ಸಾರಾಂಶ
ಕನ್ನಡದ ಮೊದಲ ವಾಕ್ಚಿತ್ರ ಸತಿಸುಲೋಚನ ಬಿಡುಗಡೆ ಆಗಿ 90 ವರ್ಷ ಸಂದ ಹಿನ್ನೆಲೆಯಲ್ಲಿ ಲಾಂಛನವನ್ನು ಬಿಡುಗಡೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡದ ಮೊದಲ ವಾಕ್ಚಿತ್ರ ಸತಿಸುಲೋಚನ ತೆರೆಕಂಡು ಮಾರ್ಚ್ 3ಕ್ಕೆ 90 ವರ್ಷಗಳಾದ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಚಿತ್ರೋದ್ಯಮದ ಹಿರಿಯರು ‘ಸಿನಿ 90’ ಲಾಂಛನ ಅನಾವರಣ ಮಾಡಿದರು.ಹಿರಿಯ ಕಲಾವಿದರಾದ ಗಿರಿಜಾ ಲೋಕೇಶ್, ಶ್ರೀನಾಥ್, ಉಮಾಶ್ರೀ, ಚಿತ್ರ ನಿರ್ದೇಶಕ ಸಾಯಿಪ್ರಕಾಶ್, ಜೋಸೈಮನ್, ನಿರ್ಮಾಪಕ ಸಾ.ರಾ.ಗೋವಿಂದು, ಪ್ರದರ್ಶಕರ ಸಂಘದ ಕೆ.ವಿ.ಚಂದ್ರಶೇಖರ್, ಚಿನ್ನೇಗೌಡ, ಥಾಮಸ್ ಡಿಸೋಜಾ, ಎನ್.ಆರ್.ಕೆ.ವಿಶ್ವನಾಥ್ ಮುಂತಾದವರು ಲಾಂಛನ ಅನಾವರಣ ಮಾಡಿದರು,
ಕನ್ನಡ ಚಲನ ಚಿತ್ರೋದ್ಯಮದ ತೊಂಭತ್ತು ದಶಕಗಳ ಈ ಸಂಭ್ರಮಾಚರಣೆಯನ್ನು ಸಿನಿ 90 ಹೆಸರಿನಲ್ಲಿ ಇದೇ ಆಗಸ್ಟ್ ತಿಂಗಳಲ್ಲಿ ಅದ್ಧೂರಿಯಾಗಿ ಆಚರಿಸಲು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ.ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಮಾತನಾಡಿ, ಇಡೀ ಚಿತ್ರೋದ್ಯಮದ ನೆರವಿನಿಂದ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರರಂಗ ತನ್ನ ಹಿರಿಮೆಯನ್ನು ಸಾರುತ್ತಿದೆ. ಇದೇ ಹೊತ್ತಿನಲ್ಲಿ ಚಿತ್ರರಂಗದ 90 ವರ್ಷಗಳ ಸಂಭ್ರಮ ಬಂದಿರುವುದು ವಿಶೇಷ ಎಂದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು, ಚಿತ್ರರಂಗದ ಹಲವರು ಹಾಜರಿದ್ದರು.