ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಕಾಂಗ್ರೆಸ್‌ ಗಿಫ್ಟ್‌

| Published : May 04 2024, 12:35 AM IST / Updated: May 04 2024, 12:36 AM IST

ಸಾರಾಂಶ

ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ತಂದಿದ್ದು ಕಾಂಗ್ರೆಸ್ಸು. ಅದು ಕಾಂಗ್ರೆಸ್‌ ಕೂಸು, ಸಂಸದ ಜಿ.ಎಂ.ಸಿದ್ದೇಶ್ವರ ಆಗಲಿ, ಬಿಜೆಪಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಾಗಲೀ ಕೊಡುಗೆ ನೀಡಿಲ್ಲ ಎಂದು ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ ಹೇಳಿದ್ದಾರೆ.

- ಯೋಜನೆಗೆ ಸಿದ್ದೇಶ್ವರ, ಮಾಡಾಳ್, ಬಿಜೆಪಿ ಕೊಡುಗೆ ಇಲ್ಲ: ಶಿವಗಂಗಾ ಬಸವರಾಜ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ತಂದಿದ್ದು ಕಾಂಗ್ರೆಸ್ಸು. ಅದು ಕಾಂಗ್ರೆಸ್‌ ಕೂಸು, ಸಂಸದ ಜಿ.ಎಂ.ಸಿದ್ದೇಶ್ವರ ಆಗಲಿ, ಬಿಜೆಪಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಾಗಲೀ ಕೊಡುಗೆ ನೀಡಿಲ್ಲ ಎಂದು ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ ಹೇಳಿದ್ದಾರೆ.

ತಾವು, ಮಾಡಾಳ್ ವಿರುಪಾಕ್ಷಪ್ಪ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯನ್ನು ತಂದಿದ್ದಾಗಿ ಸಂಸದ ಸಿದ್ದೇಶ್ವರ ಸುಳ್ಳುಗಳನ್ನು ಹೇಳಿಯೇ ನಾಲ್ಕು ಸಲ ಗೆದ್ದಿದ್ದಾರೆ. ಸಂತೇಬೆನ್ನೂರು ಪ್ರಚಾರ ಸಭೆಯಲ್ಲಿ ಸಿದ್ದೇಶ್ವರ ಹೀಗೆ ಹೇಳಿಕೆ ನೀಡಿದ್ದು ಸರಿಯಲ್ಲ. 2016ರಲ್ಲೇ ಕಾಂಗ್ರೆಸ್ ಇದನ್ನು ತಂದಿದ್ದ ಬಗ್ಗೆ ದಾಖಲೆ ಸಮೇತ ಚರ್ಚೆಗೆ ನಾನು ಸಿದ್ಧ ಎಂದಿದ್ದಾರೆ.

ಏತ ನೀರಾವರಿ ಯೋಜನೆ ವಿಚಾರಕ್ಕೆ ಬೇಕಿದ್ದರೆ ಬಹಿರಂಗ ಚರ್ಚೆಗೆ ಬರಲಿ. ದಾಖಲೆ ಸಮೇತ ನಾನೂ ಚರ್ಚೆಗೆ ಸಿದ್ಧ. ಕಾಂಗ್ರೆಸ್ ಪಕ್ಷಕ್ಕೂ- ಸಾಸ್ವೇಹಳ್ಳಿ ಏತ ಯೋಜನೆಗೂ ಸಂಬಂಧವೇ ಇಲ್ಲವೆಂಬ ಸಿದ್ದೇಶ್ವರ ಹೇಳಿಕೆ ಹಾಸ್ಯಾಸ್ಪದ. 2015-16ನೇ ಸಾಲಿನಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಸಂತೇಬೆನ್ನೂರು ಮತ್ತು ಕಸಬಾ ಹೋಬಳಿಯಲ್ಲಿ 2 ಹಂತದಲ್ಲಿ ಏತ ನೀರಾವರಿ ಯೋಜನೆ ಕೈಗೊಳ್ಳುವ ಘೋಷಣೆ ಮಾಡಿದ್ದರು ಎಂದು ತಿಳಿಸಿದ್ದಾರೆ.

ನೀರಾವರಿ ಇಲಾಖೆ ಆಡಳಿತಾತ್ಮಕ ಅನುಮೋದನೆ ನೀಡುವಂತೆಯೂ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅನಂತರ ವರದಿ ಅನುಸಾರ ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳ (ಚನ್ನಗಿರಿ ಕಸಬಾ ಹೋಬಳಿ 46 ಕೆರೆ) ಒಟ್ಟು 121 ಕೆರೆಗಳಿಗೆ ನೀರೊದಗಿಸಲು ಯೋಜನೆ ಉದ್ದೇಶವಾಗಿತ್ತು. ಅನಂತರ 23.6.2016ರಂದು ನೀರಾವರಿ ಇಲಾಖೆಯಿಂದ ಯೋಜನಾ ವರದಿಯನ್ನು 15ನೇ ಅಂದಾಜು ಪರಿಶೀಲನಾ ಸಮಿತಿ ಸಭೆಗೆ ಮಂಡಿಸಲಾಗಿತ್ತು ಎಂದು ಹೇಳಿದ್ದಾರೆ.

ಅನಂತರ 19.8.2016ರಲ್ಲಿ ₹415.68 ಕೋಟಿಗಳ ಯೋಜನೆ ಅನುಮೋದನೆಗೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ 11.1.2017ರಂದು ಸಾಸ್ವೇಹಳ್ಳಿ ಏತ ನೀರಾವರಿ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಯೋಜನೆ ಜಾರಿಗೆ ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ ಸೇರಿದಂತೆ ಕಾಂಗ್ರೆಸ್ ಮುಖಂಡರ ಶ್ರಮ, ಹೋರಾಟ ಕೂಡ ಇದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಒಂದಾದರೂ ಸತ್ಯ ಹೇಳಿ, ಮತ ಕೇಳಲಿ. ಸುಳ್ಳು ಮಾಹಿತಿ ನೀಡಿ ಜನರನ್ನ ದಾರಿ ತಪ್ಪಿಸಬಾರದು. ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭಯದಿಂದ ಇಂಥ ಸುಳ್ಳುಗಳನ್ನು ಸಿದ್ದೇಶ್ವರ ಹೇಳುತ್ತಿದ್ದಾರೆ. ದಾವಣಗೆರೆ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ದಿನದಿನಕ್ಕೂ ಹೆಚ್ಚಾಗುತ್ತಿದೆ. ಬಿಜೆಪಿಗೆ ನಡುಕ ಉಂಟಾಗಿದ್ದು. ಇದಕ್ಕಾಗಿ ಸುಳ್ಳು ಹೇಳುತಿದ್ದಾರೆ, ಈ ಬಾರಿ ಕಾಂಗ್ರೆಸ್ ಗೆಲುವನ್ನು ಇಂಥ ಸುಳ್ಳು ಹೇಳಿ ತಪ್ಪಿಸಲು ಸಾಧ್ಯವಿಲ್ಲ ಎಂದು ಶಾಸಕರಾದ ಬಸವರಾಜು ವಿ. ಶಿವಗಂಗಾ ಸಂಸದ ಸಿದ್ದೇಶ್ವರಗೆ ಟಾಂಗ್ ನೀಡಿದ್ದಾರೆ.

- - - -3ಕೆಡಿವಿಜಿ19, 20:

ಶಿವಗಂಗಾ ವಿ. ಬಸವರಾಜ, ಶಾಸಕ, ಚನ್ನಗಿರಿ ಕ್ಷೇತ್ರ.