ಸತೀಶ ಪೂಜಾರಿ ಮತ್ತೆ ವಶ, ಹಲವರ ವಿಚಾರಣೆ

| Published : Aug 31 2025, 01:08 AM IST

ಸತೀಶ ಪೂಜಾರಿ ಮತ್ತೆ ವಶ, ಹಲವರ ವಿಚಾರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಛತ್ರಪತಿ ಶಿವಾಜಿ ಮಹಾರಾಜರ ವಿವಾದಿತ ಚಿತ್ರದ ಫ್ಲೆಕ್ಸ್ ತೆರವು ವೇಳೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆ ಹಿಂದು ಜಾಗರಣಾ ವೇದಿಕೆ ಸತೀಶ ಪೂಜಾರಿ ಅವರನ್ನು ಶುಕ್ರವಾರ ರಾತ್ರಿ ವಶಕ್ಕೆ ಪಡೆದು, ತಡರಾತ್ರಿ ಪೊಲೀಸರು ಬಿಡುಗಡೆ ಮಾಡಿದ್ದರು. ಆದರೆ, ಮತ್ತೆ ಸತೀಶ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಎಲ್. ಶಿವಪ್ರಕಾಶ, ಮಾಜಿ ಮೇಯರ್ ಎಸ್.ಟಿ.ವೀರೇಶ, ಸಂಪತ್‌ ಅವರನ್ನು ಠಾಣೆಗೆ ಕರೆಸಿಕೊಂಡು, ಸ್ವಲ್ಪ ಹೊತ್ತಿನ ನಂತರ ಪೊಲೀಸರು ಬಿಟ್ಟು ಕಳಿಸಿದ್ದಾರೆ.

- ಮಟ್ಟಿಕಲ್ಲು ಫ್ಲೆಕ್ಸ್ ಪ್ರಕರಣ: ರಾಜಶೇಖರ ನಾಗಪ್ಪ, ವೀರೇಶ, ಶಿವಪ್ರಕಾಶ, ಸಂಪತ್ ಠಾಣೆಗೆ ಭೇಟಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಛತ್ರಪತಿ ಶಿವಾಜಿ ಮಹಾರಾಜರ ವಿವಾದಿತ ಚಿತ್ರದ ಫ್ಲೆಕ್ಸ್ ತೆರವು ವೇಳೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆ ಹಿಂದು ಜಾಗರಣಾ ವೇದಿಕೆ ಸತೀಶ ಪೂಜಾರಿ ಅವರನ್ನು ಶುಕ್ರವಾರ ರಾತ್ರಿ ವಶಕ್ಕೆ ಪಡೆದು, ತಡರಾತ್ರಿ ಪೊಲೀಸರು ಬಿಡುಗಡೆ ಮಾಡಿದ್ದರು. ಆದರೆ, ಮತ್ತೆ ಸತೀಶ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಎಲ್. ಶಿವಪ್ರಕಾಶ, ಮಾಜಿ ಮೇಯರ್ ಎಸ್.ಟಿ.ವೀರೇಶ, ಸಂಪತ್‌ ಅವರನ್ನು ಠಾಣೆಗೆ ಕರೆಸಿಕೊಂಡು, ಸ್ವಲ್ಪ ಹೊತ್ತಿನ ನಂತರ ಪೊಲೀಸರು ಬಿಟ್ಟು ಕಳಿಸಿದ್ದಾರೆ.

ನಗರದ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಟಿಜೆ ನಗರದ ನಿವಾಸದಿಂದ ಸತೀಶ ಪೂಜಾರಿ ಅವರನ್ನು ಶುಕ್ರವಾರ ರಾತ್ರಿಯಷ್ಟೇ ಪೊಲೀಸರು ವಶಕ್ಕೆ ಪಡೆದಿದ್ದರು. ತಡರಾತ್ರಿ ಪಾಲಿಕೆ ಮಾಜಿ ಸದಸ್ಯ ಆರ್.ಎಲ್‌. ಶಿವಪ್ರಕಾಶ್ ಕಾರಿನಲ್ಲಿ ವಾಪಸ್‌ ಕಳಿಸಿದ್ದರಾದರೂ, ಶನಿವಾರ ಬೆಳಗ್ಗೆ ಠಾಣೆಗೆ ಹಾಜರಾಗುವಂತೆ ಸೂಚಿಸಿ ಕಳಿಸಿದ್ದರು.

