ಬೌದ್ಧಿಕ ಜಗತ್ತಿಗೆ ಸತ್ಪುರುಷರೇ ಜ್ಯೋತಿ: ಮುರುಘಾ ಶ್ರೀ

| Published : Feb 17 2025, 12:32 AM IST

ಸಾರಾಂಶ

ಬೀದರ್: ದೃಶ್ಯ ಹಾಗೂ ಅದೃಶ್ಯ ಜಗತ್ತಿಗೆ ಸೂರ್ಯ, ಚಂದ್ರ ವಿದ್ಯುತ್‌ ದೀಪಗಳು ಬೆಳಕು ಕೊಡುವಂತೆ, ಬೌದ್ಧಿಕ ಜಗತ್ತಿಗೆ ಸತ್ಪುರುಷರೆ ಜ್ಯೋತಿ ಎಂದು ಚಿತ್ರದುರ್ಗ ಮುರುಘಾ ಬ್ರಹನ್ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ನುಡಿದರು.

ಬೀದರ್: ದೃಶ್ಯ ಹಾಗೂ ಅದೃಶ್ಯ ಜಗತ್ತಿಗೆ ಸೂರ್ಯ, ಚಂದ್ರ ವಿದ್ಯುತ್‌ ದೀಪಗಳು ಬೆಳಕು ಕೊಡುವಂತೆ, ಬೌದ್ಧಿಕ ಜಗತ್ತಿಗೆ ಸತ್ಪುರುಷರೆ ಜ್ಯೋತಿ ಎಂದು ಚಿತ್ರದುರ್ಗ ಮುರುಘಾ ಬ್ರಹನ್ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ನುಡಿದರು.ಬಸವಕೇಂದ್ರ ಹಾಗೂ ವಚನಾನುಭವ ವೇದಿಕೆ ಸಹಯೋಗದೊಂದಿಗೆ ನಗರದಲ್ಲಿ ಆಯೋಜಿಸಿದ ಒಕ್ಕಲಿಗ ಮುದ್ದಣ್ಣ ಉದ್ಯಾನ ವನ ಉದ್ಘಾಟನೆ ಹಾಗೂ ಚಿನ್ಮಯ ಜ್ಞಾನಿ ಚನ್ನಬಸವಣ್ಣ ಸಂಸ್ಮರಣೆ ನಿಮಿತ್ತ ಬೆಳದಿಂಗಳೂಟ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನಮ್ಮಲ್ಲಿ ಬೌದ್ಧಿಕ ಜಗತ್ತಿದೆ. ಅದನ್ನು ಬೆಳಗಿಸಿದವರು ಶರಣರು. ಜಗತ್ತಿನಲ್ಲಿ ಬಡಿದಾಟವಿದೆ ಇದರಿಂದ ಬದುಕು ಬಂಡಾಟವಾಗಿದೆ. ನಮಗಿಂದು ಒಳನೋಟವಿಲ್ಲ ಒಡನಾಟವಿಲ್ಲ ಎಂದರು.ಬಸವಾದಿ ಶರಣರಿಗೆ ಅನುಭವ ಮಂಟಪದ ಮೂಲಕ ಒಡನಾಟ, ಒಳನೋಟವಿತ್ತು. ನಮ್ಮೆಲ್ಲರ ಬದುಕಿನ ಕತ್ತಲೆ ಕಳೆಯಬೇಕಾದರೆ ಅಜ್ಞಾನ ಅಂಧಕಾರ ಹೊಡೆದೋಡಿಸಬೇಕು. ಇದು ಜೀವನದಲ್ಲಿ ಹಾಸು ಹೊಕ್ಕಾಗಿಸಿ ಕೊಳ್ಳಲು ಚಿನ್ಮಯ ಜ್ಞಾನಿ ಚನ್ನಬಸವಣ್ಣನವರು ಪ್ರತಿಪಾದಿಸಿದ ಲಿಂಗಾರ್ಚನೆ, ಲಿಂಗ ನಿರೀಕ್ಷಣೆ, ಲಿಂಗಧ್ಯಾನದಲ್ಲಿ ತೊಡಗಿಸಿ ಕೊಳ್ಳಬೇಕು. ಇದರಿಂದ ಬದುಕು ಹಸನಾಗಿ ಋಣಾತ್ಮಕ ವಿಚಾರ ಕರಗಿ ವಿಶಿಷ್ಟ ಅನುಭವವಾಗಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಕರ್ನಾಟಕ ಪ.ಪೂ.ಕಾಲೇಜಿನ ಪ್ರಾಚಾರ್ಯರಾದ ಡಾ.ಬಸವರಾಜ ಬಲ್ಲೂರ ಅನುಭಾವ ನೀಡಿ, ವಚನ ಚಳುವಳಿಗೆ ಸೈದ್ಧಾಂತಿಕ ನೆಲೆಗಟ್ಟು ಕೊಟ್ಟವರು ಚನ್ನಬಸವಣ್ಣನವರು. ಶರಣ ಷಟಸ್ಥಲ ತತ್ವದ ರೂವಾರಿ ಚನ್ನಬಸವಣ್ಣ. ಪಂಚಾಚಾರ, ಷಟ್ಸಸ್ಥಲ್, ಅಷ್ಠಾವರಣ ಬಸವ ತತ್ವದ ಮೂಲಾಧಾರ. ವಚನಗಳನ್ನು ಅಚ್ಚುಕಟ್ಟಾಗಿ ಒಂದೆಡೆ ಇಟ್ಟು ಅವುಗಳನ್ನು ಸಂರಕ್ಷಣೆ ಮಾಡಿದ ಮಹಾ ಅನುಭಾವಿ. ತನ್ನ ಅತ್ಯಂತ ಚಿಕ್ಕ ವಯಸ್ಸಿನಲ್ಲೆ ಹಿರಿದಾದ ಜ್ಞಾನ ಪಡೆದವರಾಗಿದ್ದರು ಎಂದರು.

