ಸಾರಾಂಶ
ಚುಟುಕು ಕವಿಗಳು ಸಾಹಿತ್ಯದಲ್ಲಿ ಬದುಕಿನ ವಿಡಂಬನೆ, ವಿಪರ್ಯಾಸಗಳ ಬಣ್ಣನೆಯ ಮೂಲಕ ಸಾಮಾಜಿಕ ಕಳಕಳಿ, ಜವಾಬ್ದಾರಿ ಮೆರೆಯುತ್ತಾರೆ. ಹಾಸ್ಯದ ಲೇಪನಕೊಟ್ಟು ನಗಿಸುತ್ತಾರೆ. ಹೃದಯ ದಹಿಸುವ ಅನೇಕ ಸತ್ಯ ಕೇವಲ ನಾಲ್ಕು ಸಾಲಿನಲ್ಲಿ ಕಟ್ಟಿಕೊಡುತ್ತಾರೆ.
ಕುಕನೂರು:
ಕಲ್ಯಾಣ ಚಾಲುಕ್ಯರ ನಾಡಾಗಿರುವ ಕುಂತಳಪುರ (ಈಗಿನ ಕುಕನೂರು ತಾಲೂಕು) ಪ್ರದೇಶದಲ್ಲಿ ಚುಟುಕು ಸಾಹಿತ್ಯ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೊಬಗಿನಲ್ಲಿ ಮತ್ತಷ್ಟು ವೈಭವ ಕಾಣುತ್ತಿದೆ ಎಂದು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಹೇಳಿದರು.ಪಟ್ಟಣದ ಇಟಗಿ ಭೀಮಾಂಬಿಕಾ ದೇವಸ್ಥಾನ ಆವರಣದಲ್ಲಿ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದ ಉದ್ಘಾಟನೆ, ಪದಗ್ರಹಣ ಚುಟುಕು ಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ಸಾಹಿತ್ಯ ಕುರಿತು ಸಾಕಷ್ಟು ಸಂಘ, ಸಂಸ್ಥೆಗಳು ಚಟುವಟಿಕೆಯಲ್ಲಿವೆ. ಇವುಗಳ ಜತೆಗೆ ಮೂರು ದಶಕಗಳಿಂದ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಡಾ. ಎಂ.ಜಿ.ಆರ್. ಅರಸು ನೇತೃತ್ವದಲ್ಲಿ ವಿಭಿನ್ನವಾಗಿ ತನ್ನದೇಯಾದ ಕನ್ನಡ ಸೇವೆ ನಿರ್ವಹಿಸುತ್ತಿದೆ. ಚುಟುಕು ಸಾಹಿತ್ಯದ ಪರಂಪರೆ, ಕಾವ್ಯ, ಕೃತಿಗಳ ಮೂಲಕ ಸಾಹಿತ್ಯದ ವಾತಾವರಣ ಪಸರಿಸಿ ಚುಟುಕು ಸಾಹಿತ್ಯ ನಾಡಿನಲ್ಲಿ ಶ್ರೀಮಂತಗೊಂಡಿದೆ ಎಂದು ಹೇಳಿದರು.ಚುಟುಕು ಕವಿಗಳು ಸಾಹಿತ್ಯದಲ್ಲಿ ಬದುಕಿನ ವಿಡಂಬನೆ, ವಿಪರ್ಯಾಸಗಳ ಬಣ್ಣನೆಯ ಮೂಲಕ ಸಾಮಾಜಿಕ ಕಳಕಳಿ, ಜವಾಬ್ದಾರಿ ಮೆರೆಯುತ್ತಾರೆ. ಹಾಸ್ಯದ ಲೇಪನಕೊಟ್ಟು ನಗಿಸುತ್ತಾರೆ. ಹೃದಯ ದಹಿಸುವ ಅನೇಕ ಸತ್ಯ ಕೇವಲ ನಾಲ್ಕು ಸಾಲಿನಲ್ಲಿ ಕಟ್ಟಿಕೊಡುತ್ತಾರೆ. ಇದೆ ಗಟ್ಟಿತನ ಸಾಹಿತ್ಯ ಎಂದರು.
ತಾಲೂಕು ನೌಕರ ಸಂಘದ ಅಧ್ಯಕ್ಷ ಮಹೇಶ ಸಬರದ ಮಾತನಾಡಿ, ತಾಲೂಕಿನ ಅನೇಕ ಪ್ರತಿಭೆ ಚುಟುಕು ಶ್ರೀಮಂತಗೊಳಿಸಿದ್ದಾರೆ. ಈಗಿನ ಬಿಡುವಿಲ್ಲದ ಜೀವನ ಶೈಲಿಗೆ ಚುಟುಕು ಸಾಹಿತ್ಯ ಪ್ರಕಾರಗಳು ಜನರಿಗೆ ಹಿಡಿಸಿವೆ. ಚಿಕ್ಕ ಮತ್ತು ಚೊಕ್ಕದಾದ ರೀತಿಯಲ್ಲಿ ಸಾಮಾಜಿಕ ಬದಲಾವಣೆ ತರುತ್ತಿವೆ ಎಂದು ಹೇಳಿದರು.ಕಲಾವಿದ ಮುರಾರಿ ಭಜಂತ್ರಿ ಅವರಿಂದ ಸಂಗೀತ ಸುಧೆ ಗಾಯನ ಪ್ರಸ್ತುತ ಪಡಿಸಲಾಯಿತು. ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಚುಟುಕು ಗೋಷ್ಠಿ ನಡೆಯಿತು. ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ್ ಉಪ್ಪಿನ್ ಅಧ್ಯಕ್ಷತೆ ಹಿಸಿದ್ದರು.
ಈ ವೇಳೆ ಹಿರಿಯ ಸಾಹಿತಿ ಆರ್.ಪಿ. ರಾಜೂರು, ಜಿಲ್ಲಾ ಪ್ರ ಕಾರ್ಯದರ್ಶಿ ಮಹಾಂತೇಶ ನೇಲಗಣಿ, ಕುಷ್ಟಗಿ ಚುಸಾಪ ಅಧ್ಯಕ್ಷ ಮಹೇಶ ಹಡಪದ, ಶರಣಪ್ಪ ರಾವಣಕಿ, ಶರಣಪ್ಪ ಕೊಪ್ಪದ, ಉಮೇಶ ಕಂಬಳಿ, ಶಂಭು ಅರಿಶಿನದ, ಮಾರುತಿ ತಳವಾರ, ಅಕ್ಕಮ್ಮ ಅಂಗಡಿ, ಈರಯ್ಯ ಕುರ್ತಕೋಟಿ, ಕಲ್ಲಪ್ಪ ಕವಳಕೇರಿ, ರಾಣಿ ಹಳ್ಳಿ ಇದ್ದರು.