ್ದರು.
ಈ ಬೃಹತ್ ಯೋಜನೆಯು ಹೊನ್ನಾಳಿ ತಾಲೂಕಿನ ಸಾಸಿವೆಹಳ್ಳಿ ಗ್ರಾಮದ ಬಳಿ ಹರಿಯುವ ತುಂಗಭದ್ರಾ ನದಿಯಿಂದ ನೀರನ್ನೆತ್ತಲು ಮಾವಿನಕೋಟೆ ಎಂಬ ಪ್ರದೇಶದ ಬಳಿ ಬೃಹದಾಕಾರದ ಜಾಕ್ ವೆಲ್ ನಿರ್ಮಿಸಿದೆ. ಅಲ್ಲಿಂದ ನೀರನ್ನು ಮೇಲೆತ್ತಿ ಕಳಿಸಲು 2.387 ಎಚ್.ಪಿ. ಸಾಮಥ್ಯದ 5 ಮೋಟಾರುಗಳು, ನದಿಯಿಂದ ನೀರನ್ನು ಎತ್ತಿ ಚನ್ನಗಿರಿ ತಾಲೂಕಿನ ಚನ್ನೇಶಪುರದ ಜಾಕ್ ವೆಲ್‌ಗೆ ನೀರು ರವಾನೆ ಮಾಡುತ್ತದೆ. ಈ ಜಾಕ್ ವೆಲ್‌ನಲ್ಲಿ 215 ಎಚ್.ಪಿ. ಸಾಮಥ್ಯದ 2 ಮೋಟಾರುಗಳು ಮತ್ತು ಇದೇ ತಾಲೂಕಿನ ಚಕ್ಕಲಿ ಗ್ರಾಮದ ಬಳಿಯ ಜಾಕ್ ವೆಲ್‌ನಲ್ಲಿ 2.253 ಎಚ್.ಪಿ. ಸಾಮಥ್ಯದ 4 ಮೋಟಾರುಗಳು ಹಾಗೂ ಹೊಳಲ್ಕೆರೆ ತಾಲೂಕಿನ ಮುತ್ತಗದೂರು ಗ್ರಾಮದ ಬಳಿಯ ಜಾಕ್ ವೆಲ್ ಬಳಿ 1.475 ಎಚ್.ಪಿ.ಯ 3 ಮೋಟಾರುಗಳ ಸಹಾಯದಿಂದ ನೀರನ್ನು ಯೋಜನೆಗೆ ಸಂಬಂಧಪಟ್ಟಂತಹ ಕೆರೆಗಳಿಗೆ ನೀರನ್ನು ಹರಿಸಲು ಎಲ್ಲ ಸಿದ್ಧತೆಗಳು ನಡೆದಿವೆ ಎಂದು ಕಾಮಗಾರಿ ಉಸ್ತುವಾರಿ, ಶಿವಮೊಗ್ಗದ ಜಲ ಸಂಪನ್ಮೂಲ ಇಲಾಖೆ ಅಭಿಯಂತರ ಜಗದೀಶ್ ವಿವರಿಸಿದ್ದಾರೆ.ಸಾಸಿವೆಹಳ್ಳಿ ಏತನೀರಾವರಿ ಯೋಜನೆಯ ಕಾಮಗಾರಿ ಕೆಲಸವನ್ನು ತೆಲಂಗಾಣ ಮೂಲಕ ಜಿ.ವಿ.ಪಿ.ಆರ್ ಎಂಜಿನಿಯರಿಂಗ್ ಕಂಪನಿಯು ಗುಣಮಟ್ಟದಲ್ಲಿ ಕಾಮಗಾರಿ ಮುಗಿಸಿದೆ. ಮುಂದಿನ 5 ವರ್ಷಗಳ ಕಾಲ ಈ ಯೋಜನೆಗೆ ಸಂಬಂಧಪಟ್ಟಂತಹ ನಿರ್ವಹಣೆಯನ್ನು ಮಾಡಲಿದ್ದಾರೆ ಎಂದು ಜಲ ಮಂಡಳಿಯ ಅಭಿಯಂತರರಾದ ತಿಪ್ಪಾನಾಯ್ಕ ಹೇಳಿದ್ದು, ಇದೊಂದು ಉತ್ತಮವಾದ ಯೋಜನೆಯಾಗಿದೆ. ಯೋಜನೆಗೆ ಒಳಪಡುವ ಎಲ್ಲ ಕೆರೆಗಳು ತುಂಬಲಿವೆ ಎಂದು ಕೃಷ್ಣಪ್ರಸಾದ್ ಹೇಳುತ್ತಾರೆ.