ಸತೀಶ ಪೂಜಾರಿಗೆ ಪೊಲೀಸರು ಮನೆಗೆ ಕಳಿಸಿದ್ದಾರೆಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದವರಿಗೆ ಮತ್ತೆ ಸತೀಶ್‌ ಅವರನ್ನು ಠಾಣೆಗೆ ಕರೆಸಿಕೊಂಡಿದ್ದಾರೆಂಬ ವಿಷಯ ಶಾಕ್ ಆಗಿತ್ತು. ಶನಿವಾರ ಬೆಳಗ್ಗೆ ಸತೀಶ ಪೂಜಾರಿ, ರಾಜಶೇಖರ ನಾಗಪ್ಪ, ಎಸ್.ಟಿ.ವೀರೇಶ, ಆರ್.ಎಲ್.ಶಿವಪ್ರಕಾಶ, ಸಂಪತ್ ಠಾಣೆಗೆ ಹೋಗಿ, ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಸ್ವಲ್ಪ ಹೊತ್ತಿನ ನಂತರ ಎಲ್ಲರನ್ನೂ ಪೊಲೀಸರು ಬಿಟ್ಟು ಕಳಿಸಿದ್ದರಿಂದ ಸದ್ಯಕ್ಕೆ ಪರಿಸ್ಥಿತಿ ತಿಳಿಗೊಂಡಿದೆ.

ನಗರದ ಮಟ್ಟಿಕಲ್ಲು ಬಳಿ ಸ್ವಾತಂತ್ರ್ಯ ವೀರ ಸಾವರ್ಕರ್‌ ಯುವಕರ ಬಳಗ ಶ್ರೀ ಗಣೇಶೋತ್ಸವ ಅಂಗವಾಗಿ ಹಿಂದೂ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್‌ನನ್ನು ವ್ಯಾಘ್ರನಖ ಬಳಸಿ, ಸೀಳಿ ಹಾಕುವ ಚಿತ್ರವು ಪ್ರಚೋದನಾಕಾರಿಯಾಗಿದೆ ಎಂಬುದಾಗಿ ಯಾರೋ ಪೊಲೀಸ್ ಇಲಾಖೆಗೆ ಫ್ಲೆಕ್ಸ್ ಚಿತ್ರ ಸಮೇತ ಆಕ್ಷೇಪ ಕಳಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಫ್ಲೆಕ್ಸ್ ತೆರವಿಗೆ ಪೊಲೀಸರು ಮುಂದಾಗಿದ್ದರು. ಇದರಿಂದ ವಿವಾದ ಉಂಟಾಗಿತ್ತು.

ರಾತ್ರೋರಾತ್ರಿ ಛತ್ರಪತಿ ಶಿವಾಜಿ ಮಹಾರಾಜರ ಫ್ಲೆಕ್ಸ್ ತೆರವಿಗೆ ಬಂದ ಪೊಲೀಸರಿಗೆ ಸ್ಥಳೀಯ ನಿವಾಸಿಗಳು, ಗೆಳೆಯರ ಬಳಗದವರು, ಹಿಂದೂ ಮುಖಂಡರು, ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಷಯ ತಿಳಿದ ಸತೀಶ ಪೂಜಾರಿ, ಮಾಜಿ ಮೇಯರ್ ಎಸ್.ಟಿ.ವೀರೇಶ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಪಾಲಿಕೆ ಮಾಜಿ ವಿಪಕ್ಷ ನಾಯಕ ಆರ್.ಎಲ್. ಶಿವಪ್ರಕಾಶ ಸೇರಿದಂತೆ ಅನೇಕ ಮುಖಂಡರು, ಸಂಘ ಪರಿವಾರದ ಮುಖಂಡರು ಮಟ್ಟಿಕಲ್ಲಿಗೆ ಭೇಟಿ ನೀಡಿದ್ದರು.