ಹುಲಸೂರ ಗುರುಬಸವೇಶ್ವರ ಸಂಸ್ಥಾನ ಮಠದ ಡಾ.ಶಿವಾನಂದ ಮಹಾಸ್ವಾಮೀಜಿ ನೇತೃತ್ವ ವಹಿಸಿದ್ದರು. ಇದೇ ವೇಳೆ ಡಾ.ಶಿವಮೂರ್ತಿ ಶರಣರ ಮೇಲೆ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದ ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮಿ, ವಚನ ವಿಜಯೋತ್ಸವದ ಕಾರ್ಯಾಧ್ಯಕ್ಷರಾಗಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ ಕಾಜಿ ವಿಶ್ವನಾಥ, ಜಗನ್ನಾಥ ಶಿವಯೋಗಿ, ಬಸವ ಚಾಮರೆಡ್ಡಿ ಅವರನ್ನು ಬಸವ ಕೇಂದ್ರದಿಂದ ಗೌರವಿಸಲಾಯಿತು.

ಬಸವ ಕೇಂದ್ರ ಅಧ್ಯಕ್ಷ ಶರಣಪ್ಪ ಮಿಠಾರೆ ಅಧ್ಯಕ್ಷತೆ ವಹಿಸಿದ್ದರು. ವಚನಾನುಭವ ವೇದಿಕೆಯ ಪ್ರಮುಖರಾದ ಲಿಂಗಾರ್ತಿ ನಾವದಗೇರೆ ಪ್ರಾಸ್ತವಿಕವಾಗಿ ಮಾತನಾಡಿದರು.ನಗರಸಭೆ ಸದಸ್ಯ ಶಶಿಧರ ಹೊಸಹಳ್ಳಿ, ಬಸವರಾಜ ಭತಮೂರ್ಗೆ, ಬಸವರಾಜ ಬುಳ್ಳಾ, ಆನಂದೆ ವಿಜಯಕುಮಾರ, ಸೋಮಶೇಖರ ಪಾಟೀಲ, ಸೋಮನಾಥ ಕಂದಗೂಳೆ, ಶ್ರೀಕಾಂತ ಸ್ವಾಮಿ, ಅನೀಲಕುಮಾರ ಪನ್ನಾಳೆ, ಕರುಣಾ ಶಟಕಾರ ಉಪಸ್ಥಿತರಿದ್ದರು.ಸುರೇಶ ಚನ್ನಶೆಟ್ಟಿ ಸ್ವಾಗತಿಸಿದರು. ಶಿವಶಂಕರ ಟೋಕರೆ ನಿರೂಪಿಸಿದರು. ಶಿವಕುಮಾರ ಸಾಲಿ ವಂದಿಸಿದರು.