ಚನ್ನಗಿರಿ ತಾಲೂಕಿನಲ್ಲಿ ಉಬ್ರಾಣಿ ಏತನೀರಾವರಿ ಮತ್ತು ಸಾಸಿವೆಹಳ್ಳಿ ಏತನೀರಾವರಿ ಯೋಜನೆಗಳಿಂದ ತಾಲೂಕಿನ ಬಹುತೇಕ ಎಲ್ಲ ಕೆರೆಗಳಲ್ಲಿಯೂ ನೀರು ತುಂಬಲಿದೆ. ಇದು ಅಂತರ್ಜಲಮಟ್ಟ ವೃದ್ಧಿಗೆ ತುಂಬ ಸಹಕಾರಿಯಾಗಲಿದೆ. ಯೋಜನೆ ಉದ್ಘಾಟನೆ ಹದಿನೈದಿಪ್ಪತ್ತು ದಿನಗಳಲ್ಲೇ ನೆರವೇರುವ ಸಾಧ್ಯತೆ ಇದೆ.- - -
ಕೋಟ್ಸ್ ಸಾಸಿವೆಹಳ್ಳಿ ಏತ ನೀರಾವರಿ ಯೋಜನೆಯ ಕಾಮಗಾರಿ ಕೆಲಸ ಸಂಪೂರ್ಣವಾಗಿ ಮುಗಿದಿದೆ. ಯೋಜನೆಗೆ ಒಳಪಡುವ ಎಲ್ಲ ಕೆರೆಗಳು ತುಂಬಿಕೊಳ್ಳಲಿವೆ. ಈ ಯೋಜನೆಯಿಂದ ಚನ್ನಗಿರಿ ತಾಲೂಕಿನ ರೈತರು ತೋಟಗಾರಿಕಾ ಬೆಳೆಗಳಿಂದ ಹಿಡಿದು ಇನ್ನಿತರೆ ಬೆಳೆಗಳನ್ನು ಬೆಳೆಯಲು ತುಂಬಾ ಸಹಕಾರಿಯಾಗಲಿದೆ- ಕೃಷ್ಣ ಪ್ರಸಾದ್, ಎಕ್ಸಿಕುಟೀವ್ ಎಂಜಿನಿಯರ್, ನೀರಾವರಿ ಇಲಾಖೆ
ತೆಲಂಗಾಣ ಮೂಲದ ಜಿ.ವಿ.ಪಿ.ಆರ್. ಎಂಜಿನಿಯರಿಂಗ್ ಕಂಪನಿಯು ಸಾಸಿವೆಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿ ಕೈಗೊಂಡಿದೆ. ಗುಣಮಟ್ಟದಿಂದ ಕಾಮಗಾರಿ ಮುಗಿಸಿದೆ. ಮುಂದಿನ 5 ವರ್ಷಗಳ ಕಾಲ ಯೋಜನೆಯ ನಿರ್ವಹಣೆಯನ್ನು ಮಾಡಲಿದ್ದಾರೆ- ತಿಪ್ಪಾನಾಯ್ಕ್, ಸಹಾಯಕ ಎಕ್ಸಿಕುಟೀವ್ ಎಂಜಿನಿಯರ್
- - --1ಕೆಸಿಎನ್‌ಜಿ2: ಸಾಸಿವೆಹಳ್ಳಿ ಗ್ರಾಮದ ಬಳಿ ಇರುವ ಜಾಕ್ ವೆಲ್‌ನಲ್ಲಿ ಏತನೀರಾವರಿ ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಲು ಅಧಿಕಾರಿಗಳ ತಂಡ ಮೋಟಾರ್ ಚಾಲನೆ ಮಾಡಿದರು.
-1ಕೆಸಿಎನ್‌ಜಿ3: ಜಾಕ್ ವೆಲ್‌ನಿಂದ ನೀರು ಹರಿಯುತ್ತಿರುವುದು.-1ಕೆಸಿಎನ್ಜಿ4: ಚನ್ನಗಿರಿ ತಾಲೂಕಿನ ಎನ್.ಗಾಣದಕಟ್ಟೆ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸುತ್ತಿರುವುದು.
- 1ಕೆಸಿಎನ್‌ಜಿ5: ಸಾಸಿವೆಹಳ್ಳಿ ಗ್ರಾಮದ ಬಳಿ ಇರುವ ಜಾಕ್ ವೆಲ್.