- - -

(ಬಾಕ್ಸ್‌) * ಸತೀಶ ವಿರುದ್ಧ ವ್ಯವಸ್ಥಿತ ಪಿತೂರಿ: ವೀರೇಶ

ದಾವಣಗೆರೆ: ಹಿಂದೂ ಜಾಗರಣಾ ವೇದಿಕೆ ಯುವ ಮುಖಂಡ ಸತೀಶ ಪೂಜಾರಿ ವಿರುದ್ಧ ಕೆಲವೊಂದು ವ್ಯವಸ್ಥಿತ ಪಿತೂರಿ ನಡೆಯುತ್ತಿದ್ದು, ರಾಜಕೀಯ ಕಾರಣವೂ ಇರಬಹುದು ಎಂದು ಬಿಜೆಪಿ ಯುವ ಮುಖಂಡ, ಮಾಜಿ ಮೇಯರ್ ಎಸ್.ಟಿ. ವೀರೇಶ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ ಪೂಜಾರಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆಂದು ಪೊಲೀಸರು ಹೇಳುತ್ತಿದ್ದಾರೆ. ಹಿಂದೂ ಸಂಘಟನೆ, ಹಿಂದೂ ಮುಖಂಡರು, ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಪೊಲೀಸರ ಮೂಲಕ ಕೆಲವೊಂದು ಶಕ್ತಿಗಳು ಕೆಲಸ ಮಾಡುತ್ತಿವೆ ಎಂದರು.

ಸತೀಶ ಪೂಜಾರಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದ ವಿಚಾರಕ್ಕೆಸಂಬಂಧಿಸಿದಂತೆ ವಕೀಲರ ಸಲಹೆ ಪಡೆದು, ಕಾನೂನು ಹೋರಾಟ ಮಾಡುತ್ತೇವೆ. ಬೇರೆ ಬೇರೆ ಕಾರಣಗಳನ್ನು ಪೊಲೀಸರು ನೀಡುತ್ತಿದ್ದಾರೆ. ನಾವು ಸಾಕ್ಷ್ಯಗಳನ್ನು ಕೇಳುತ್ತಿದ್ದೇವೆ. ಪೊಲೀಸ್ ಇಲಾಖೆ ಬಳಸಿ, ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸ ಇದಷ್ಟೇ ಎಂದು ಆರೋಪಿಸಿದರು.

ಈಗಾಗಲೇ ಸಂಘ ಪರಿವಾರ, ಬಿಜೆಪಿಯ ರಾಜ್ಯ ನಾಯಕರ ಜೊತೆ ಮಾತಾನಾಡಿದ್ದೇವೆ. ಸತೀಶ ಪೂಜಾರಿಯನ್ನು ವಶಕ್ಕೆ ಪಡೆದ ಬಗ್ಗೆ ರಾಜ್ಯಮಟ್ಟದಲ್ಲಿ ಹೋರಾಟ ಆಗುತ್ತದೆ. ಇದುವರೆಗೂ ಶ್ರೀ ಗಣೇಶೋತ್ಸವದಲ್ಲಿ ಯಾವುದೇ ತೊಂದರೆ ಆಗಬಾರದೆಂದು ಸಮಾಧಾನದಿಂದಲೇ ಇದ್ದೇವೆ. ಪೊಲೀಸ್ ಇಲಾಖೆಯೂ ಹೀಗೆಲ್ಲಾ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

- - - (ಟಾಪ್‌ ಕೋಟ್‌) ಹಿಂದೂ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್‌ನನ್ನು ವಧೆ ಮಾಡಿದ್ದು ಐತಿಹಾಸಿಕ ಘಟನೆ. ಅದೇ ಘಟನೆಯ ಚಿತ್ರ ಅದಾಗಿದೆಯೇ ಹೊರತು ಅದನ್ನೇನು ನಾವು ಕ್ರಿಯೇಟ್ ಮಾಡಿದ್ದಲ್ಲ. ಅನಿಮೇಟೆಡ್ ಚಿತ್ರವೂ ಅದಲ್ಲ. ಐತಿಹಾಸಿಕ ಘಟನೆಯ ಚಿತ್ರ ಹಾಕುವುದಕ್ಕೂ ಹೀಗೆ ಆಕ್ಷೇಪ, ಪೊಲೀಸ್ ಬಲ ಬಳಸುತ್ತಾರೆಂದರೆ ಏನು ಹೇಳಬೇಕು?

- ಎಸ್.ಟಿ.ವೀರೇಶ, ಯುವ ಮುಖಂಡ, ಬಿಜೆಪಿ.

- - -